
ಪ್ರತಿಧ್ವನಿ ಯಲ್ಲಾಪುರ : ಕರ್ನಾಟಕ ರಾಜ್ಯ ಸರ್ಕಾರದ ನೌಕರರ ಸಂಘ ಹಾಗೂ ಸಾಹಿತ್ಯ ಪರಿಷತ್ತು, ಬೆಂಗಳೂರು – ಉತ್ತರ ಕನ್ನಡ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ದಿನಾಂಕ “ಸಾಂಸ್ಕೃತಿಕ ವೈಭವ – ಉತ್ತಮ ಸೇವಾ ಸಂಸ್ಥೆ” ಕಾರ್ಯಕ್ರಮಕ್ಕೆ 6-9-2026 ರ ರವಿವಾರದಂದು ಯಲ್ಲಾಪುರದ ಅಡಿಕೆ ಭವನದಲ್ಲಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜರುಗಲಿದ್ದು ವೇದಿಕೆಯಲ್ಲಿ ಉತ್ತಮ ಸೇವಾ ಸಂಸ್ಥೆ ಹಾಗು ಕಾಯಕ ರತ್ನ ಪ್ರಶಸ್ತಿ ಪ್ರಧಾನ ನೆರವೇರಲಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಸಂತೋಷ್ ಕುಮಾರ್ ಪಾಟೀಲ್ ಹೇಳಿದರು.
ಅವರು ಕಾರ್ಯಕ್ರಮದ ಕುರಿತಾಗಿ ವಿವರಣೆ ನೀಡಲು ಪಟ್ಟಣದ “ಶಿವಶಂಕರ ನಿಲಯ” ದಲ್ಲಿ ಕರೆಯಲಾದ ಸುದ್ದಿಗೋಷ್ಟಿಯಲ್ಲಿ ಆಮಂತ್ರಣ ಬಿಡುಗಡೆ ಮಾಡಿ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯ ಯಲ್ಲಾಪುರ ಘಟಕದ ಅಕ್ಕ ಶಿವಲೀಲಾ ಅವರ ದಿವ್ಯ ಸಾನಿಧ್ಯವಿರಲಿದೆ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆನರ ವೃತ್ತದ ಟಿ,ಹೀರಾಲಾಲ್, ಉಪ ವಿಭಾಗಾಧಿಕಾರಿ ಚಂದ್ರಶೇಖರ ಆರ್.ಜಿ, ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ಡಿ.ಆರ್.ನಾಯ್ಕ್, ಡಿ.ವೈ.ಎಸ್.ಪಿ ಗೀತಾಪಾಟೀಲ್,ಯಲ್ಲಾಪುರ ತಹಶಿಲ್ದಾರ ಮಧುಸೂದನ್ ಕುಲಕರ್ಣಿ,ಶಿರಸಿ ತಹಶಿಲ್ದಾರ ಪುಟ್ಟರಾಜ ಗೌಡ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ಸ.ಔ.ಸಂ ಜಿಲ್ಲಾಧ್ಯಕ್ಷ ಕಿರಣ್ ನಾಯ್ಕ್ ಸೇರಿದಂತೆ ಹಲವಾರು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಲೇಖಕಿ ಶಿವಲೀಲಾ ಹುಣಸಗಿ ಮಾಹಿತಿ ನೀಡಿದರು.
ಸಾಂಸ್ಕೃತಿಕ ವೈಭವದ ನಿಮಿತ್ತ ವೇದಿಕೆಯಲ್ಲಿ ಮುಂಡಗೋಡಿನ ಜ್ಞಾನ ಪ್ರಜ್ಞಾ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳ ಸಂಗೀತ ಕಾರ್ಯಕ್ರಮ, ಭರತನಾಟ್ಯ, ಯಕ್ಷಗಾನ, ಶಿಕ್ಷಕಿಯರ ಜಾನಪದನೃತ್ಯ, ಗೌಳಿ ಜನಾಂಗದ ಸಾಂಪ್ರದಾಯಿಕ ನೃತ್ಯ, ಹಾಲಕ್ಕಿ ಒಕ್ಕಲಿಗರ ಕುಣಿತ, ಸಿದ್ದಿ ಸಮುದಾಯದ ವಿಶೇಷ ನೃತ್ಯ ನೋಡುಗರ ಕಣ್ಮನ ಸೆಳೆಯಲಿದ್ದು ಇದೇ ಸಂದರ್ಭದಲ್ಲಿ ” ತ್ರಿವೇಣಿಯಂತರಂಗ ” ಪುಸ್ತಕ ಬಿಡುಗಡೆಯು ಜರುಗಲಿದೆ ಎಂದು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಐನಾಪುರ ವಿವರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕೋಶಾಧ್ಯಕ್ಷ ಮೋಹನ ಗೌಡ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ಸಿಗೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು.










Prathidvani Yellapura