
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ರೈತರು ಪ್ರಮುಖವಾಗಿ ಭತ್ತ, ಮೆಕ್ಕೆಜೋಳ, ಕಬ್ಬು ಬೆಳೆಗಳನ್ನು ಬೆಳೆಯುತ್ತಾರೆ.

ಮಳೆ ಮತ್ತು ಬೆಳೆ ಪರಿಸ್ಥಿತಿ:-
ಮಳೆ:- ಈ ವರ್ಷ ಆಗಸ್ಟ್ 05 ರವರೆಗೆ ವಾರ್ಷಿಕ ವಾಡಿಕೆ ಮಳೆ 1798.00 ಮಿಮೀ ಆಗಬೇಕಾಗಿದ್ದು, ಈವರೆಗೆ 1305.40 ಮಿಮೀ ಮಳೆಯಾಗಿರುತ್ತದೆ. ಒಟ್ಟು 492.60 ಮಿಮೀ ಮಳೆ ಕೊರತೆಯಾಗಿದ್ದು ಶೇ. 27.39 ರಷ್ಟು ಮಳೆ ಕೊರತೆಯಾಗಿರುತ್ತದೆ.
ಜೂನ್ ತಿಂಗಳಲ್ಲಿ ವಾಡಿಕೆ ಮಳೆ 533 ಮಿಮೀ ಆಗಬೇಕಿದ್ದು ಕೇವಲ 214 ಮಿಮೀ ಮಳೆಯಾಗಿದ್ದು ಶೇ 60% ಮಳೆ ಕೊರತೆಯಾಗಿರುತ್ತದೆ.
ಜುಲೈ ತಿಂಗಳಲ್ಲಿ ಈವರೆಗೆ ವಾಡಿಕೆ ಮಳೆ 1024.90 ಮಿಮೀ ಆಗಬೇಕಿದ್ದು 739.80 ಮಿಮೀ ಮಳೆಯಾಗಿದ್ದು 285 ಮಿಮೀ ಮಳೆ ಕೊರತೆಯಾಗಿದ್ದು ಶೇ 27.81% ಮಳೆ ಕೊರತೆಯಾಗಿರುತ್ತದೆ.



ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಉತ್ತಮ ಮಳೆಯಾಗುತ್ತಿದ್ದು ಭತ್ತದ ನಾಟಿ ಕಾರ್ಯ ಚುರುಕು ಪಡೆದುಕೊಂಡಿರುತ್ತದೆ.

