Breaking News

ಗುಟ್ಕಾ ನಿಷೇಧ: ಎಲ್ಲೆಲ್ಲು ಅಡಿಕೆಯದ್ದೇ ಚರ್ಚೆ – ಅಡಿಕೆ ರೈತರಿಗೆ ಶಾಕ್!

    ಪ್ರತಿಧ್ವನಿ ಯಲ್ಲಾಪುರ :  ರಾಜ್ಯದಲ್ಲಿ ತಂಬಾಕು ಹಾಗೂ ನಿಕೋಟಿನ್‌ಯುಕ್ತ ಗುಟ್ಕಾ ಮತ್ತು ಪಾನ್ ಮಸಾಲಾ ಉತ್ಪನ್ನಗಳ ಉತ್ಪಾದನೆ, ಶೇಖರಣೆ, ವಿತರಣೆ, ಸಾಗಣೆ ಹಾಗೂ ಮಾರಾಟಕ್ಕೆ ರಾಜ್ಯ ಸರ್ಕಾರ ಒಂದು ವರ್ಷದ ಅವಧಿಗೆ ನಿಷೇಧ ಹೇರಿದೆ. ಇದೀಗ ಇದು ರಾಜ್ಯದ ಅಡಿಕೆ ಬೆಳೆವ ರೈತರ ಆತಂಕಕ್ಕೆ ಕಾರಣವಾಗಿದೆ.


    ಅಡಿಕೆ ಬೆಳೆಯನ್ನೇ ನಂಬಿ ಬದುಕುವ ಸಾವಿರಾರು ಕುಟುಂಬಗಳಿರುವ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ,  ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಲೆನಾಡು ಮತ್ತು ಕರಾವಳಿ, ಮಧ್ಯ ಕರ್ನಾಟಕ ಭಾಗಗಳಲ್ಲಿ ಸರ್ಕಾರದ ಈ ನಿರ್ಧಾರ ಈಗ ಚರ್ಚೆಗೆ ಗ್ರಾಸವಾಗಿದೆ. ವಿಶೇಷವಾಗಿ ಹೊಸ ಅಡಿಕೆ ಮಾರುಕಟ್ಟೆಗೆ ಬರುವ ಅವಧಿಗೆ ಮುನ್ನವೇ ನಿಷೇಧ ಜಾರಿಯಾಗಿರುವುದು ಬೆಳೆಗಾರರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.


    ಗುಟ್ಕಾ ಹಾಗೂ ಪಾನ್ ಮಸಾಲಾ ಉದ್ಯಮದಲ್ಲಿ ಅಡಿಕೆಯ ಬಳಕೆಯು ಇರುವುದರಿಂದ, ಈ ಉತ್ಪನ್ನಗಳ ಮಾರುಕಟ್ಟೆ ಕುಗ್ಗಿದರೆ ಅಡಿಕೆಗೆ ಸಂಬಂಧಿಸಿದ ಕೈಗಾರಿಕಾ ಬೇಡಿಕೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಬೆಳೆಗಾರರು ಉತ್ಪಾದಿಸಿದ ಅಡಿಕೆಯನ್ನು ತಕ್ಷಣ ಮಾರಾಟ ಮಾಡಲು ಮುಂದಾದರೆ, ವ್ಯಾಪಾರಿಗಳು ಕಡಿಮೆ ಬೆಲೆಗೆ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯೂ ಇದೆ.
    ಪ್ರಸ್ತುತ ಅಡಿಕೆ ಬೆಳೆಗಾರರು ಮುಂದಿನ ಮಾರುಕಟ್ಟೆ ಹಂತದತ್ತ ಗಮನಹರಿಸಿರುವ ಸಂದರ್ಭದಲ್ಲಿ ಈ ಅಧಿಸೂಚನೆ ಹೊರಬಿದ್ದಿದೆ. ಹೊಸ ಅಡಿಕೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶಿಸುವ ಸಮಯದಲ್ಲಿ ಬೇಡಿಕೆ ಕುಸಿದರೆ, ಒಂದೇ ಅವಧಿಯಲ್ಲಿ ಮಾರುಕಟ್ಟೆಗೆ ಬರುವ ಹೆಚ್ಚಿನ ಪ್ರಮಾಣದ ಅಡಿಕೆ ಮತ್ತು ಕಡಿಮೆಯಾಗುವ ಬೇಡಿಕೆ ಬೆಲೆ ಮೇಲೆ ದ್ವಿಮುಖ ಒತ್ತಡ ತರಬಹುದು ಎಂಬ ಆತಂಕ ವ್ಯಕ್ತವಾಗಿದೆ.


    ಅಡಿಕೆ ಬೆಳೆಗಾರರ ಪ್ರಮುಖ ಆದಾಯ ವರ್ಷಕ್ಕೆ ಒಂದೇ ಬಾರಿ ಅಥವಾ ನಿರ್ದಿಷ್ಟ ಹಂತಗಳಲ್ಲಿ ದೊರೆಯುವುದರಿಂದ, ಮಾರುಕಟ್ಟೆ ಬೆಲೆ ಕುಸಿದ ಸಂದರ್ಭದಲ್ಲಿ ಉತ್ಪಾದನಾ ವೆಚ್ಚವನ್ನು ಸರಿದೂಗಿಸುವುದೇ ಕಷ್ಟವಾಗಬಹುದು.
    ಮಲೆನಾಡಿನಲ್ಲಿ ಅಡಿಕೆ ಆಧಾರಿತ ಆರ್ಥಿಕತೆಯನ್ನು ಅವಲಂಬಿಸಿರುವ ಕೃಷಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಸ್ಥಳೀಯ ವರ್ತಕರು ಹಾಗೂ ಸಾರಿಗೆ ವಲಯಕ್ಕೂ ಮಾರುಕಟ್ಟೆ ಕುಸಿತದ ಹೊರೆ ತಟ್ಟುವ ಸಾಧ್ಯತೆ ಇದೆ.

    ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧದಿಂದ ಅಡಿಕೆ ಬೆಲೆ ಎಷ್ಟು ಪ್ರಮಾಣದಲ್ಲಿ ಕುಸಿಯಲಿದೆ ಎಂಬುದನ್ನು ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಅಡಿಕೆಗೆ ಸಾಂಪ್ರದಾಯಿಕ ಬಳಕೆ, ಪಾನ್ ಉದ್ಯಮ ಹಾಗೂ ಇತರ ಮಾರುಕಟ್ಟೆಗಳೂ ಇರುವುದರಿಂದ ಒಟ್ಟಾರೆ ಬೇಡಿಕೆಯಲ್ಲಿ ಉಂಟಾಗುವ ಬದಲಾವಣೆ ