
ಪ್ರತಿಧ್ವನಿ ಯಲ್ಲಾಪುರ : ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಸಂಬಂಧ 27-07-2026ರಂದು ಹೊರಡಿಸಲಾದ ಅಧಿಸೂಚನೆಗೆ ನಮ್ಮ ಆಕ್ಷೇಪಣೆಯನ್ನು ಪರಿಗಣಿಸಿ, ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಜಿಲ್ಲಾ ಅರಣ್ಯ ಸಾಗುವಳಿದಾರರ ಜಿಲ್ಲಾ ವೇದಿಕೆ ಅಧ್ಯಕ್ಷ ಚಂದ್ರಕಾಂತ ಕೋಚರೆಕರ್ ಅವರು
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಭಾರತ ಸರ್ಕಾರ, ನವದೆಹಲಿಯ ಕಾರ್ಯದರ್ಶಿಗಳಿಗೆ ಲಿಖಿತ ರೂಪದಲ್ಲಿ ಪತ್ರ ಬರೆದಿದ್ದಾರೆ.

ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ (Eco-Sensitive Area – ESA) ಘೋಷಿಸುವ ಸಂಬಂಧ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಹೊರಡಿಸಿರುವ ಹಿಂದಿನ ಅಧಿಸೂಚನೆ ಹಾಗೂ ಡಾ. ಕಸ್ತೂರಿರಂಗನ್ ಸಮಿತಿಯ ವರದಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೆಳಕಂಡ ಅಂಶಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ.

ಪಶ್ಚಿಮ ಘಟ್ಟ ಪ್ರದೇಶಕ್ಕೆ ಸಂಬಂಧಿಸಿದಂತೆ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ ಅಡಿಯಲ್ಲಿ ಹೆಚ್ಚಿನ ಪ್ರದೇಶವನ್ನು ಸೇರಿಸಲಾಗಿದೆ. ಅಧಿಸೂಚನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶದ ಸುಮಾರು 567 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ.

ಆದರೆ ಇತರ ರಾಜ್ಯಗಳ ESA ವ್ಯಾಪ್ತಿಗೆ ಸೇರ್ಪಡೆಯಾಗಿರುವ ಗ್ರಾಮಗಳಿಗೆ ಹೋಲಿಸಿದರೆ, ಉತ್ತರ ಕನ್ನಡ ಜಿಲ್ಲೆಯ ESA ವ್ಯಾಪ್ತಿಗೆ ಒಳಪಡಿಸಲಾದ ಗ್ರಾಮಗಳು ಹೆಚ್ಚಿನ ಜನಸಂಖ್ಯೆ ಹೊಂದಿದ್ದು, ಇಲ್ಲಿನ ಜನರು ಹಲವು ತಲೆಮಾರುಗಳಿಂದ ವಾಸಿಸುತ್ತಾ ಕೃಷಿ, ತೋಟಗಾರಿಕೆ ಹಾಗೂ ಇತರ ಸಾಂಪ್ರದಾಯಿಕ ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಆರು ರಾಜ್ಯಗಳ ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ESA ವ್ಯಾಪ್ತಿಯ ಒಟ್ಟು ಸುಮಾರು 60 ಲಕ್ಷ ಜನಸಂಖ್ಯೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯ ಪ್ರಸ್ತಾವಿತ 567 ಗ್ರಾಮಗಳಲ್ಲಿ ಸುಮಾರು 30% ಜನಸಂಖ್ಯೆ ವಾಸಿಸುತ್ತಿದ್ದಾರೆ. ಹೆಚ್ಚಿನ ಜನಸಾಂದ್ರತೆ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆ, ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳಿಂದಾಗಿ ESA ಅಧಿಸೂಚನೆಯ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಗ್ರಾಮಗಳ ಮೇಲೆ ಅತ್ಯಂತ ಗಂಭೀರವಾಗಲಿದೆ.

