Breaking News

ಯಾರು ಆ ಸಾಮಾನ್ಯ ಕಾರ್ಯಕರ್ತ ಯಲ್ಲಾಪುರ ಕ್ಷೇತ್ರದ ಬಿಜೆಪಿ ಚುಕ್ಕಾಣಿ ಹಿಡಿಯೋ ನಾಯಕ.??


ಕೇಬಲ್ ನಾಗೇಶ್, ಯಲ್ಲಾಪುರ..🖋
ಪ್ರತಿಧ್ವನಿ ಯಲ್ಲಾಪುರ : ರಾಜ್ಯದಲ್ಲಿ ಶೀಘ್ರವಾಗಿ ಬರಲಿದೆ ಸಾಲು ಸಾಲು ಚುನಾವಣೆಗಳ ಪರ್ವ. ರಾಜಕೀಯ ಪಕ್ಷಗಳ ತಯಾರಿ ಒಳಗಿಂದೊಳಗೆ ಸಾಗುತ್ತಿದ್ದು ತೆರೆ ಮರೆಯಲ್ಲಿ ಬಾರಿ ಆಟಗಳೆ ನಡೆಯುತ್ತಿದೆ. ಅವುಗಳಲ್ಲಿ ಬಾರಿ ಸ್ವಾರಸ್ಯಕರವಾದ ಚರ್ಚೆಗೆ ಗುರಿಯಾಗುತ್ತಿರುವುದು ಮಾತ್ರ ಬರಲಿರುವ ಚುನಾವಣೆಗಳನ್ನು ಎದುರಿಸುವ ಬಿಜೆಪಿ ಪಾಳಯಕ್ಕೆ ರಣಧೀರನಾರು.??? ಎಂಬುದಾಗಿದೆ.


ಹಿಂದೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಡೆಯುತ್ತಿರುವ ಕಾಲಕ್ಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವವರೆಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ರೀತಿಯ ಪಕ್ಷ ಸಂಘಟನೆ ನಡೆಯುತ್ತಿತ್ತು.ನಂತರ ಬದಲಾದ ಸನ್ನಿವೇಶದಲ್ಲಿ ಉಪ ಚುನಾವಣೆ ಎದುರಿಸಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಾಗಿ ಶಿವರಾಮ ಹೆಬ್ಬಾರ್ ಆಯ್ಕೆಯಾದರು ಆ ಸಂದರ್ಭದಲ್ಲಿ ಪಕ್ಷ ಸಂಘಟನೆಯ ರೂಪ ಬದಲಾಯಿತು. ಮತ್ತೆ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಎದುರಾಯಿತು ಮತ್ತೆ ಬಿಜೆಪಿ ಯಿಂದ ಸ್ಪರ್ಧಿಸಿದ್ದ ಶಾಸಕ ಶಿವರಾಮ ಹೆಬ್ಬಾರ್ ಮತ್ತೆ ಗೆಲುವು ಸಾದಿಸಿದರಾದರು ಸ್ವಪಕ್ಷೀಯರ ಹುನ್ನಾರದಿಂದ ಪ್ರಯಾಸದ ಗೆಲುವಾಯಿತೆಂದು ಅಸಮದಾನಗೊಂಡು ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಲೆ ಪಕ್ಷದಿಂದ ದೂರ ಉಳಿದರು.

ಈ ಎಲ್ಲಾ ಬೆಳವಣಿಗೆಯ ನಡುವೆ ಬಿಜೆಪಿಯು ಸಂಘಟನಾ ಚತುರತೆಯ ನಾಯಕತ್ವ ಕಳೆದುಕೊಳ್ಳುತ್ತಾ ಸಾಗಿದ್ದು ಸುಳ್ಳಲ್ಲ. ಹಾಗೆಂದು ಮತಗಳಲ್ಲಿ ವ್ಯತ್ಯಾಸ ಆಗಲಿಲ್ಲ ಕಾರಣ ಅವೆಲ್ಲವು ಸಾಂಪ್ರದಾಯಿಕ ಮತಗಳೆ ಆಗಿದ್ದವು.
ಸದ್ಯ ಮೇಲಿನ ಎಲ್ಲಾ ಘಟನೆಗಳು ಗತಿಸಿ ಸಮಯ ಕಳೆದಿದ್ದು ಬರಲಿರುವ ಚುನಾವಣೆಗಳ ಪರ್ವದಲ್ಲಿ  ಬಿಜೆಪಿ ಯಂತಹ ರಾಷ್ಟ್ರೀಯ ಪಕ್ಷದ ಚುಕ್ಕಾಣಿ ಹಿಡಿದು ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಂಘಟನಾ ಚತುರತೆಯ ನಾಯಕತ್ವ ತೋರುವ ರಣಧೀರ ಯಾರು…ದಂಢನಾಯಕನಾರು….ಚಾಣಕ್ಯನಾರು ಎಂಬುದೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.


