
ಪ್ರತಿಧ್ವನಿ ಯಲ್ಲಾಪುರ : 1997 ರಲ್ಲಿ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮಿಗಳ ಆಶಿರ್ವಾದದಿಂದ ಪ್ರಾರಂಭವಾದ ವಿಕಾಸ್ ಅರ್ಬನ್ ಬ್ಯಾಂಕ್ ರಾಷ್ಟ್ರ ಮಟ್ಟದ ಆರ್ಥಿಕ ಏರಿಳಿತ,ಸ್ಥಳೀಯವಾಗಿ ಬ್ಯಾಂಕ್ ಸಂಖ್ಯೆ ಹೆಚ್ಚುತ್ತಿರುವುದರ ನಡುವೆಯು ಉತ್ತಮ ಪ್ರಗತಿ ಸಾಧಿಸಿ ಲಾಭದಾಯಕ ನಡೆಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ, ಇದಕ್ಕೆ ನಮ್ಮ ಆರ್ಥಿಕ ಸಂಸ್ಥೆಯ ಮೇಲಿನ ಗ್ರಾಹಕರ ಭರವಸೆ, ಸಿಬ್ಬಂದಿಗಳ ನಿಷ್ಠೆ, ಆಡಳಿತ ಮಂಡಳಿಯ ದೂರದೃಷ್ಟಿ ಯೋಜನೆಗಳು ಕಾರವಾಗಿದ್ದು ಸರ್ವರಿಗು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ವಿಕಾಸ್ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ ಹೇಳಿದರು.

ಅವರು ಪಟ್ಟಣದ ವಿಕಾಸ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ 29 ನೆ ವಾರ್ಷಿಕ ಸಾಮಾನ್ಯ ಸಭೆಯ ಕುರಿತು ಕರೆಯಲಾದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು.

ಬ್ಯಾಂಕ್ ಪ್ರಸಕ್ತ ವರ್ಷದಲ್ಲಿ11027 ಸದಸ್ಯರನ್ನು ಒಳಗೊಂಡಿದ್ದು 989.76 ಲಕ್ಷ ಶೇರು ಬಂಡವಾಳ ಹೊಂದಿದೆ.1145.83 ಲಕ್ಷ ಕಾಯ್ದಿಟ್ಟ ಮತ್ತು ಇತರೆ ನಿಧಿಗಳನ್ನು ಒಳಗೊಂಡಿದೆ, ಸಾಲ ಮತ್ತು ಮುಂಗಡಗಳು 16993.32 ಲಕ್ಷ ಇದ್ದು ಕಳೆದ ಸಾಲಿಗಿಂತ ಶೇಕಡಾ1.33 ಪ್ರಮಾಣದ ಹೆಚ್ಚಳ ಸಾಧಿಸಿದೆ. ಗುಂತಾವಣೆಗಳು 4454.95 ಲಕ್ಷ ಹೊಂದಿದ್ದು 22988.82 ಲಕ್ಷ ದುಡಿಯುವ ಬಂಡವಾಳ ಹೊಂದಿದ್ದು ಕಳೆದ ಸಾಲಿಗಿಂತ ಶೇಕಡಾ 5.68 ರಷ್ಟು ಹೆಚ್ಚಳ ಸಾಧಿಸಿದೆ.ಸಾಲ ವಸೂಲಾತಿ ಶೇಕಡಾ92.60 ರಷ್ಟಿದ್ದು ಶೇಕಡಾ 7.27 ಎನ್.ಪಿ.ಎ ಇದೆ, ಆಧಾಯ ತೆರಿಗೆ ಪಾವತಿಯ ನಂತರ ಬ್ಯಾಂಕ್ 72.91 ಲಕ್ಷ ಲಾಭದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ವಿವರಿಸಿದರು.

ಬ್ಯಾಂಕ್ ಇತ್ತೀಚಿನ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳುವುದು ನಮ್ಮ ನೀತಿಯಾಗಿದ್ದು ಶೀಘ್ರವಾಗಿ ಯು.ಪಿ.ಐ ಸೇವೆ ನೀಡಲು ಸಿದ್ದತೆ ಸಾಗಿದೆ. ರಾಜ್ಯದ ಮುಖ್ಯ ಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ,ಜಿ.ಪರಮೇಶ್ವರ್, ಸಹಕಾರಿ ಸಚಿವರು ಹಾಗು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಲಕ್ಷ್ಮಣ ಸವದಿ, ಉತ್ತರ ಕನ್ನಡ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ್, ಹಾಗು ನಮ್ಮ ಬ್ಯಾಂಕ್ ಕಾರ್ಯಕ್ಷೇತ್ರದ ಎಲ್ಲಾ ಸಚಿವರು, ಶಾಸಕರು, ವಿವಿಧ ಸ್ತರದ ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಬ್ಯಾಂಕ್ ಕೃತಜ್ಞತೆ ಅರ್ಪಿಸುತ್ತದೆ ಎಂದರು.

ದಿನಾಂಕ 27-08-2026 ರ ಗುರುವಾರ ಮದ್ಯಾಹ್ನ 4 ಗಂಟೆಗೆ ಎಪಿಎಂಸಿ ಅಡಿಕೆ ಭವನದಲ್ಲಿ ಬ್ಯಾಂಕ್ ವಾರ್ಷಿಕ ಸಭೆ ನಡೆಯಲಿದ್ದು ಸರ್ವಸದಸ್ಯರು ಆಗಮಿಸಿ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಪರವಾಗಿ ಕೋರುತ್ತೇವೆ ಎಂದರು.

ಸುದ್ದಿಗೋಷ್ಟಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ನರಸಿಂಹ ಸೀತಾರಾಮ ಭಟ್ಟ, ನಿರ್ದೇಶಕರಾದ ಡಿ,ಶಂಕರ ಭಟ್ಟ, ಸದಾನಂದ ರಾಮಚಂದ್ರ ಭಟ್ಟ, ಸುಭ್ರಾಯ ಕೃಷ್ಣ ಭಾಗ್ವತ್, ಶಿವರಾಮ ಮಹಾಬಲೇಶ್ವರ ಭಟ್ಟ, ರಾಜೇಂದ್ರ ಬದ್ದಿ, ಲೋಕೇಶ ಈಶ್ವರ ಗಿಡ್ಡನ್, ವಿಜಯಶ್ರೀ ಅನಂತ ವೈದ್ಯ, ಪ್ರಿಯ ವಿಶ್ವೇಶ್ವರ ಗಾಂವ್ಕರ್, ವೃತ್ತಿಪರ ನಿರ್ದೇಶಕರು ರವಿ ಮಹಾಬಲೇಶ್ವರ ಹುಳ್ಸೆ ಹಾಗು ಪ್ರಭಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಪ್ರಭಾಕರ ಬಿಳಗಿಕರ ಉಪಸ್ಥಿತರಿದ್ದರು.








Prathidvani Yellapura