
ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಾರರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ‘ಹವಾಮಾನ ಆಧಾರಿತ ಬೆಳೆ ವಿಮೆ’ಯ ಎರಡನೇ ಕಂತಿನ ಮೊತ್ತವು ಯುಗಾದಿ ಹಬ್ಬದ ಈ ಶುಭ ಸಂದರ್ಭದಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲು ಪ್ರಾರಂಭವಾಗಿದೆ.
ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ ಬಾಕಿ ವಿಮಾ ಮೊತ್ತವು ಈಗ ಅರ್ಹ ಫಲಾನುಭವಿ ರೈತರಿಗೆ ಹಂತ ಹಂತವಾಗಿ ಬಿಡುಗಡೆಯಾಗುತ್ತಿದ್ದು, ನೇರ ನಗದು ವರ್ಗಾವಣೆ (DBT) ಮೂಲಕ ಪ್ರಕ್ರಿಯೆ ಮುಂದುವರಿಯಲಿದೆ. ಈಗಾಗಲೇ ಜಿಲ್ಲೆಯಾದ್ಯಂತ ಒಟ್ಟು 60 ಕೋಟಿ ರೂಪಾಯಿಗಳಷ್ಟು ಹಣ ಜಮೆಯಾಗಿದ್ದು, ಇದು ಜಿಲ್ಲೆಯ ಕೃಷಿಕ ಕುಟುಂಬಗಳಲ್ಲಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಜಿಲ್ಲೆಯ ಅಡಿಕೆ ಬೆಳೆಗಾರರು ಎಲೆ ಚುಕ್ಕಿ ರೋಗದ ಬಾಧೆ ಮತ್ತು ಇಳುವರಿ ಕುಂಠಿತದಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಇಂತಹ ಕಠಿಣ ಸಮಯದಲ್ಲಿ ಬಾಕಿ ಇದ್ದ ವಿಮೆ ವಿತರಣೆ ಆರಂಭವಾಗಿರುವುದು ಕೃಷಿಕರಲ್ಲಿ ನೆಮ್ಮದಿ ತಂದಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸಿ ಬೆಳೆ ವಿಮೆಯನ್ನು ಶೀಘ್ರವಾಗಿ ವಿತರಿಸಲು ಶ್ರಮಿಸಿದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ, ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಹಾಗೂ ಈ ಪ್ರಕ್ರಿಯೆಯಲ್ಲಿ ಸಹಕರಿಸಿದ ಕೇಂದ್ರ ಮತ್ತು ರಾಜ್ಯದ ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾದ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಸಂಸದರು ಉತ್ತರ ಕನ್ನಡ.
ರಾಜ್ಯದ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆಯಿಂದಾಗಿ ಅನೇಕ ರೈತರಿಗೆ ಅನ್ಯಾಯವಾಗುತ್ತಿದೆ ಎನ್ನುವ ಆತಂಕವೂ ಎದುರಾಗಿದೆ. ಕೇಂದ್ರ ಸರ್ಕಾರವು ರಾಜ್ಯದ ಮಳೆಮಾಪನ ಯಂತ್ರಗಳನ್ನು ದುರಸ್ತಿಗೊಳಿಸಿ ಸುಸ್ಥಿತಿಯಲ್ಲಿಡುವಂತೆ ಸ್ಪಷ್ಟ ನಿರ್ದೇಶನ ನೀಡಿದ್ದರೂ ಸಹ, ರಾಜ್ಯ ಸರ್ಕಾರವು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಇಂದಿಗೂ ಅನೇಕ ಕಡೆ ಮಳೆಮಾಪನ ಯಂತ್ರಗಳು ಕೆಟ್ಟು ನಿಂತಿರುವುದರಿಂದ, ಮಳೆಯ ನಿಖರ ಅಂಕಿಅಂಶ ಲಭ್ಯವಾಗದೆ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಪರಿಹಾರ ಮೊತ್ತದ ಲೆಕ್ಕಾಚಾರದಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಕೇಂದ್ರ ಸರ್ಕಾರವು ರೈತಪರ ಯೋಜನೆಗಳನ್ನು ಜಾರಿಗೆ ತರುತ್ತಿದ್ದರೂ, ರಾಜ್ಯ ಸರ್ಕಾರವು ಸರಿಯಾದ ನಿರ್ವಹಣೆ ಮಾಡದೆ ಅಡ್ಡಗಾಲು ಹಾಕುತ್ತಿದೆ. ಆದ್ದರಿಂದ ತಕ್ಷಣವೇ ರಾಜ್ಯ ಸರ್ಕಾರವು ಮಳೆ ಮಾಪನ ಯಂತ್ರಗಳನ್ನು ದುರಸ್ತಿಗೊಳಿಸಲು ಕ್ರಮ ಕೈಗೊಂಡು ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸುತ್ತೇನೆ.


ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಬ್ಬ ಅರ್ಹ ರೈತರಿಗೂ ಈ ವಿಮೆಯ ಸೌಲಭ್ಯ ಹಂತ ಹಂತವಾಗಿ ತಲುಪಲಿದ್ದು, ಸಂಕಷ್ಟದ ಸಮಯದಲ್ಲಿ ಇದು ಬೆಳೆಗಾರರಿಗೆ ದೊಡ್ಡ ಆಸರೆಯಾಗಲಿದೆ.

ಸಂಕಷ್ಟದಲಿದ್ದ ರೈತರ ಖಾತೆಗೆ ಬೆಳೆ ವಿಮೆ ಲಭಿಸುತ್ತಿರುವುದು ಸಂತಸದ ವಿಚಾರವಾಗಿದೆ. ರೈತರ ಕಷ್ಟಗಳನ್ನು ಪ್ರಧಾನ ಮಂತ್ರಿಗಳಿಗೆ ಮತ್ತು ಕೃಷಿ ಸಚಿವರಿಗೆ ಕಾಲಕಾಲಕ್ಕೆ ತಿಳಿಸುತ್ತಾ ಬಂದಿರುವ ಉತ್ತರ ಕನ್ನಡ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ರೈತರ ಪರವಾದ ಒಲವು ಹಾಗು ರೈತರ ಕಷ್ಟಗಳನ್ನು ಅರಿತು ಬೆಳೆ ವಿಮೆ ಬಿಡುಗಡೆ ಮಾಡಿಸಿದ ಪ್ರಧಾನಿ ಮೋದಿ ಯವರಿಗೆ ಹಾಗು ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಅಧಿಕಾರಿ ವರ್ಗದವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ, ಯಲ್ಲಾಪುರ ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರಮಠ ಹಾಗು ಜಿಲ್ಲಾ ದಿಶಾ ಸಮಿತಿ ಪ್ರಮುಖ ಉಮೇಶ್ ಬಾಗ್ವತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Prathidvani Yellapura