ಸದ್ಯದ ರಾಜ್ಯರಾಜಕೀಯ ಪರಿಸ್ಥಿತಿ ಅವಲೋಕಿಸಿದರೆ‌ ರಾಜ್ಯದಲ್ಲಿ ಅಧಿಕಾರದಲ್ಲಿರುವ ಇರುವ ಕಾಂಗ್ರೆಸ್ ಸರ್ಕಾರ ಜನಪರ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಸುತ್ತ ಬರುತ್ತಿರುವುದರಿಂದ ಕಾಂಗ್ರೆಸ್ ಸರ್ಕಾರದ ಮೇಲೆ  ಅಸಮಧಾನ ವ್ಯಕ್ತಪಡಿಸದ ರೀತಿಯಲ್ಲಿ ಜನರಿದ್ದಾರೆ. ಗ್ಯಾರಂಟಿ ಯೋಜನೆಯ ಫಲ ಲಭಿಸುವುದರಲ್ಲಿ ಅಲ್ಲಲ್ಲಿ ವ್ಯತ್ಯಾಸ ಆಗುತ್ತಿರುವುದರ ವಿರುದ್ದ ಅಸಮದಾನ ವ್ಯಕ್ತಪಡಿಸುತ್ತಿದ್ದಾರೆ ಹೊರತು ಸಂಪೂರ್ಣ ಗ್ಯಾರಂಟಿ ಯೋಜನೆಗಳನ್ನು ಜನರು ತಿರಸ್ಕರಿಸುತ್ತಿಲ್ಲ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಚುನಾವಣೆಗಳು ಎದುರಾಗುತ್ತಿದ್ದು ಇದೆಲ್ಲವನ್ನು ಮೆಟ್ಟಿನಿಂತು ಜನರಲ್ಲಿ ಭರವಸೆ ಮೂಡಿಸಿ ಚುನಾವಣೆಗಳನ್ನು ಚಾಕಚಕ್ಯತೆ ತೋರುವ ಪ್ರಭಲ ನಾಯಕ ಬಿಜೆಪಿಯಲ್ಲಿ ಯಾರಿದ್ದಾರೆ.??


ಕೆಲ ತಿಂಗಳ ಹಿಂದೆ ಯಲ್ಲಾಪುರದ ವೈಟಿಎಸ್ಎಸ್ ಮೈದಾನದಲ್ಲಿ ಬಿಜೆಪಿ ಜಿಲ್ಲಾ ಮಟ್ಟದ ಸಮಾವೇಶ ನಡೆದಿತ್ತು ಸಮಾವೇಶದಲ್ಲಿ ಪಾಲ್ಗೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಲ್ಲಾಪುರ ಕ್ಷೇತ್ರದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತರೊಬ್ಬರಿಗೆ ನಿಲ್ಲಿಸಿ ಗೆಲ್ಲಿಸುತ್ತೇನೆ ಎಂಬ ಭರವಸೆಯ ಮಾತುಗಳನ್ನಾಡಿದ್ದರು ಇದಾದ ಕೆಲವು ದಿನಗಳ ಕಾಲ ಕ್ಷೇತ್ರದಾದ್ಯಂತ ಆ ಸಾಮಾನ್ಯ ಕಾರ್ಯಕರ್ತ ಯಾರು ಎಂಬ ಚರ್ಚೆ ಜೊರಾಗಿತ್ತು.ಅಂದು ಉತ್ತರ ದೊರೆಯಲಿಲ್ಲ ಇಂದು ಸಹ ಯಾರೆಂದು ಸ್ಪಷ್ಟವಾಗಿ ಹೇಳಲಾಗುತ್ತಿಲ್ಲ ಆದರೆ ಸದ್ಯ ಕ್ಷೇತ್ರ ಬಿಜೆಪಿಯಲ್ಲಿ ವಿಶೇಷವಾಗಿ ಯಲ್ಲಾಪುರ ತಾಲೂಕಿನಲ್ಲಿ ಮೂವರ ಹೆಸರು ಕೇಳಿ ಬರುತ್ತಿದ್ದು ಯಾರು ಆ ಸಾಮಾನ್ಯ ಕಾರ್ಯಕರ್ತ ಎಂಬುದು ತಿಳಿಯದಾಗಿದೆ.


ಸಂಘದ ಹಿನ್ನೆಲೆ ಮಾಧ್ಯಮಕ್ಷೇತ್ರದಲ್ಲಿ ಚಿರಪರಿಚಿತ ಸದ್ಯ ಯಲ್ಲಾಪುರ ಬಿಜೆಪಿ ಮಂಡಲದಲ್ಲಿ ಕ್ರಿಯಾಶೀಲ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ.
ಸಂಘದ ಹಿನ್ನೆಲೆ, ಹಿಂದು ಫೈರ್ ಬ್ರಾಂಡ್ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಕೃಪೆ, ರಾಜ್ಯ ಮತ್ತು ರಾಷ್ಟ್ರೀಯ ಬಿಜೆಪಿ ನಾಯಕರ ಒಲವು, ವೀರಶೈವ ಲಿಂಗಾಯತ ಶಕ್ತಿ ಪೀಠ ರಂಭಾಪುರಿ ಶ್ರೀಗಳ ಆಶಿರ್ವಾದ ಇರುವ ಜಿಲ್ಲಾ ಬಿಜೆಪಿ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಲಿಂಗಯ್ಯ ಎಸ್ ಅಲ್ಲಯ್ಯನವರಮಠ.
ಜಿ.ಎಸ್.ಬಿ ಸಮುದಾಯದ ಉದಯೋನ್ಮುಖ ಯುವ ಉದ್ಯಮಿ, ಕೊಡುಗೈ ಧಾನಿ, ಗೋವಾ ಮುಖ್ಯಮಂತ್ರಿ ಡಾ,ಪ್ರಮೋದ್ ಸಾವಂತ್ ನಿಕಟವರ್ತಿ, ರಾಜ್ಯ ಮತ್ತು ರಾಷ್ಟ್ರೀಯ ಬಿಜೆಪಿ ನಾಯಕರಜೊತೆ ಒಡನಾಟ, ಯಲ್ಲಾಪುರ ಬಿಜೆಪಿ ಮಂಡಲದಲ್ಲಿ ಸದ್ಯ ಸಕ್ರಿಯರಾಗುತ್ತಿರುವ ಯುವ‌ನಾಯಕ ಬಾಲಕೃಷ್ಣ ನಾಯಕ್.
ಮೇಲಿನ ಮೂವರ ಹೆಸರು ಸದ್ಯದ ಪರಿಸ್ಥಿತಿಯಲ್ಲಿ ಮಂಚೂಣಿಯಲ್ಲಿ ಕಂಡುಬರುತ್ತಿದೆ ಆದರೆ ಯಾರು ಎಂಬುದನ್ನು ಕಾಲವೆ ಉತ್ತರಿಸಲಿದೆ.

ಹರಿಪ್ರಕಾಶ್ ಕೋಣೆಮನೆ ಕ್ಷೇತ್ರದ ಪ್ರಭಲ ಹಾಗು ಹೆಚ್ಚು ಮತದಾರರನ್ನೊಳಗೊಂಡ ಹವ್ಯಕ ಸಮಾಜಕ್ಕೆ ಸೇರಿದವರಾಗಿದ್ದು ರಾಜಕೀಯ ವಲಯದೊಂದಿಗೆ ಒಡನಾಟವಿದ್ದರು ಹೆಚ್ಚು ಕಂಡು ಬಂದದ್ದು ಮಾತ್ರ ಮಾದ್ಯಮ ಕ್ಷೇತ್ರದಲ್ಲಿ, ನಂತರ ತಾಲೂಕಿನ ಪ್ರತಿಷ್ಠಿತ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಒಡೆತನ ಪಡೆದ ನಂತರ ಮತ್ತಷ್ಟು ಕ್ರಿಯಾಶೀಲರಾಗಿ ಸಮಾಜದೊಂದಿಗೆ ಬೆರೆಯಲು ಪ್ರಾರಂಭಿಸಿದರು. ಮಾದ್ಯಮದಲ್ಲಿ ಕೆಲಸ ಮಾಡಿದ ಹಿನ್ನೆಲೆಯಲ್ಲಿ ರಾಜಕಾರಣದ ಬಗ್ಗೆ ತಿಳಿದವರೆ ಆಗಿದ್ದಾರೆ. ಸಂಘ ಪರಿವಾರದೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದು ಚುನಾವಣೆ ಕಾಲಘಟ್ಟಕ್ಕೆ ಅನುಕೂಲ ವಾತಾವರಣ ಸೃಷ್ಟಿಸಲಿದೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಶಿರಸಾ ನೆರವೇರಿಸುತ್ತಿದ್ದು ಇದು ರಾಜಕೀಯ ಲೆಕ್ಕಾಚಾರಕ್ಕೆ ಪೂರಕವಾಗಲಿದೆ.

