
ಪ್ರತಿಧ್ವನಿ,ಯಲ್ಲಾಪುರ : ತ್ಯಾಗ ಬಲಿದಾನದೊಂದಿಗೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ನಮ್ಮ ಪೂರ್ವಜರು. ಇಂದು ನಮಗೆಲ್ಲ ಸ್ವಚ್ಛಂದ ಬದುಕನ್ನು ಕೊಡುಗೆಯಾಗಿ ನೀಡಿದ್ದಾರೆ. ಬ್ರಿಟಿಷರನ್ನು ಬಡಿದೋಡಿಸಿ ನೀಲಾಕಾಶದ ಬಾನಂಗಳದಲ್ಲಿ ಕೇಸರಿ, ಬಿಳಿ, ಹಸಿರು ದ್ವಜ ಹಾರಾಡುವ ಅವಕಾಶ ಕಲ್ಪಿಸಿದ್ದಾರೆ. ಅದನ್ನು ಕಾಪಾಡಿಕೊಳ್ಳಬೇಕು, ನೆಲದ ಕಾನೂನನ್ನು ಗೌರವಿಸಬೇಕು, ಪರಿಸರಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಮತ್ತು ಮೊಬೈಲ್ ಬಳಕೆ ಮಿತಿಯಲ್ಲಿರಲಿ ಎಂದು ತಾಲೂಕು ದಂಡಾಧಿಕಾರಿ ಗುರುರಾಜ್ ಕರೆ ನೀಡಿದರು.

ಅವರು ಪಟ್ಟಣದ ಕಾಳಮ್ಮನಗರದಲ್ಲಿರುವ ತಾಲೂಕಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ 76 ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದ ಧ್ವಜಾರೋಹಣ ನೆರವೇರಿಸಿ ಜನತೆಗೆ ಶುಭ ಕೋರಿ ಮಾತನಾಡಿದರು.

76 ವರ್ಷಗಳ ಹಿಂದೆ ಕಂಡ ನರಕ ಯಾತನೆ, ಪೂರ್ವಜರ ತ್ಯಾಗ ಬಲಿದಾನದ ಪರಿಣಾಮವೇ ಸ್ವಾತಂತ್ರ್ಯವನ್ನು ಅನುಭವಿಸುವಂತಾಗಿದೆ. ಈ ಸ್ವತಂತ್ರ ಸ್ವೇಚ್ಚಾಚಾರವಾಗದೇ ನೆಲದ ಬದ್ಧತೆಯೊಂದಿಗೆ ಬದುಕುವ ಕಾಯಕವಾಗಬೇಕಿದೆ. ಆಗಮಾತ್ರ ಅವರ ಹೋರಾಟದ ಬದುಕಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಭವಿಷ್ಯದಲ್ಲಿ ಭಾರತ ಮಾತೆಯ ರಕ್ಷಣೆ ದೇಶವಾಸಿಗಳ ಕೈಯಲ್ಲಿರುವುದರಿಂದ ಸನ್ಮಾರ್ಗದೆಡೆಗೆ ಸಾಗಿ ಭವ್ಯ ಭಾರತದ ಸದೃಡತೆಯೆಡೆಗೆ ಕೊಂಡೊಯ್ದು ವಿಶ್ವಗುರು ಭಾರತವಾಗಬೇಕಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರಬೈಲು ಶಿವರಾಮ ಹೆಬ್ಬಾರ್ ಸ್ವಾತಂತ್ರ್ಯದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹನ್ನೊಂದು ಜನ ನಿವೃತ್ತ ಯೋಧರು ಮತ್ತು ಮುಖ್ಯಮಂತ್ರಿ ಪದಕ ಪಡೆದ ಪೊಲೀಸ್ ಶಫಿ ಅವರನ್ನು ಇದೇ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಪ.ಪಂ ವತಿಯಿಂದ ಮಾತೃಭೂಮಿಯ ಘನತೆ ಹಾಗೂ ಸ್ವಾತಂತ್ರö್ಯ ಕಾಪಾಡಲು ತಮ್ಮ ಪ್ರಾಣ ತ್ಯಾಗ ಮಾಡಿದ ವೀರರಿಗೆ ಪ್ರಣಾಮಗಳನ್ನು ಸಲ್ಲಿಸುವ ದೇಶದ ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳ ನುಡಿಬರಹದ ಶಿಲಾಫಲಕವನ್ನು ಶಾಸಕ ಹೆಬ್ಬಾರ್ ಅನಾವರಣಗೊಳಿಸಿದರು.

ತಾಲೂಕು ಆಡಳಿತದಿಂದ ಆಯೋಜಿಸಿದ್ದ ಸೆಲ್ಫಿ ಕಾರ್ನರ್‌ನಲ್ಲಿ ಶಾಸಕ ಹೆಬ್ಬಾರ್ ನಿಂತು ಫೋಟೋ ಕ್ಲಿಕ್ಕಿಸುವ ಮೂಲಕ ಉದ್ಘಾಟಿಸಿದರು.

ರಾ.ವಿ.ಯೋ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ತಾ.ಪಂ ಮುಖ್ಯಾಧಿಕಾರಿ ಜಗದೀಶ ಕಮ್ಮಾರ್, ಪ.ಪಂ ಮುಖ್ಯಾಧಿಕಾರಿ ಸುನಿಲ್ ಸುಭಾಶ್ ಗಾವಡೆ, ಪ.ಪಂ ಮಾಜಿ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶಾಮಿಲಿ ಪಾಟಣಕರ ವೇದಿಕೆಯಲ್ಲಿದ್ದರು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ವಿವಿಧ ಇಲಾಖಾ ಅಧಿಕಾರಿಗಳು, ಊರ ಹಿರಿಯರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಸಾರ್ವಜನಿಕರು ಉಪಸ್ಥಿತರಿದ್ದು ಪಂಚ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಸಿಪಿಐ ರಂಗನಾಥ ನೀಲಮ್ಮನವರ್ ಮಾರ್ಗದರ್ಶನದಲ್ಲಿ ಪಿಎಸ್‌ಐ ರವಿಗುಡ್ಡಿ ನೇತೃತ್ವದಲ್ಲಿ ಪೊಲೀಸ್ ಗೌರವ ವಂದನೆ ಸಲ್ಲಿಸಲಾಯಿತು. ವಿದ್ಯಾರ್ಥಿನಿಯರು ರೈತಗೀತೆ ಹಾಡಿದರು. ಕ್ಷೇತ್ರಶಿಕ್ಷಣಾಧಿಕಾರಿ ಎನ್.ಆರ್ ಹೆಗಡೆ ಸ್ವಾಗತಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ್ ತಾರೀಕೊಪ್ಪ ನಿರ್ವಹಿಸಿದರು. ಬಿಆರ್‌ಸಿ ಅಧಿಕಾರಿ ಶ್ರೀರಾಮ ಹೆಗಡೆ ವಂದಿಸಿದರು.






Prathidvani Yellapura