ಈ ಪ್ರದೇಶವನ್ನು ಸಂಪೂರ್ಣವಾಗಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸುವುದರಿಂದ, ಅನೇಕ ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ಸ್ಥಳೀಯ ನಿವಾಸಿಗಳಿಗೆ ತೀವ್ರ ಅನ್ಯಾಯವಾಗುತ್ತದೆ. ಸುಮಾರು 3 ಲಕ್ಷ ಅರಣ್ಯ ಭೂಮಿ ಸಾಗುವಳಿದಾರರು, ಅರಣ್ಯವಾಸಿಗಳು, ರೈತರು ಹಾಗೂ ಕೃಷಿ ಕಾರ್ಮಿಕರು ತಮ್ಮ ಭೂಮಿ ಮತ್ತು ಜೀವನೋಪಾಯ ಕಳೆದುಕೊಂಡು ನಿರಾಶ್ರಿತರಾಗುವ ಹಾಗೂ ಉದ್ಯೋಗವಿಲ್ಲದವರಾಗುವ ಪರಿಸ್ಥಿತಿ ಉಂಟಾಗಬಹುದು.
ಆದ್ದರಿಂದ, ಮೇಲ್ಕಂಡ ಕಾರಣಗಳನ್ನು ಪರಿಗಣಿಸಿ ಕೆಳಕಂಡ ಭೂಮಿ ಮತ್ತು ವರ್ಗಗಳಿಗೆ ಸೂಕ್ತ ವಿನಾಯಿತಿ ನೀಡುವಂತೆ ವಿನಮ್ರವಾಗಿ ಮನವಿ ಮಾಡುತ್ತೇವೆ:
ಕಂದಾಯ ಗ್ರಾಮಗಳು
ಪಟ್ಟಾ ಜಮೀನುಗಳು
ಕಂದಾಯ ಜಮೀನುಗಳು
ಗೋಮಾಳ ಜಮೀನುಗಳು
ಇತರೆ ಸಾಂಪ್ರದಾಯಿಕ ಅರಣ್ಯವಾಸಿಗಳ ಜಮೀನುಗಳು
ಕೃಷಿ ಮತ್ತು ಸಾಗುವಳಿ ಜಮೀನುಗಳು
ಅತಿಕ್ರಮಣ ಜಮೀನುಗಳು
ಶಾಶ್ವತ ಗುತ್ತಿಗೆ/ಲೀಸ್ ಜಮೀನುಗಳು
31-12-2015ರೊಳಗೆ ಅಸ್ತಿತ್ವದಲ್ಲಿದ್ದ ಬೆಟ್ಟಭೂಮಿ ಸಾಗುವಳಿ ಹಕ್ಕುಗಳು
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಸೇರಿದ ಜಮೀನುಗಳು
ಇತರೆ ಸಾಂಪ್ರದಾಯಿಕ ಅರಣ್ಯವಾಸಿಗಳ ಹಕ್ಕುಗಳು
ಕಾನೂನುಬದ್ಧವಾಗಿ ಭೂಮಿ ಹೊಂದಿರುವ ಅರ್ಹ ಸಾಗುವಳಿದಾರರ ಜಮೀನುಗಳು.
ಅದೇ ರೀತಿ, ಸ್ಥಳೀಯ ಸಾಂಪ್ರದಾಯಿಕ ಸಮುದಾಯದ ಜನರಿಗೆ ಇರುವ ದಾರಿ ಹಕ್ಕು, ನೀರಿನ ಹಕ್ಕು ಹಾಗೂ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನೈಸರ್ಗಿಕವಾಗಿ ಸಂಗ್ರಹವಾಗುವ ಮರಳು/ಮಣ್ಣಿನ ನಿಕ್ಷೇಪವನ್ನು ಕೈಯಿಂದ ತೆರವುಗೊಳಿಸುವಂತಹ ಸಾಂಪ್ರದಾಯಿಕ ಹಕ್ಕುಗಳನ್ನು ಸಹ ರಕ್ಷಿಸಬೇಕಿದೆ.

