Breaking News

ಶ್ರೀ ಸತ್ಯಸಾಯಿ ಪ್ರೇಮ ವಾಹಿನಿ ರಥಯಾತ್ರೆಗೆ ಅದ್ದೂರಿ ಸ್ವಾಗತ: ಛತ್ರಕೂರ್ವೆಯಲ್ಲಿ ಭಕ್ತಿ-ಭಾವದ ಮಹೋತ್ಸವ

ಪ್ರತಿಧ್ವನಿ ಯಲ್ಲಾಪುರ : ಶ್ರೀ ಸತ್ಯಸಾಯಿ ಬಾಬಾರವರ ಜನ್ಮಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಶ್ರೀ ಸತ್ಯಸಾಯಿ ಪ್ರೇಮಪ್ರವಾಹಿನಿ ರಥಯಾತ್ರೆ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಪುಟ್ಟಪರ್ತಿಯ ಪ್ರಶಾಂತಿ ನಿಲಯಂನಿಂದ ಹೊರಟ ಐದು ಪ್ರೇಮಪ್ರವಾಹಿನಿ ರಥಗಳು ದೇಶದಾದ್ಯಂತ ಸಂಚರಿಸುತ್ತಿದ್ದು ನಮ್ಮ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಂಚರಿಸಿ ಕುಮಟಾ ತಾಲೂಕಿಗೆ ಆಗಮಿಸಿದ ರಥವು ಛತ್ರಕೂರ್ವೆ ಗ್ರಾಮದಲ್ಲಿ ವಾಸ್ತವ್ಯ ಮಾಡುವುದರೊಂದಿಗೆ ಗ್ರಾಮದ ಜನತೆ ಪುನೀತರಾದದ್ದಲ್ಲದೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದ ವಾತಾವರಣವನ್ನು ಮೂಡಿಸಿತು.

ಮಾರ್ಚ್ 19 ರಂದು ಮಧ್ಯಾಹ್ನ ಸಂತೆಗದ್ದೆಯಿಂದ ಆರಂಭವಾದ ರಥಯಾತ್ರೆ ನಾಗೂರು ಕ್ರಾಸ್ ಮೂಲಕ ಭಕ್ತರ ಘೋಷಣೆಗಳ ನಡುವೆ ಭವ್ಯವಾಗಿ ಆಗಮಿಸಿತು. ಛತ್ರಕೂರ್ವೆ ಶ್ರೀ ಸತ್ಯಸಾಯಿ ಸೇವಾ ಸಮಿತಿಯವರು ನಾಗೂರು ಕ್ರಾಸ್‌ನಲ್ಲಿ ಪೂರ್ಣ ಕುಂಬ, ಹೂಮಾಲೆ ಮತ್ತು ಮಂಗಳ ವಾದ್ಯಗಳೊಂದಿಗೆ ಭಕ್ತಿಪೂರ್ವಕ ಸ್ವಾಗತ ಕೋರಿದರು. ಈ ಸಂದರ್ಭ ಭಕ್ತರು “ಸಾಯಿ ರಾಮ್” ಘೋಷಣೆಗಳಿಂದ ಆ ಪ್ರದೇಶವನ್ನು ಭಕ್ತಿಮಯಗೊಳಿಸಿದರು.

ಬಳಿಕ ಮಿರ್ಜಾನದಲ್ಲಿ ರಥದ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ಸೇರಿ ಪೂಜೆ ಸಲ್ಲಿಸಿದರು. ಇಲ್ಲಿ ಪ್ರಸಾದ ವಿತರಣೆ ನಡೆಸಲಾಗಿದ್ದು, ಭಕ್ತರಲ್ಲಿ ಭಕ್ತಿ-ಭಾವನೆ ಮತ್ತಷ್ಟು ಉಕ್ಕಿಬಂದಿತು. ನಂತರ ಕೋಟೆ ಕ್ರಾಸ್ ಮೂಲಕ ಮೆರವಣಿಗೆ ಸಾಗಿದ ರಥಯಾತ್ರೆ ಛತ್ರಕೂರ್ವೆಗೆ ಪ್ರವೇಶಿಸಿತು.

