
ಪ್ರತಿಧ್ವನಿ ಯಲ್ಲಾಪುರ : ವಂದೇಮಾತರಂ ಕೇವಲ ಒಂದು ಗೀತೆಯಲ್ಲ, ಸ್ವಾತಂತ್ರ್ಯ ಪೂರ್ವದಲ್ಲೂ ಸ್ವಾತಂತ್ರ್ಯೋತ್ತರದಲ್ಲೂ ಭಾರತವನ್ನು ಒಗ್ಗೂಡಿಸಿದ ಮಹಾನ್ ಶಕ್ತಿ. ದೇಶಭಕ್ತಿಯ ಜಾಗರಣೆಯಲ್ಲಿ ಈ ಕಾದಂಬರಿ ಮಹತ್ವದ ಕೊಡುಗೆ ನೀಡಿದೆ ಎಂದು ಡಾ| ಮಹೇಶ ಭಟ್ಟ ಇಡಗುಂದಿ ಹೇಳಿದರು.

ಅವರು, ರವಿವಾರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಗಂಗಾಧರೇಂದ್ರಸರಸ್ವತೀ ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಸಮಿತಿಯು “ವಂದೇಮಾತರಂ ಶಕ್ತಿ ಭಕ್ತಿ” ಎಂಬ ಶೀರ್ಷಿಕೆಯಲ್ಲಿ ಆಯೋಜಿಸಿದ್ದ ಬಂಕಿಮಚಂದ್ರರ ಆನಂದಮಠ ಕಾದಂಬರಿ ಆಧಾರಿತ ಚರ್ಚಾಗೋಷ್ಠಿಯ ಸಮನ್ವಯಕಾರರಾಗಿ ಮಾತನಾಡಿದರು.
ಶೈಕ್ಷಣಿಕ ಸಲಹೆಗಾರ ಡಾ| ದತ್ತಾತ್ರೇಯ ಗಾಂವ್ಕರ್ ಮಾತನಾಡಿ, ಕಾದಂಬರಿಯ ತಾತ್ವಿಕ ನೆಲೆಗಳನ್ನು ವಿಶ್ಲೇಷಿಸಿ, ಭಾರತದ ರಾಷ್ಟ್ರೀಯ ಆಂದೋಲನವನ್ನು ಸಮರ್ಪಕವಾಗಿ ಮುನ್ನಡೆಸಿದ ವಂದೇ ಮಾತರಂ ಗೀತೆ ಈ ಕಾದಂಬರಿಯ ಫಲಶೃತಿ, ಕಾದಂಬರಿಯ ಎಲ್ಲಾ ಮಜಲುಗಳೂ ಈ ದೇಶದ ಸಾಂಸ್ಕೃತಿಕ ಅಸ್ಮಿತೆಯನ್ನು ಸಾರುತ್ತವೆ ಎಂದರು.
ವಿ|ರಾಜಶೇಖರ ಧೂಳಿ ಮಾತನಾಡಿ, ಈ ಕಾದಂಬರಿಯು ಕೇವಲ ಬಂಗಾಳಕ್ಕಷ್ಟೇ ಸೀಮಿತವಾದದ್ದಲ್ಲ. ಈ ಸಾಹಿತ್ಯವೊಂದು ರಾಷ್ಟ್ರಕಟ್ಟುವ ಚಿಂತನೆ ಹೊಂದಿದ ಈ ಗೀತೆ ಮತ್ತು ಕಾದಂಬರಿಯ ಚಿಂತನೆಗಳು ದೇಶದ ಭವಿಷ್ಯತ್ತಿಗೆ ಭದ್ರ ಬುನಾದಿ ಹಾಕಿದೆ. ಶತಮಾನ ಕಳೆದರೂ ಇಂದಿಗೂ ಬಂಕಿಮ ಚಂದ್ರ ಚಟರ್ಜಿ ಯವರು ಬದುಕಿನ ಚೈತನ್ಯವನ್ನೇ ನೀಡಿ, ನಮ್ಮ ಬದುಕಿಗೆ ಆದರ್ಶಪ್ರಾಯರಾಗಿ ನಿಂತಿದ್ದಾರೆ ಎಂದರು.
ಅ.ಭಾ.ಸಾ.ಪ ತಾಲೂಕಾಧ್ಯಕ್ಷ ಜಿ.ಎಸ್.ಗಾಂವ್ಕರ ಕಂಚಿಪಾಲ ಉಪಸ್ಥಿತರಿದ್ದರು. ನಾಗಶ್ರೀ ಹೆಗಡೆ ಪ್ರಾರ್ಥಿಸಿದರು. ತಾಲೂಕಾ ಸಹಕಾರ್ಯದರ್ಶಿ ಪುಷ್ಪಾ ಮಾಳಕೊಪ್ಪ ಸ್ವಾಗತಿಸಿದರು. ಮಕ್ಕಳ ಪ್ರಕಾರದ ಮುಖ್ಯಸ್ಥೆ ಸುಜಾತಾ ಹೆಗಡೆ ಕಾಗಾರಕೊಡ್ಲು ನಿರ್ವಹಿಸಿದರು. ತಾಲುಕಾ ಕಾರ್ಯದರ್ಶಿ ಶ್ರೀರಾಮ ಲಾಲಗುಳಿ ವಂದಿಸಿದರು. ಪ್ರಸಾದಿನಿ ಭಟ್ಟ ವಂದೇಮಾತರಂ ಗೀತೆ ಪ್ರಸ್ತುತಪಡಿಸಿದರು.













Prathidvani Yellapura