Breaking News

ಪ್ರಾಂತ ಆಚಾರ್ಯರ ಅಭ್ಯಾಸ ವರ್ಗ ; 5 ದಿನಗಳ ಅಭ್ಯಾಸ ವರ್ಗಕ್ಕೆ ಶಾಸಕ ಹೆಬ್ಬಾರ್ ಚಾಲನೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ವ್ಯಕ್ತಿ ನಿರ್ಮಾಣವಾದರೆ ದೇಶ ನಿರ್ಮಾಣ ಸಾಧ್ಯವಿದೆ,ಅದಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ತೊಡಗಿಕೊಂಡಿದೆ.ಅದಕ್ಕೆ ಪೂರಕವಾಗಿ ದೇಶದ 12 ಕೋಟಿ ಜನಸಂಖ್ಯೆಯುಳ್ಳ ವನವಾಸಿಗಳ ಅಭಿವೃದ್ಧಿಗಾಗಿ ವನವಾಸಿ ಕಲ್ಯಾಣ ಆಶ್ರಮದ ಅಡಿಯಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ವೈಚಾರಿಕತೆ ಆಧಾರದಲ್ಲಿ ಸಂಘದ ಸಿದ್ದಾಂತ ಅಡಗಿದೆ. ಘೋಷವಾಕ್ಯ ನಾವು ನೀವು ಒಂದೇ ರಕ್ತದವರು ಎಂಬ ಭಾವದಲ್ಲಿ ಸಂಘಟನೆಯ ಕಾರ್ಯಗಾರ ನಡೆಯುತ್ತಿದೆ. ಶಿಕ್ಷಣ, ಸಾಮಾಜಿಕ, ರಾಷ್ಟ್ರೀಯತೆ ಇನ್ನು ಅನೇಕ ರಾಷ್ಟ್ರಹಿತ ಕಾರ್ಯಗಳನ್ನು ನಡೆಸಲಾಗುತ್ತಿದೆ ಇದು ನಮ್ಮ ಹೆಮ್ಮೆ ಎಂದು ಭಾವಿಸುತ್ತೇವೆ ಎಂದು ವನವಾಸಿ ಕಲ್ಯಾಣ ಕರ್ನಾಟಕದ ಪ್ರಾಂತ ಸಂಘಟನಾ ಕಾರ್ಯದರ್ಶಿ, ಕಾರ್ಯಕ್ರಮದ ವಕ್ತಾರ ಶ್ರೀನಿವಾಸ ಹೇಳಿದರು.


ಅವರು ಪಟ್ಟಣದ ಎಪಿಎಂಸಿ ಆವಾರದ ರೈತಭವನದಲ್ಲಿ ವನವಾಸಿ ಕಲ್ಯಾಣ ಕರ್ನಾಟಕ ಅಡಿಯಲ್ಲಿ 5 ದಿನಗಳ ಪ್ರಾಂತ ಆಚಾರ್ಯರ ಅಭ್ಯಾಸ ವರ್ಗ-2023ರ ಕಾರ್ಯಕ್ರಮದಲ್ಲಿ ವಕ್ತಾರರಾಗಿ ಭಾಗವಹಿಸಿ ಮಾತನಾಡಿದರು.

ಇದಕ್ಕೂ ಮುನ್ನಾ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅನ್ಯ ಕಾರ್ಯಕ್ರಮ ನಿಮಿತ್ತ ತೆರಳುವ ಸಲುವಾಗಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿಯವರ ಜೊತೆಗೂಡಿ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ಶಿಬಿರಕ್ಕೆ ಹಿತನುಡಿಗಳೊಂದಿಗೆ ಶುಭ ಕೋರಿ ತೆರಳಿದರು.


5 ದಿನಗಳ ಕಾಲದ ಪ್ರಾಂತ ಆಚಾರ್ಯರ ಅಭ್ಯಾಸ ವರ್ಗಕ್ಕೆ ರಾಜ್ಯದ 16 ಜಿಲ್ಲೆಗಳಿಂದ 300 ಕ್ಕು ಅಧಿಕ ಸದಸ್ಯರು ಭಾಗವಹಿಸಿದ್ದು ಅಭ್ಯಾಸ ವರ್ಗದ ವಿಶೇಷ ತರಬೇತಿ ಪಡೆಯಲಿದ್ದಾರೆ.