ಶಿವಲಿಂಗಯ್ಯ ಎಸ್ ಅಲ್ಲಯ್ಯನವರಮಠ ಇತ್ತೀಚಿನ ವರ್ಷಗಳಲ್ಲಿ ಕೇಳಿ ಬರುತ್ತಿರುವ ಹೆಸರಾದರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಖಾನಾಪುರ ನೆಲದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ನಿಕಟ ಸಂಪರ್ಕಹೊಂದಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಕಟ್ಟಾ ಕಾರ್ಯಕರ್ತ, ಮಾಜಿ ಸಂಸದ ಹಿಂದುತ್ವದ ಫೈರ್ ಬ್ರಾಂಡ್ ರಾಜಕಾರಣಿ ಅನಂತ್ ಕುಮಾರ್ ಹೆಗಡೆ  ನಿಕಟವರ್ತಿ, ಬಸವಣ್ಣನವರ ಅನುಭವ ಮಠಪದ ಮಹತ್ವ ಮತ್ತು ಭಗವದ್ಗೀತೆಯ ಶ್ರೇಷ್ಟತೆಯನ್ನು ದೇಶ ವಿದೇಶಗಳಲ್ಲಿ ಪಸರಿಸುತ್ತಾ ಸದಾ ಬಿಜೆಪಿ ಹೈಕಮಾಂಡ್ ಸಂಪರ್ಕದಲ್ಲಿರುವ ಮತ್ತು ಉತ್ತರಪ್ರದೇಶದ ಮುಖ್ಯ ಮಂತ್ರಿ ಯೋಗಿ ಆಧಿತ್ಯನಾಥ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಕಾರ್ಯಕರ್ತ. ರಾಜ್ಯದ ಮಾಜಿ ಮುಖ್ಯ ಮಂತ್ರಿ ಬಿಜೆಪಿಯ ಪ್ರಶ್ನಾತೀತ ನಾಯಕ ಬಿ.ಎಸ್.ಯಡಿಯೂರಪ್ಪ ಅವರೆ ಸದಾ ತಲೆ ಬಾಗಿ‌ನಮಿಸಿ ಗೌರವಿಸುವ ವಿರಶೈವ ಲಿಂಗಾಯತ ಸಮುದಾಯದ ಪ್ರಭಾವಿ ಸ್ವಾಮಿಗಳಾದ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರುಗಳ ನಿಕಟ ಸಂಪರ್ಕ ಬಿಜೆಪಿ ನಾಯಕತ್ವಕ್ಕೆ ಪೂರಕವಾಗಲಿದೆ.


