
ಪ್ರತಿಧ್ವನಿ ಯಲ್ಲಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳವು ಶತಮಾನಗಳಿಂದ ದಾನ, ಧರ್ಮ, ಸೇವೆ ಮತ್ತು ಮಾನವೀಯತೆಯ ಆದರ್ಶವನ್ನು ಸಮಾಜಕ್ಕೆ ಸಾರುತ್ತಾ ಬಂದಿದೆ. ಅನ್ನದಾನ, ವಿದ್ಯಾದಾನ, ಆರೋಗ್ಯ ಸೇವೆ, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ, ಸ್ವಾವಲಂಬನೆ, ಉದ್ಯೋಗ ಸೃಷ್ಟಿ, ಕೃಷಿ ಅಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ಮದ್ಯವ್ಯರ್ಜನ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಈ ಸೇವಾ ಪರಂಪರೆ ಇನ್ನಷ್ಟು ವಿಸ್ತಾರಗೊಂಡಿದೆ ಎಂದು ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ಹೇಳಿದರು.

ಅವರು ಯಲ್ಲಾಪುರದ ವೇದವ್ಯಾಸ ಕಲ್ಯಾಣ ಮಂಟಪ ವೆಂಕಟರಮಣ ಮಠದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಯಲ್ಲಾಪುರ ಮತ್ತು ಮೂಡುಗೋಡು ವ್ಯಾಪ್ತಿಯ ಒಕ್ಕೂಟಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆ ನಡೆಯನ್ನು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಂದುವರೆದು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಜನರಲ್ಲಿ ಉಳಿತಾಯದ ಮನೋಭಾವ, ಆರ್ಥಿಕ ಶಿಸ್ತು, ಸ್ವಾವಲಂಬನೆ ಹಾಗೂ ಉದ್ಯಮಶೀಲತೆಯನ್ನು ಬೆಳೆಸಲಾಗುತ್ತಿದೆ. ಸ್ವಸಹಾಯ ಸಂಘಗಳ ಮೂಲಕ ಸಾವಿರಾರು ಕುಟುಂಬಗಳು ಸಂಘಟಿತರಾಗಿ ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುವ ಶಕ್ತಿ ಪಡೆದಿವೆ. “ದಾನವೆಂದರೆ ಕೇವಲ ಹಣ ನೀಡುವುದಲ್ಲ; ಒಬ್ಬ ವ್ಯಕ್ತಿ ತನ್ನ ಕಾಲಿನ ಮೇಲೆ ನಿಲ್ಲುವಂತೆ ಮಾಡುವುದು ಕೂಡ ಮಹಾದಾನ” ಎಂಬ ಆಶಯವನ್ನು ಧರ್ಮಸ್ಥಳದ ಸೇವಾ ಕಾರ್ಯಗಳು ಸಾಕಾರಗೊಳಿಸುತ್ತಿವೆ ಎಂದರು.
ಸಭೆಯಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರಸಿ ಜಿಲ್ಲಾ ನಿರ್ದೇಶಕ ದಿನೇಶ್ ಎಂ. ಅವರು, ಯಲ್ಲಾಪುರ ಮತ್ತು ಮೂಡುಗೋಡು ವ್ಯಾಪ್ತಿಯಲ್ಲಿ 2,359 ಪ್ರಗತಿಬಂಧು ಸ್ವಸಹಾಯ ಸಂಘಗಳಿದ್ದು, ಒಟ್ಟು 21,231 ಸದಸ್ಯರು ಇದ್ದಾರೆ. ಸಂಘಗಳ ಮೂಲಕ ಸುಮಾರು ₹10 ಕೋಟಿ ಉಳಿತಾಯ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.
ವಿಮಾ ಹಾಗೂ ಆರೋಗ್ಯ ರಕ್ಷಣಾ ಕಾರ್ಯಕ್ರಮಗಳ ಮೂಲಕವೂ ಸದಸ್ಯರಿಗೆ ಮಹತ್ವದ ನೆರವು ದೊರೆತಿದೆ. ಸುರಕ್ಷಾ ಯೋಜನೆಯಡಿ ₹15 ಲಕ್ಷ, ಆರೋಗ್ಯ ರಕ್ಷಾ ಯೋಜನೆಯಡಿ ₹14 ಲಕ್ಷ ಹಾಗೂ ಪ್ರಗತಿ ರಕ್ಷಾ ಕವಚದಡಿ ₹1 ಕೋಟಿಗೂ ಹೆಚ್ಚು ಪ್ರಯೋಜನ ಸದಸ್ಯರಿಗೆ ದೊರೆತಿದೆ. ಸ್ವಸಹಾಯ ಸಂಘಗಳ ಮೂಲಕ ಬದುಕನ್ನು ಹೇಗೆ ಕಟ್ಟಿಕೊಳ್ಳಬಹುದು ಎಂಬುದನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಜನರಿಗೆ ತೋರಿಸಿಕೊಟ್ಟಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಯಲ್ಲಾಪುರ ಮತ್ತು ಮೂಡುಗೋಡು ವ್ಯಾಪ್ತಿಯ ಎಲ್ಲಾ ಒಕ್ಕೂಟಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು. ತಾಲೂಕಿನ ಯೋಜನಾಧಿಕಾರಿ ಸಂತೋಷ್ ಎ.ಎಸ್. ಸ್ವಾಗತಿಸಿದರು. ಸೇವಾ ಪ್ರತಿನಿಧಿ ರಾಜೀವಿ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕರಾದ ಮಂತಯ್ಯ ವಂದಿಸಿದರು.
ತಾಲೂಕಿನ ಎಲ್ಲಾ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.








Prathidvani Yellapura