Breaking News

ಕೃಷಿ ಸಾಲ ಮಿತಿ 5 ಲಕ್ಷಕ್ಕೆ ಏರಿಕೆ: ಶೂನ್ಯ ಬಡ್ಡಿ- ಮುಖ್ಯಮಂತ್ರಿಗಳಿಂದ ಸುತ್ತೋಲೆ.

ಪ್ರತಿಧ್ವನಿ ಯಲ್ಲಾಪುರ : ರೈತರಿಗೆ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುತ್ತಿರುವ ಸಾಲದ ಮಿತಿಯನ್ನು 5ಲಕ್ಷಕ್ಕೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂದೇಶವನ್ನು ನೀಡಿದ್ದು, ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರ ಕಛೇರಿಯಿಂದ ಸುತ್ತೋಲೆಯನ್ನು ಸಹ ಹೊರಡಿಸಲಾಗಿದೆ.

2023-24ರಲ್ಲಿ ಶೂನ್ಯ ಬಡ್ಡಿ ದರದ ಬೆಳೆ ಸಾಲದ ಮಿತಿಯನ್ನು ಅಂದಿನ  ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರವು 3ರಿಂದ 5ಲಕ್ಷಕ್ಕೆ ಹೆಚ್ಚಿಸಿತ್ತು. ಆದರೆ ನಬಾರ್ಡ್ ಇದಕ್ಕೆ ಅಗತ್ಯವಾಗಿರುವಂತಹ ಮೊತ್ತವನ್ನು ಬಿಡುಗಡೆಗೊಳಿಸದ ಹಿನ್ನೆಲೆಯಲ್ಲಿ ಹಲವಾರು ರೈತರು ಯೋಜನೆಯಿಂದ ವಂಚಿತರಾಗುವಂತಾಯಿತು. ಅಲ್ಲದೆ ರೈತರಿಗಾಗಿ ಕೆಲವು ಸಹಕಾರಿ ಸಂಘಗಳು ತಮ್ಮ ಸಂಘದ ಸ್ವಂತ ನಿಧಿಯಿಂದ ಸಾಲವನ್ನು ನೀಡುವ ಮೂಲಕ ಸಮಸ್ಯೆಗೆ ಸಿಲುಕಿಕೊಳ್ಳುವಂತಾಗಿತ್ತು.

ನಬಾರ್ಡ್ ನಿಂದ ಹಣವು ಬಿಡುಗಡೆಗೊಳ್ಳದ ಕಾರಣದಿಂದ ಸಹಕಾರಿ ಸಂಘಗಳು ಸಾಲ ನೀಡಿದ ರೈತರಿಗೆ ಹಣದ ಮರುಪಾವತಿಯ ಸಂದರ್ಭದಲ್ಲಿ ಬಡ್ಡಿಯನ್ನು ಕಟ್ಟುವಂತೆ ತಿಳಿಸಿತ್ತು. ಆದರೆ ರೈತರು ಬಡ್ಡಿಯ ಹಣವನ್ನು ಪಾವತಿಸಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಈ ರೀತಿಯ ಸಮಸ್ಯೆಗಳು ಮತ್ತೊಮ್ಮೆ ತಲೆದೋರದಂತೆ ಮಾಡಲು ಸರ್ಕಾರವು ಸಹಕಾರಿ ಇಲಾಖೆಯಿಂದ ಸುತ್ತೋಲೆಯನ್ನು ಹೊರಡಿಸಿದ್ದು 2026-27ನೇ ಸಾಲಿನಲ್ಲಿ ರಾಜ್ಯದ ರೈತರಿಗಾಗಿ ಫ್ಯಾಕ್ಸ್ ಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ನೀಡುವಂತಹ ಕೃಷಿ 5ಲಕ್ಷ ರೂಪಾಯಿವರೆಗಿನ ಕೃಷಿ ಸಾಲ ಹಾಗೂ ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ ದುಡಿಯುವಂತಹ ಬಂಡವಾಳ ಸಾಲವನ್ನು ಶೇಕಡ 3ರಷ್ಟು ಬಡ್ಡಿ ದರದಲ್ಲಿ ನೀಡುವಂತಹ 15 ಲಕ್ಷ ರೂಪಾಯಿಗಳ ಮಧ್ಯಮಾವಧಿ ಸಾಲವನ್ನು ವಿತರಿಸುವಂತೆ ತಿಳಿಸಲಾಗಿದೆ.

ಹೊಸ ನಿಯಮಗಳು ಏನೇನು?

ಹೊಸ ಸುತ್ತೋಲೆಯ ಪ್ರಕಾರ ಒಂದು ವರ್ಷ ಅವಧಿಯ ಶೂನ್ಯ ಬಡ್ಡಿ ದರದ ಸಾಲದ ಹೆಚ್ಚುವರಿ ಮೊತ್ತವನ್ನು ಸಾಲಗಾರರು ಸಾಲ ನವೀಕರಣ ಅವಧಿಯ ಬಳಿಕ ಮತ್ತೆ ಪಡೆಯುವ ವೇಳೆ ಫ್ಯಾಕ್ಸ್ ಗಳಿಂದ ನೀಡಬಹುದಾಗಿದೆ ಎಂದು ತಿಳಿಸಲಾಗಿದೆ. ಸರ್ಕಾರ ನಿಗದಿಪಡಿಸಿರುವ ಗುರಿಯನ್ನು ಯಾವುದೇ ಫ್ಯಾಕ್ಸ್ ಹಾಗೂ ತಾಲ್ಲೂಕುಗಳಿಗೆ ತಾರತಮ್ಯ ಮಾಡದೆ ಹಂಚಿಕೆ ಮಾಡಬೇಕು. ಕನಿಷ್ಠ ಶೇಕಡ 10ರಷ್ಟು ಹೊಸ ಸದಸ್ಯರಿಗೆ, ಶೇಕಡ 24.10ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ಸಾಲವನ್ನು ವಿತರಿಸುವಂತೆ ನಿರ್ದೇಶನವನ್ನು ನೀಡಲಾಗಿದೆ. ಇದರೊಂದಿಗೆ ನಬಾರ್ಡ್ ನಿಂದ ಆದ್ಯತಾ ಕೃಷಿ ಮತ್ತು ಕೃಷಿ ಸಂಬಂಧಿತ ದೀರ್ಘಾವಧಿ ಸಾಲಗಳಿಗೆ ಕಡಿಮೆ ದರದಲ್ಲಿ ದೊರೆಯುವ ಪುನರ್ಧನ ಸೌಲಭ್ಯ ಬಳಕೆ ಮಾಡಿಕೊಳ್ಳುವಂತೆ ಬ್ಯಾಂಕ್ ಗಳಿಗೆ ಸೂಚಿಸಲಾಗಿದೆ. ಕೆಲವೊಂದು ಸಹಕಾರಿ ಸಂಘಗಳು ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಕುರಿತು ತಿಳಿಸಿದ್ದರೆ, ಮತ್ತೆ ಕೆಲವು ಸಹಕಾರಿ ಸಂಘಗಳು ನಬಾರ್ಡ್ ನಿಂದ ಮೊತ್ತವು ಬಿಡುಗಡೆಗೊಂಡ ಬಳಿಕ ಸಾಲವನ್ನು ವಿತರಿಸುವುದಾಗಿ ಮಾಹಿತಿ ನೀಡಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ದೇಶದ ಪ್ರಧಾನಿ,ಅರಣ್ಯ ಸಚಿವರು ಮತ್ತು ಸಚಿವಾಲಯದ ಕಾರ್ಯದರ್ಶಿಯವರಿಗೆ ಪಶ್ಚಿಮ ಘಟ್ಟಗಳ ವಿಚಾರದಲ್ಲಿ ಮದ್ಯ ಪ್ರವೇಶಿಸುವಂತೆ ಚಂದ್ರಕಾಂತ ಕೊಚರೇಕರ್ ಮನವಿ

ಪ್ರತಿಧ್ವನಿ ಯಲ್ಲಾಪುರ :  ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಸಂಬಂಧ 27-07-2026ರಂದು …

Leave a Reply

Your email address will not be published. Required fields are marked *