ಆದ್ದರಿಂದ ಪ್ರಧಾನಮಂತ್ರಿ ಹಾಗೂ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರ ಗಮನಕ್ಕೆ ಈ ವಿಷಯವನ್ನು ತಂದು, ಉತ್ತರ ಕನ್ನಡ ಜಿಲ್ಲೆಯ ಸುಮಾರು 10 ಲಕ್ಷ ನಿವಾಸಿಗಳ ಜೀವನ, ಜೀವನೋಪಾಯ ಮತ್ತು ಹಕ್ಕುಗಳನ್ನು ರಕ್ಷಿಸಲು ತಮ್ಮ ಕಚೇರಿಯ ಮೂಲಕ ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇವೆ. ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಮಹತ್ವದ ವಿಷಯಕ್ಕೆ ತಾವು ಪ್ರಥಮ ಆದ್ಯತೆ ನೀಡಿ, ಸೂಕ್ತ ರೀತಿಯಲ್ಲಿ ಮಧ್ಯಪ್ರವೇಶಿಸಿ ನ್ಯಾಯ ಒದಗಿಸುವಿರಿ ಎಂಬ ವಿಶ್ವಾಸ ಮತ್ತು ನಿರೀಕ್ಷೆಯಿದೆ. ಎಂದು ವಿನಮ್ರವಾಗಿ ವಿನಂತಿಸಿದ್ದಾರೆ.
ಪ್ರತಿಯನ್ನು ಅಗತ್ಯ ಕ್ರಮಕ್ಕಾಗಿ ನರೇಂದ್ರ ಮೋದಿಯವರು, ಪ್ರಧಾನಮಂತ್ರಿ, ಭಾರತ ಸರ್ಕಾರ, ನವದೆಹಲಿ. ಹಾಗೂ
ಭೂಪೇಂದ್ರ ಯಾದವ್, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು, ಭಾರತ ಸರ್ಕಾರ, ನವದೆಹಲಿ ಯವರಿಗು ರವಾನಿಸಲಾಗಿದೆ ಎಂದು ಮಾದ್ಯಮಕ್ಕೆ ಮಾಹಿತಿ ಬಿಡುಗಡೆ ಮಾಡಿದ್ದಾರೆ.

ತಾವು ಮತ್ತು ತಮ್ಮ ಭಾಗದ ರೈತರು ಅವರವರ ಹೆಸರು ನಮೂದಿಸಿದ ಈ ಮೇಲಿನ ಮಾದರಿಯ ಪತ್ರವನ್ನು ಬರೆದು ನಿಮ್ಮ, ನಿಮ್ಮ ಫೋನಿನ ಮೂಲಕ esz.mef @nic .in ಈ ವಿಳಾಸಕ್ಕೆ ಇ ಮೇಲ್ ಮೂಲಕ ಕೇಂದ್ರ ಸರ್ಕಾರಕ್ಕೆ ಕಸ್ತೂರಿ ರಂಗನ್ ವರದಿಯ ಯಥಾವತ್ ಅನುಷ್ಠಾನಕ್ಕೆ ನಿಮ್ಮ ಆಕ್ಷೇಪಣೆಯನ್ನು ನೇರವಾಗಿ ಸಲ್ಲಿಸಬೇಕಾಗಿ ಕೋರಿದೆ. ನಿಮ್ಮೆಲ್ಲರ ಒಗ್ಗಟ್ಟಿನ ಸಹಕಾರ ಜಿಲ್ಲೆಯ ರೈತರ ಹಿತರಕ್ಷಣೆಗಾಗಿ ಸರ್ವರು ಕೈಜೋಡಿಸಿ. ಚಂದ್ರಕಾಂತ ಕೊಚರೇಕರ ಹೊನ್ನಾವರ









Prathidvani Yellapura