ಭತ್ತ:- ಕೂರಿಗೆ ಬಿತ್ತನೆಯ ಬೆಳೆಯು 55-75 ದಿನದ ಬೆಳೆಯಾಗಿದ್ದು, ಮೇ ತಿಂಗಳಲ್ಲಿ ಉತ್ತಮ ಮಳೆಯಾದ್ದರಿಂದ ತಾಲೂಕಿನ ಪೂರ್ವ ಭಾಗವಾದ ಕಿರವತ್ತಿ ಮತ್ತು ಮದನೂರು ಗ್ರಾಮ ಪಂಚಾಯತ್ ಗಳಲ್ಲಿ ಭತ್ತ ಹಾಗೂ ಮುಸುಕಿನ ಜೋಳವನ್ನು ಬಿತ್ತನೆ ಮಾಡಿರುತ್ತಾರೆ. ಬೆಳೆಗಳು ಸುಮಾರು 55 ರಿಂದ 75 ದಿವಸಗಳಿರುತ್ತವೆ. ಭತ್ತದಲ್ಲಿ ಹೊಡೆತ ಚಟುವಟಿಕೆ ಜುಲೈ ಮೊದಲ ವಾರದಲ್ಲಿ ಆದ ಮಳೆಯಿಂದ ಮುಗಿದಿದ್ದು ಜುಲೈ ಕೊನೆಯ ಹಾಗೂ ಆಗಸ್ಟ್ ತಿಂಗಳಲ್ಲಿ ಆಗುತ್ತಿರುವ ಉತ್ತಮ ಮಳೆಯಿಂದ ಬೆಳೆ ಚೇತರಿಕೆ ಹೊಂದುತ್ತಿದೆ. ಕೂರಿಗೆ ಬಿತ್ತನೆಯಲ್ಲಿ ಹೆಚ್ಚಾಗಿ ಸ್ಥಳೀಯ ಭತ್ತವಾದ ಸಾಳಿ, ಜಯಾ ದೊಡ್ಮ್ಯಾಳ, ಅಭಿಲಾಷ ತಳಿಗಳನ್ನು ಬಿತ್ತನೆ ಮಾಡುತ್ತಾನೆ.
ಭತ್ತ ನಾಟಿ:-ನಾಟಿ ಭತ್ತಕ್ಕಾಗಿ ಮುಂಚಿತವಾಗಿ ತೆರೆಮೆ ಹಾಕಿದ ಭತ್ತವನ್ನು ಕಳೆದ ಎರಡು ವಾರಗಳಿಂದ ಮಳೆ ಉತ್ತಮವಾಗಿ ಆಗುತ್ತಿರುವುದರಿಂದ ನಾಟಿ ಕಾರ್ಯ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಶೇ 80% ರಷ್ಟು ಭತ್ತ ನಾಟಿಯಾಗುವುದರಿಂದ ಈ ಬಾರಿ ತಡವಾಗಿ ಮಳೆಯಾದ್ದರಿಂದ ಅಗೆ ವಡಿ ತಯಾರಿ ತಡವಾಗಿದ್ದು ನಾಟಿ ಕಾರ್ಯ ಕೂಡ ತಡವಾಗುವುದರಿಂದ ಭತ್ತದ ಬೆಳೆಯ ಇಳುವರಿ ಮೇಲೆ ಪರಿಣಾಮ ಬೀರುವ ಸಂಭವವಿರುತ್ತದೆ.
ಮೆಕ್ಕೆಜೋಳ:- ಬೆಳೆಯು 75-90 ದಿನಗಳ ಬೆಳೆಯಾಗಿದ್ದು, ಮುಸುಕಿನ ಜೋಳದ ಬೆಳೆಗೆ ಈ ಬಾರಿ ಪೂರಕ ಹವಾಮಾನವಿದ್ದು ಬೆಳೆ ಹೂವಾಡುವ ಹಂತದಲ್ಲಿದೆ. ಮುಸುಕಿನ ಜೋಳದಲ್ಲಿ ಹೈಬ್ರಿಡ್ ತಳಿಗಳಾದ ಡಿಕೆಸಿ, ಅಗ್ರೋಸಿಸ್, ಹೈಟೆಕ್, ಸಿಪಿ 212, ಸಿಪಿ 201 ಬೆಳೆಯುತ್ತಾರೆ.

ಕಬ್ಬು:- ಬೆಳೆಯು 5-7 ತಿಂಗಳ ಬೆಳೆಯಾಗಿದ್ದು, ಬೆಳೆಯು ಸಾಧಾರಣದಿಂದ ಉತ್ತಮವಾಗಿರುತ್ತದೆ. ಈ ವರ್ಷ ಕಬ್ಬಿನ ಬೆಳೆಗೆ ಸಾಧಾರಣ ಮಳೆಯಾದ್ದರಿಂದ ಬೆಳೆಗೆ ಪೂರಕವಾದ ವಾತಾವರಣವಿದೆ. ಸಕ್ಕರೆ ತಯಾರಿಕೆಗಾಗಿ ಶೇ 80% ರಷ್ಟು ಕಬ್ಬನ್ನು ಬೆಳೆಯುತ್ತಿದ್ದು ಹೆಚ್ಚಾಗಿ ಚಂದಗಡ್ ತಳಿಯನ್ನು ಬೆಳೆಯುತ್ತಾರೆ.
















Prathidvani Yellapura