ಛತ್ರಕೂರ್ವೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಿದ್ದವು. ರುದ್ರ ಪಠಣ, ಭಜನೆ ಹಾಗೂ ಮಂಗಳಾರತಿ ಕಾರ್ಯಕ್ರಮಗಳು ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ಮೂಡಿಸಿದವು. ಅನ್ನಪ್ರಸಾದ ವ್ಯವಸ್ಥೆ ಸಮರ್ಪಕವಾಗಿ ಮಾಡಲಾಗಿದ್ದು, ಎಲ್ಲರೂ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಚಿಕ್ಕ ಮಕ್ಕಳಿಂದ ನಡೆದ ಛದ್ಮ ವೇಷ ಕಾರ್ಯಕ್ರಮವೂ ಗಮನ ಸೆಳೆಯಿತು.

ಇನ್ನೊಂದು ವಿಶೇಷ ಅಂಶವೆಂದರೆ, ನಾಗೂರು ಕ್ರಾಸ್‌ನಿಂದ ರಾಮನರ ಕ್ರಾಸ್ ತನಕ ನಡೆದ ಬೈಕ್ ರ‍್ಯಾಲಿ. ಮಹಿಳೆಯರು ಪೂರ್ಣ ಕುಂಭದೊಂದಿಗೆ ಸ್ವಾಗತ ಕೋರಿ, ಭಕ್ತರು ಶಿಸ್ತಿನಿಂದ ರಥಯಾತ್ರೆಯನ್ನು ಸಾಗಿಸಿದರು. ಈ ದೃಶ್ಯವು ಗ್ರಾಮೀಣ ಪ್ರದೇಶದಲ್ಲಿ ಭಕ್ತಿ ಮತ್ತು ಏಕತೆಯ ಪ್ರತೀಕವಾಗಿ ಮೂಡಿಬಂದಿತು.

ಮಾರ್ಚ್ 20ರಂದು ಬೆಳಗ್ಗೆ 8 ಗಂಟೆಗೆ ರಥಯಾತ್ರೆ ಸಿದ್ದಾಪುರದ ಕಡೆಗೆ ಮುಂದುವರಿಯಿತು. ಈ ರಥಯಾತ್ರೆ ಕೇವಲ ಧಾರ್ಮಿಕ ಕಾರ್ಯಕ್ರಮವಷ್ಟೇ ಅಲ್ಲ, ಸಮಾಜದಲ್ಲಿ ಪ್ರೀತಿ, ಸೇವೆ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುವ ಒಂದು ಆಧ್ಯಾತ್ಮಿಕ ಚಳವಳಿಯಾಗಿ ಪರಿಣಮಿಸಿದೆ.

ಒಟ್ಟಾರೆಯಾಗಿ, ಛತ್ರಕೂರ್ವೆಯಲ್ಲಿ ನಡೆದ ಈ ರಥಯಾತ್ರೆ ಭಕ್ತರ ಮನಗಳಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದ್ದು, ಶ್ರೀ ಸತ್ಯಸಾಯಿ ಬಾಬಾರವರ ಸಂದೇಶಗಳನ್ನು ಜನರಿಗೆ ಮತ್ತಷ್ಟು ಹತ್ತಿರ ಮಾಡಿದ ಮಹತ್ವದ ಕಾರ್ಯಕ್ರಮವಾಯಿತು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಿಜೆಪಿ ವತಿಯಿಂದ ಸಂವಿಧಾನ ಶಿಲ್ಪಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ..

ಪ್ರತಿಧ್ವನಿ ಯಲ್ಲಾಪುರ: ಭಾರತದ ಸಂವಿಧಾನ ಶಿಲ್ಪಿ,ಸಾಮಾಜಿಕ ನ್ಯಾಯದ ಹರಿಕಾರರು,ಶೋಷಿತರ ದ್ವನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಭಾರತೀಯ ಜನತಾ ಪಾರ್ಟಿ …

Leave a Reply

Your email address will not be published. Required fields are marked *