
ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯನ್ನು ಪ್ರಸ್ತಾಪಿತ ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ಸೇರಿಸುವ ಕುರಿತ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಅದೇ ರೀತಿ ಶಾಸಕ ಶಿವರಾಮ ಹೆಬ್ಬಾರ್ ಕೂಡ ಉ.ಕ.ಜಿಲ್ಲೆಯನ್ನು ಧಾರವಾಡ ಪೀಠದಿಂದ ಪ್ರಸ್ಥಾಪಿತ ಮಂಗಳೂರು ಪೀಠದ ವ್ಯಾಪ್ತಿಗೆ ಒಳಪಡಿಸುವುದನ್ನು ಖಂಡತುಂಡಾಗಿ ವಿರೋದಿಸಿದ್ದರು.

ಸದ್ಯ ರಾಜ್ಯದಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿದ್ದು ಇದೇ ವಿಚಾರವನ್ನು ಶಾಸಕ ಹೆಬ್ಬಾರ್ ಸದನದ ಗಮನಕ್ಕೆ ತಂದು ಉತ್ತರ ಕನ್ನಡ ಜಿಲ್ಲೆಯನ್ನು ಧಾರವಾಡ ಪೀಠದಲ್ಲಿ ಮುಂದುವರೆಸುವಂತೆ ಮೌಲ್ಯಯುತ ಕಾರಣಗಳೊಂದಿಗೆ ಕೋರಿದ್ದರು.


ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಕರ್ನಾಟಕ ಉಚ್ಚ ನ್ಯಾಯಾಲಯದ ರಿಜಿಸ್ಟಾರ್ ಜನರಲ್ ಅವರಿಗೆ ಕ್ರಮಕ್ಕಾಗಿ ಪತ್ರ ಬರೆಯಲಾಗಿದೆ ಎಂದು ಲಿಖಿತ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜಿಲ್ಲೆಯ ಒಳಿತಿಗಾಗಿ ಯಾವುದೇ ಪಕ್ಷ,ಧರ್ಮ,ಜಾತಿಯ ಭೇದವಿಲ್ಲದೆ ಉತ್ತರ ಕನ್ನಡ ಜಿಲ್ಲೆಯ ಅಸ್ಮಿತೆಯ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.











Prathidvani Yellapura