ಬಾಲಕೃಷ್ಣ ನಾಯಕ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಉದಯೋನ್ಮುಖ ಉದ್ಯಮಿ, ಕೊಡುಗೈ ಧಾನಿ, ಕಷ್ಟ ಎಂದು ಬಂದವರ ಕೈ ಬಿಡದೆ ಕೈಲಾದ ಸಹಾಯ ಮಾಡುತ್ತ ಯಲ್ಲಾಪುರ ತಾಲೂಕಿನಲ್ಲಿ ನೆಚ್ಚಿನ ಬಾಲಣ್ಣನಾಗಿ ಗುರುತಿಸಿಕೊಂಡಿದ್ದು ಸದ್ಯ ಕ್ಷೇತ್ರ ರಾಜಕಾರಣದ ಬಿಜೆಪಿ ವಲಯದಲ್ಲಿ ಬಾಲು ನಾಯಕ್ ಹೆಸರು ಪ್ರಭಲವಾಗಿ ಕೇಳಿ ಬರುತ್ತಿದೆ. ಒಂದು ಪಕ್ಚ ಸಂಘಟನೆಗೆ, ನಾಯಕತ್ವ ನಿಭಾಯಿಸಲು ಕೇವಲ ಒಳ್ಳೆತನ,ಹೆಸರು ಇದ್ದರೆ ಸಾಲದು ಆರ್ಥಿಕವಾಗಿ ಸಬಲತೆ ಇರಬೇಕು ಅದರಲ್ಲಿಯು ಅದು ಚುನಾವಣೆ ಕಾಲಕ್ಕೆ ಇನ್ನೂ ಹೆಚ್ಚಿನ ರೀತಿಯಲ್ಲಿ ಬೆನ್ನಿಗಿರಬೇಕು ಆ ವಿಚಾರದಲ್ಲಿ ಬಾಲಕೃಷ್ಣ ನಾಯಕ್ ಅವರ ಹಣಕಾಸಿನ ನೆಟ್ವರ್ಕ್ ತುಂಬಾ ವಿಶಾಲವಾಗಿದ್ದು ಚುನಾವಣೆಗೆ ಪೂರಕವಾಗಲಿದೆ. ವಿಶೇಷವಾಗಿ ಪಕ್ಕದ ಗೋವಾ ರಾಜ್ಯದ ಮುಖ್ಯ ಮಂತ್ರಿ ಡಾ,ಪ್ರಮೋದ್ ಸಾವಂತ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ಚುನಾವಣ ಸಮಯಕ್ಕೆ ಸಂಪೂರ್ಣ ಬಳಕೆಗೆ ಬರಲಿದೆ.

ಸದ್ಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷವಾಗಿ ಯಲ್ಲಾಪುರ ತಾಲೂಕಿನಲ್ಲಿ ಬಿಜೆಪಿ ನಾಯಕತ್ವಕ್ಕೆ ಚುನಾವಣಾ ದೃಷ್ಟಿಯಿಂದ ಪ್ರಭಲವಾಗಿ ಕೇಳಿ ಬರುತ್ತಿರುವ ಸಾಮಾನ್ಯ ಕಾರ್ಯಕರ್ತರ ಹೆಸರು ಇವರದ್ದಾಗಿದೆ. ಹಾಗೆಂದು ಇವರೆ ಎಂದು ಪಕ್ಕಾ ಹೇಳಲಾಗದು ರಾಜಕೀಯ ತನ್ನ ಬಣ್ಣವನ್ನು ಹೇಗು ಬದಲಿಸಬಹುದು. ಮುಂಡಗೋಡು ಮತ್ತು ಬನವಾಸಿ ಭಾಗಗಳಲ್ಲಿನ ನಾಯಕರ ಹೆಸರು ಯಾವುದಾದರು ಇರಲು ಬಹುದು. ಹಂತಿಮವಾಗಿ ಚುನಾವಣೆ ಹೊಸ್ತಿಲಲ್ಲಿ ಮಾತ್ರ‌ ಪಕ್ಷ ಸಂಘಟನೆಯ ದೃಷ್ಟಿಯಿಂದ ನಾಯಕತ್ವ ಘೋಷಣೆಯಾಗಲೇಬೇಕಿದೆ ಇಲ್ಲವಾದಲ್ಲಿ‌ ಪಕ್ಷ ಸಂಘಟನೆಗೆ ಗಡುಸುತನ ಬರದು ಎನ್ನುತ್ತಾರೆ ಸಾಮಾನ್ಯ ಕಾರ್ಯಕರ್ತರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಿಜೆಪಿ ವತಿಯಿಂದ ಸಂವಿಧಾನ ಶಿಲ್ಪಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ..

ಪ್ರತಿಧ್ವನಿ ಯಲ್ಲಾಪುರ: ಭಾರತದ ಸಂವಿಧಾನ ಶಿಲ್ಪಿ,ಸಾಮಾಜಿಕ ನ್ಯಾಯದ ಹರಿಕಾರರು,ಶೋಷಿತರ ದ್ವನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಭಾರತೀಯ ಜನತಾ ಪಾರ್ಟಿ …

Leave a Reply

Your email address will not be published. Required fields are marked *