



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಸರ್ಕಾರಿ ವೃತ್ತಿಗೆ ಸೇರಿದ ದಿನದಂದೇ ನಿವೃತ್ತಿಯ ದಿನಾಂಕ ನಿಗಧಿಯಾಗಿರುತ್ತದೆ. ಈ ಮಧ್ಯೆ ಯಾವುದೇ ಕ್ಷೇತ್ರದ ಸೇವಾ ಅವಧಿಯಲ್ಲಿ ಸಮಾಜದೊಂದಿಗೆ ಬದುಕಿದ ರೀತಿ, ವೃತ್ತಿಯೊಂದಿಗಿನ ಬದ್ಧತೆ , ಜನರೊಂದಿಗಿನ ಒಡನಾಟ ನಮ್ಮೊಂದಿಗೆ ಬರಲಿದೆ. ಈ ದಿಸೆಯಲ್ಲಿ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ವಿಶೇಷವಾಗಿ ೪೦ವರ್ಷಗಳ ವೃತ್ತಿ ಪಯಣಿಸಿದ ಪದೋನ್ನತಿ ಮುಖ್ಯಾಧ್ಯಾಪಕಿ ಸುನಂದಾ ವೈ ಪಾಟಣಕರ ಅವರ ನಿವೃತ್ತಿ ಜೀವನ ಆನಂದಮಯವಾಗಿರಲೆAದು ಆಶಿಸುತ್ತೇನೆ ಎಂದು ಕ್ಷೇತ್ರ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜನಾಧಿಕಾರಿ ಪ್ರಶಾಂತ ಜಿ.ಎನ್ ಹೇಳಿದರು.

ಅವರು ಪಟ್ಟಣದ ಕಾಳಮ್ಮನಗರದ ಸ.ಹಿ.ಪ್ರಾ. ಶಾಲೆಯ ಪದೋನ್ನತ ಮುಖ್ಯಾಧ್ಯಾಪಕಿ ಸುನಂದಾ ವೈ ಪಾಟಣಕರ ಅವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

40 ವರ್ಷಗಳ ಮಕ್ಕಳೊಂದಿಗಿನ ಪಯಣ ಇಂದಿಗೆ ಅಂತ್ಯವಾಗುತ್ತಿದ್ದರೂ ಶಿಕ್ಷಕಿಯಾಗಿ ನಡೆದ ದಿನಗಳೇ ಭವಿಷ್ಯದ ದಿನಗಳಿಗೆ ಪ್ರೇರಣೆಯಾಗಲಿದೆ. ನಿವೃತ್ತಿಯಾಗದ ವೃತ್ತಿ ನಮ್ಮದು. ಮುಂದೆಯೂ ಶಿಕ್ಷಕಿಯಾಗಿಯೇ ಮಕ್ಕಳೊಂದಿಗೆ ಸದಾ ಬೆರೆಯುತ್ತೇನೆ. ಸಹಕರಿಸಿದ ಸರ್ವರಿಗೂ ವಂದಿಸುತ್ತೇನೆ ಎಂದು ನಿವೃತ್ತಿ ಬೀಳ್ಕೊಡುಗೆಯ ಸನ್ಮಾನ ಸ್ವೀಕರಿಸಿದ ಮುಖ್ಯ ಶಿಕ್ಷಕಿ ಸುನಂದಾ ವೈ ಪಾಟಣಕರ ಭಾವನಾತ್ಮಕ ನುಡಿಗಳನ್ನಾಡಿದರು.




ಈ ಸಂದರ್ಭದಲ್ಲಿ ನಿವೃತ್ತಿ ಹೊಂದುತ್ತಿರುವ ಶಿಕ್ಷಕಿ ಸುನಂದಾ ವೈ ಪಾಟಣಕರ ಮತ್ತು ಅವರ ಪತಿ ಸುರೇಶ್ ಬೋರಕರರವರನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗು ಸದಸ್ಯರು, ಸಹೋದ್ಯೋಗಿ ಸಿಬ್ಬಂದಿಗಳು, ಬಿಸಿಯೂಟ ಮತ್ತು ಅಂಗನವಾಡಿ ಸಿಬ್ಬಂದಿಗಳು, ಹಳೆಯ ವಿದ್ಯಾರ್ಥಿಗಳು ಹಿತೈಷಿ ಶಿಕ್ಷಕ ಸಮೂಹ ಗೌರವಿಸಿದರು.

ಹಾಗೂ ಸಿ.ಆರ್.ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದ ಶಿವಾನಂದ ವರ್ಣೇಕರ ಅವರು ಬೇರೊಂದು ಕ್ಲಸ್ಟರ್ಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಲಯನ್ಸ್ ಪ್ರಮುಖ ಶೇಷಗಿರಿ ಪ್ರಭು, ಎಸ್ಡಿಎಂಸಿ ಅಧ್ಯಕ್ಷ ಸುರೇಶ್ ಮಡಿವಾಳ, ಉಪಾಧ್ಯಕ್ಷೆ ಸಂಧ್ಯಾ ಗುರಿಕಾರ್, ಶಿಕ್ಷಕ ಸಂಘಟನೆಯ ಪದಾಧಿಕಾರಿ ಸತೀಶ ನಾಯ್ಕ, ಸಹಶಿಕ್ಷಕ ಹರೀಶ್ ನಾಯ್ಕ ಹಾಗೂ ಇನ್ನಿತರೆ ಶಿಕ್ಷಕರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪೋಷಕರು, ಬಿಸಿ ಊಟದ ಸಿಬ್ಬಂದಿಗಳು, ಅಂಗನವಾಡಿ ಸಿಬ್ಬಂದಿಗಳು, ಸಹಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ವಿದ್ಯಾರ್ಥಿನಿಯರಾದ ಗೀತಾ ಹಾಗೂ ಗುಲಾಬಿ ಪ್ರಾರ್ಥಿಸಿದರು. ಶಿಕ್ಷಕಿ ಗಾಯತ್ರಿ ಭಟ್ಟ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ಪುಷ್ಪಾ ಮೋಗೇರ ನಿರೂಪಿಸಿದರು.
Prathidvani Yellapura