


ಯಲ್ಲಾಪುರ : ಸರ್ಕಾರದಿಂದ ಸಾರ್ವಜನಿಕರಿಗೆ ಸಲ್ಲುತ್ತಿರುವ ಪಿಂಚಣಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಹಾಗೂ ಬಹುಮುಖ್ಯವಾಗಿ ಪಿಂಚಣಿ ಬರುವುದೆಂಬ ಮಾಹಿತಿಯೇ ಇಲ್ಲದವರು ಅದಾಲತ್ನಲ್ಲಿ ಬಂದು ಹೊಸದಾಗಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಪಿಂಚಣಿಯು 65 ವರ್ಷಗಳವರೆಗೆ 600 ರೂ ಇದ್ದು ನಂತರದಲ್ಲಿ 1200 ರೂ ಪಡೆಯಬಹುದಾಗಿದೆ. ಆದರೆ ಅದಕ್ಕೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಿದ್ದು ಅದರ ಪ್ರಯೋಜನವನ್ನೂ ಅದಾಲತ್ನಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ತಹಸೀಲ್ದಾರ ಶ್ರೀಕೃಷ್ಣ ಕಾಮ್ಕರ್ ಹೇಳಿದರು.

ಅವರು ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಜಿಲ್ಲಾಡಳಿತ ಉತ್ತರಕನ್ನಡ, ತಾಲೂಕಾಡಳಿತ ಯಲ್ಲಾಪುರ ಇದರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪಿಂಚಣಿ ಅದಾಲತ್ ಹಾಗೂ ಕಂದಾಯ ಅದಾಲತ್ನಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾಹಿತಿ ನೀಡಿದರು.

ಕಂದಾಯ ಅದಾಲತ್ನಲ್ಲಿ ರೈತರಿಗೆ ಹೆಚ್ಚಿನ ಅನುಕೂಲವಿದ್ದು ತಮ್ಮ ಪಹಣಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವುದು , ಇನ್ನಿತರೆ ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಸಲು ಅವಕಾಶವಿದ್ದು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದರು.

ಜು. 5 ರ ಬುಧವಾರ ತಾಲೂಕಿನ ಹಾಸಣಗಿ ಮತ್ತು ಯಲ್ಲಾಪುರದಲ್ಲಿ ಪಿಂಚಣಿ ಅದಾಲತ್ ನಡೆಯಿತು. ಮಂಚಿಕೇರಿ ಹೋಬಳಿಯಲ್ಲಿ ೪೮ ಸಾರ್ವಜನಿಕರು ಹಾಜರಿದ್ದು 32 ಮಂಜೂರಿ ಪತ್ರವನ್ನು ವಿತರಿಸಲಾಯಿತು. ಅದಾಲತ್ನಲ್ಲಿ ಪಿಂಚಣಿಗೆ ಸಂಬಧಿಸಿದ 2 ಅರ್ಜಿ ಸ್ವೀಕರಿಸಲಾಯಿತು. ಯಲ್ಲಾಪುರ ಹೋಬಳಿಯಲ್ಲಿ 98 ಸಾರ್ವಜನಿಕರು ಹಾಜರಿದ್ದು 65 ಮಂಜೂರಾತಿ ಪತ್ರವನ್ನು ವಿತರಿಸಲಾಯಿತು. ಪಿಂಚಣಿಗೆ ಸಂಬಧಿಸಿದಂತೆ 14, ಕಂದಾಯಕ್ಕೆ ಸಂಬಂಧಿಸಿದಂತೆ 1 ಒಟ್ಟು 15 ಅರ್ಜಿಗಳನ್ನು ಸ್ವೀಕರಿಸಲಾಯಿತು.
ಗ್ರೇಡ್-2:ತಹಸೀಲ್ದಾರ ಸಿ.ಜಿ ನಾಯ್ಕ ಹಾಗೂ ಪಂಚಾಯತ್ಗಳ ಅಭಿವೃದ್ಧಿ ಅಧಿಕಾರಿಗಳು , ಕಂದಾಯ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಭಾಗಿಯಾಗಿದ್ದರು.

Prathidvani Yellapura