ವನವಾಸಿ ಕಲ್ಯಾಣ ಆಶ್ರಮ ದಕ್ಷಿಣ ಮಧ್ಯಕ್ಷೇತ್ರೀಯ ಶಿಕ್ಷಣ ಪ್ರಮುಖ ವೆಂಕಟೇಶ್ವರರಾವ್ ದೇಶಪಾಂಡೆ ಅಭ್ಯಾಸವರ್ಗಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿರಸಿ ತಾಲೂಕು ವನವಾಸಿ ಕಲ್ಯಾಣ ಅಧ್ಯಕ್ಷ ನಾರಾಯಣ ಮರಾಠಿ ದೇವನಳ್ಳಿ ಮಾತನಾಡಿ ಸಂಘದ ಶಿಸ್ತು, ಸಂಸ್ಕಾರವೇ ನಮ್ಮನ್ನು ದೇಶ ಕಟ್ಟುವ ಕಾಯಕಕ್ಕೆ ಅಣಿಗೊಳಿಸಿದೆ. ಭಾರತೀಯರಾಗಿ ಸಾಂಸ್ಕೃತಿಕ ಸಂಸ್ಕಾರ ಹೊಣೆಗಾರಿಕೆ ನಮ್ಮ ಮೇಲಿದ್ದು ವನವಾಸಿಗಳನ್ನು ಸುಶಿಕ್ಷಿತರನ್ನಾಗಿಸುವ ಕಾರ್ಯ ಕಿಂಚಿತ್ತಾದರೂ ನಮ್ಮಿಂದ ಆಗಬೇಕಿದೆ ಎಂದರು.
ರಾಷ್ಟ್ರೀಯತೆ, ರಾಷ್ಟ್ರಭಕ್ತಿ, ಸಂಸ್ಕಾರ, ಸಂಸ್ಕೃತಿಗಳೊಂದಿಗೆ ಧರ್ಮದ ಆಚರಣೆ ಅದರ ಮಹತ್ವ ಸಾರುವ ಮತ್ತು ತಿಳಿಯುವ ಕಾರ್ಯ ವನವಾಸಿ ಕಲ್ಯಾಣದಿಂದ ಹೆಚ್ಚು ಹೆಚ್ಚು ಆಗಬೇಕಿದೆ ಎಂದು ಯಲ್ಲಾಪುರ ಪ.ಪಂ ಮಾಜಿ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು.
ಜನರನ್ನು ಮನುಷ್ಯರನ್ನಾಗಿಸುವ ಕಾರ್ಯ ಆರ್.ಎಸ್.ಎಸ್ ಸಂಘಟನೆ ದೇಶಾದ್ಯಂತ ಮಾಡುತ್ತಿದ್ದು ಅದರ ಭಾಗವಾಗಿ ವನವಾಸಿ ಕಲ್ಯಾಣ ಭಾರತೀಯತೆಯ ಸಂಸ್ಕಾರವನ್ನು ಜನರಿಗೆ ಉಣಬಡಿಸುವ ಕಾರ್ಯ ಬಹುಕಾಲದಿಂದ ನಡೆಸುತ್ತಾ ಬಂದಿದೆ. ಈ ನೆಲದ ಸೇವೆಗೆ ಕಿಂಚಿತ್ತಾದರೂ ತೊಡಗಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಟಿ.ಎಂ.ಎಸ್ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.


ಇದೇ ಸಂದರ್ಭದಲ್ಲಿ ವನವಾಸಿ ಸಂಸ್ಥೆಯಲ್ಲಿ ಪೂರ್ಣಾವಧಿ ಕಾರ್ಯಕರ್ತನಾಗಿ ಬಹುವರ್ಷಗಳ ಕಾಲ ಸೇವೆ ಸಲ್ಲಿಸಿ ಅನಾರೋಗ್ಯದಿಂದ 26 ವರ್ಷದ ಪ್ರಾಯದಲ್ಲೇ ನಿಧನರಾದ ರಾಷ್ಟ್ರೀಯತೆಯ ಸೇವೆಗೈಯುವ ಮಹದಾಸೆ ಹೊತ್ತಿದ್ದ ರಾಮು ಥೋರತ್ ಅವರ ತಂದೆಯವರಾದ ದನಗರ ಗೌಳಿ ಸಮಾಜದ ಹಿರಿಯ ಜಿಲ್ಲು ಥೋರತ್ ಅವರಿಗೆ ವೇದಿಕೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.


ಸಾಮಾಜಿಕ ಕಾರ್ಯಕರ್ತೆ ಮಂಗಲಾ ಸಿದ್ದಿ ಕೋಟೇಮನೆ, ದನಗರ ಗೌಳಿ ಸಮಾಜದ ಹಿರಿಯ ಜಿಲ್ಲು ಥೋರತ್, ಸ್ವಾಗತ ಸಮಿತಿ ಸದಸ್ಯೆ ಮುಕ್ತಾ ಶಂಕರ, ಕುಣಬಿ ಸಮಾಜದ ತಾಲೂಕಾ ಅಧ್ಯಕ್ಷ ನಾರಾಯಣ ಕುಣಬಿ ಹಾಗೂ ಇನ್ನಿತರರು ವೇದಿಕೆಯಲ್ಲಿದ್ದರು.

ವಿಧಾನ ಪರಿಷತ್ ಸದಸ್ಯ ಹಾಗು ವನವಾಸಿ ಕಲ್ಯಾಣ ಸಂಘಟನೆಯೊಂದಿಗೆ ಗುರುತಿಸಿಕೊಂಡು ಸಾಮಾಜಿಕ,ಶೈಕ್ಷಣಿಕ, ಧಾರ್ಮಿಕ ವಿಶೇಷವಾಗಿ ರಾಷ್ಟ್ರೀಯತೆ ಕುರಿತಾದ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡ ಶಾಂತಾರಾಮ್ ಸಿದ್ದಿ ಅವರ ನೇತ್ರತ್ವದಲ್ಲಿ ಅಭ್ಯಾಸವರ್ಗದ 5 ,ದಿನಗಳ ಕಾರ್ಯಚಟುವಟಿಕೆ ನಡೆಯುತ್ತಿದೆ.


ಸಂಜನಾ ಹಾಗೂ ಸುನೀತಾರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸ್ವಾಗತ ಸಮಿತಿ ಅಧ್ಯಕ್ಷ ಶಿರೀಶ್ ಪ್ರಭು ಸ್ವಾಗತಿಸಿದರು. ಮುರಳೀ ಹೆಗಡೆ ವಂದಿಸಿದರು. ಪ್ರಾಂತ ಶಿಕ್ಷಾ ಪ್ರಮುಖ್ ಬಮ್ಮು ಪಾಟೀಲ ನಿರೂಪಿಸಿದರು. ಮಂಜುಳಾ ಸಿದ್ದಿ ರಾಷ್ಟçಭಕ್ತಿ ಗೀತೆ ಹಾಡಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *