

ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಇಡಗುಂದಿ ಅರಣ್ಯ ವಲಯ ವ್ಯಾಪ್ತಿಗೆ ಬರುವ ಹುಟಕಮನೆ ಎಂಬಲ್ಲಿನ ಅರಣ್ಯ ನಾಶ,ಮರಗಳ ಮಾರಣಹೋಮ, ಪ್ರಕೃತಿದತ್ತ ಬೆಟ್ಟ ನೆಲಸಮ ಪ್ರಕರಣ ವರ್ಷದ ಹಿಂದೆ ಭಾರಿ ಸದ್ದು ಮಾಡಿ ಮತ್ತೆ ತಣ್ಣಗಾಗಿತ್ತು. ಇದೀಗ ಮತ್ತೆ ಅದೇ ಪ್ರಕರಣಕ್ಕೆ ಮರು ಜೀವ ಬಂದಿದ್ದು ಸಾಮಾಜಿಕ ಹೋರಾಟಗಾರ ಆರ್.ಟಿ.ಐ ಕಾರ್ಯಕರ್ತ ಮಂಜುನಾಥ ಹೆಗಡೆ ರಾಜ್ಯದ ಸರ್ವೋಚ್ಚ ನ್ಯಾಯಾಲಯದ ಮೂಲಕ ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಕ್ರೂಡಿಕರಣದಲ್ಲಿ ತೊಡಗಿಕೊಂಡಿರುವುದಾಗಿ ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

ಪ್ರಕರಣದ ವಿವರ : ತಾಲೂಕಿನ ಹುಟಕಮನೆ ಗ್ರಾಮದ ಸರ್ವೆ ನಂ 61/6 ಹಾಗೂ ಲಗ್ತ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ಎತ್ತರದ ಪ್ರಾಕೃತಿಕವಾಗಿರುವ ಗುಡ್ಡವನ್ನು ಜೆಸಿಬಿ ಯಂತ್ರ ಬಳಸಿ ಸಮತಟ್ಟು ಮಾಡುವ ಕಾನೂನುಬಾಹಿರ ಕೆಲಸ ನಡೆಯುತ್ತಿರುವುದನ್ನು ಕೆಲವು ಪ್ರಜ್ಞಾವಂತ ನಾಗರೀಕರು ಅರಣ್ಯ ನಾಶದೊಂದಿಗೆ ಪ್ರಾಕೃತಿಕ ವೈಪರೀತ್ಯಕ್ಕೆ ಕಾರಣವಾಗುವ ರೀತಿಯಲ್ಲಿ ಗುಡ್ಡ ನೆಲಸಮ ಮಾಡುವುದನ್ನು ತಡೆಯುವಂತೆ ಯಲ್ಲಾಪುರ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಅಂದು ಮನವಿ ಸಲ್ಲಿಸಿದ್ದರು.

ಪ್ರತಿನಿತ್ಯ ಅಗೆದು ಬೆಲೆ ಬಾಳುವ ಮರಗಳನ್ನು ಜೆಸಿಬಿ ಯಂತ್ರದ ಸಹಾಯದಿಂದ ಬುಡ ಸಹಿತ ಕಿತ್ತು ಹೊಂಡಗಳಲ್ಲಿ ಹಾಕಿ ಮಣ್ಣಿನಿಂದ ಮುಚ್ಚಲಾಗುತ್ತಿದ್ದು ಮತ್ತು ಅಂದಾಜು ಸಾವಿರಾರು ಲೋಡ್ ಲಾರಿ ಮಣ್ಣನ್ನು ಬೇರೆಡೆಗೆ ಸ್ಥಳಾಂತರಿಸಿದ್ದು ಭವಿಷ್ಯದ ಮಳೆಗಾಲದಲ್ಲಿ ಭೂಕುಸಿತ ಆಗುವ ಎಲ್ಲ ಲಕ್ಷಣಗಳು ಕಂಡು ಬರಲಿದೆ ಎಂದು ಆತಂಕ ವ್ಯಕ್ತಪಡಿಸಿ ಸಂಬಂಧಿಸಿದ ಅರಣ್ಯ ಇಲಾಖೆ,ಕಂದಾಯ ಇಲಾಖೆ,ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಗಮನಕ್ಕೆ ತರಲಾಗಿತ್ತು.

ಇದಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆ ತಾಲೂಕಿನ ಹುಟಕಮನೆ ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ನಾಶ ಮಾಡಿ ಗುಡ್ಡ ವನ್ನೂ ಮಾಯಗೊಳಿಸಿರುವ ಸುದ್ದಿಗೆ ಸಂಬಂಧಿಸಿದಂತೆ ಕೃತ್ಯಕ್ಕೆ ಬಳಸಿದ್ದ ಎರಡು ಜೆಸಿಬಿ ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು ಜಾಗದ ಮಾಲಿಕನ ಮೇಲೆ ದೂರು ದಾಖಲಿಸಿರುವುದಾಗಿ ಮೌಖಿಕವಾಗಿ ತಿಳಿಸಿದ್ದರು.

ದೂರು ದಾಖಲಿಸಿಕೊಂಡು ದಂಡ ವಿಧಿಸಿ ಕೈ ಬಿಟ್ಟರೆ ನಾಶ ಪಡಿಸಿದ ಅಮೂಲ್ಯ ಅರಣ್ಯ ಪ್ರಕೃತಿದತ್ತ ಗುಡ್ಡ ಮರು ಸೃಷ್ಟಿ ಸಾದ್ಯವೆ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇಷ್ಟೊಂದು ಭಾರಿ ಪ್ರಮಾಣದಲ್ಲಿ ಅರಣ್ಯ ನಾಶವಾಗಿರುವುದು ಇದರ ತನಿಖೆ ಮತ್ತು ಕೈಗೊಳ್ಳುವ ಕಾನೂನು ಕ್ರಮ ಭವಿಷ್ಯದಲ್ಲಿ ಅರಣ್ಯ ನಾಶಕ್ಕೆ ಮುಂದಾಗುವವರಿಗೆ ಪಾಠವಾಗಬೇಕಿದೆ ಎಂಬುದು ಪರಿಸರ ಪ್ರೇಮಿಗಳು ಹಾಗು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿತ್ತು.

ಇಷ್ಟೆಲ್ಲಾ ಘಟನೆಯ ನಂತರ ಹಲವು ರೀತಿಯಲ್ಲಿ ಪ್ರಕರಣ ಮೂಲೆಗುಂಪಾಗುತ್ತ ಬಂದಿತು. ಒಂದು ಹಂತದಲ್ಲಿ ಇದರ ಸತ್ಯಾಸತ್ಯತೆ ಹೊರತರುವ ಪ್ರಯತ್ನದಲಿದ್ದ ಸಾಮಾಜಿಕ ಹೋರಾಟಗಾರ ಮಂಜುನಾಥ ಹೆಗಡೆ ಹಣ ಪಡೆದು ಪ್ರಕರಣದ ಹೋರಾಟ ಕೈ ಬಿಟ್ಟಿದ್ದಾನೆ ಎಂಬ ಪುಕಾರು ಕೇಳಿಬಂತು.

ಸದ್ಯ ಮತ್ತದೆ ಪ್ರಕರಣಕ್ಕೆ ಮರು ಜೀವ ಬಂದಿದ್ದು ಪ್ರಕರಣಕ್ಕೆ ಸಂಬಂಧಿಸಿದ ಪ್ರಭಲವಾದ ದಾಖಲೆಗಳೊಂದಿಗೆ ಕಳೆದ ಒಂದು ವರ್ಷಕ್ಕು ಅಧಿಕ ಅವದಿಯಿಂದ ನೆನೆಗುದಿಗೆ ಬಿದ್ದ ಪ್ರಕರಣವನ್ನು ನ್ಯಾಯಾಲಯದ ಮುಂದೆ ಕೊಂಡೊಯ್ಯುತ್ತಿದ್ದು ಸರಿಯಾದ ನ್ಯಾಯ ದೊರೆಯುವವರೆಗು ಹೋರಾಟ ಮುಂದುವರೆಸುವುದಾಗಿ ಪ್ರಕರಣದ ಹಿಂದೆ ಬಿದ್ದಿರುವ ಸಾಮಾಜಿಕ ಹೋರಾಟಗಾರ ಬಾಳಗಿಮನೆ ಮಂಜುನಾಥ ಹೆಗಡೆ ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಹೋರಾಟಗಾರ ಬಾಳಗಿಮನೆ ಮಂಜುನಾಥ ಹೆಗಡೆ ಇಲಾಖೆಗಳಿಗೆ ಕೇಳಿರುವ ಪ್ರಶ್ನೆಗಳು.
▶ ಹುಟಕಮನೆ ಪರಿಸರದಲಿದ್ದ ಪ್ರಕೃತಿದತ್ತಗುಡ್ಡ ಕಣ್ಮರೆಯಾಗಿದ್ದು ಸಾವಿರಾರು ಮರಗಳ ಮಾರಣ ಹೋಮ ಸಾವಿರಾರು ಲಾರಿಗಟ್ಟಲೆ ಮಣ್ಣಿನ ಲೂಟಿ ಬಗ್ಗೆ ಅರಣ್ಯ,ಕಂದಾಯ,ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಗಮನಕ್ಕೆ ತಂದರು ತಾವು ಕೈಗೊಂಡ ಕ್ರಮಗಳೇನು?
▶ ಪ್ರಕರಣ ನಡೆದು ವರ್ಷ ಕಳೆದರು ಸಾರ್ವಜನಿಕರಿಗೆ ಸತ್ಯಾಸತ್ಯತೆ ತಿಳಿಸದಿರುವ ಇಲಾಖೆಗಳ ಮೌನಕ್ಕೆ ಕಾರಣವೇನು. ಹತ್ತು ಹಲವು ಬಾರಿ ಸಾಟಲೈಟ್ ಚಿತ್ರ ಬಿಡುಗಡೆ ಮಾಡುವಂತೆ ಅರಣ್ಯ ಇಲಾಖೆಗೆ ಕೋರಿದರು ಅಧಿಕಾರಿಗಳ ದಿವ್ಯ ಮೌನದ ಅರ್ಥವೇನು.
▶ ಅರಣ್ಯ ನಾಶವೆ ಆಗಿಲ್ಲ, ಗುಡ್ಡ ನೆಲಸಮವಾಗಿಲ್ಲ ಎನ್ನುವುದಾದರೆ ತಾಲೂಕು ಪಂಚಾಯತ ಕೆ.ಡಿ.ಪಿ ಸಭೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ್ ಹುಟಕಮನೆ ಗುಡ್ಡ ನೆಲಸಮ ಪ್ರಕರಣದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆಯ ಮಾತುಗಳನ್ನಾಡಿದ್ದೇಕೆ.
▶ ಪ್ರತಿಬಾರಿ ಪ್ರಕರಣದ ಮಾಹಿತಿ ಕೇಳಲು ಹೋದಾಗಲೆಲ್ಲಾ ಜಂಟಿ ಸರ್ವೆಯ ಮಾತುಗಳನ್ನಾಡುತ್ತಿದ್ದ ಕಂದಾಯ ಮತ್ತು ಅರಣ್ಯ ಇಲಾಖೆಗಳ ಸರ್ವೆಕಾರ್ಯ ಏನಾಯಿತು. ಅದನ್ನು ಸಾರ್ವಜನಿಕವಾಗಿ ಏಕೆ ಬಹಿರಂಗಪಡಿಸಿಲ್ಲ ಅಥವಾ ಜನಗಳೆಂದರೆ ಇಲಾಖೆಗಳಿಗೆ ಅಷ್ಟು ತಾತ್ಸಾರವೆ.
▶ ಇಂದಿಗು ಆ ಸ್ಥಳದಲ್ಲಿ ಜೆಸಿಬಿ,ಟ್ರಾಕ್ಟರ್ ಮೂಲಕ ಕೆಲಸ ನಡೆಯುತ್ತಿದ್ದು ಪ್ರಕರಣ ಮುಕ್ತಾಯವಾಗಿದೆ ಅಲ್ಲಿ ಯಾವ ತಪ್ಪು ನಡೆದಿಲ್ಲ ಎಂಬುದನ್ನಾದರು ಮಾದ್ಯಮದ ಮೂಲಕ ಜನತೆಗೆ ತಿಳಿಸುವ ಕಾರ್ಯ ಸಂಬಂಧಿಸಿದ ಇಲಾಖೆಗಳು ಏಕೆ ಮಾಡಿಲ್ಲ.
▶ಸಾಮಾನ್ಯ ಬಡವರು ತಮ್ಮ ವಾಸಕ್ಕೆ ಗುಡಿಸಲು ಹಾಕಿದರೆ ಕಿತ್ತೊಗೆಯುವ ಅರಣ್ಯ ಇಲಾಖೆ ಅಧಿಕಾರಿಗಳು, ಗುಡ್ಡ ಬೆಟ್ಟ ಗಳನ್ನು ಅನುಮತಿ ಪಡೆಯದೆ ಅಗೆದು ತೋಡಿದರೆ ಓಡೋಡಿ ಬರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಕಂದಾಯ ಇಲಾಖೆ ಮೌನಕ್ಕೆ ಶರಣಾಗಿರುವುದೇಕೆ ಪ್ರಕರಣದ ಸತ್ಯಾಸತ್ಯತೆ ಬಹಿರಂಗ ಪಡಿಸಿ.





Prathidvani Yellapura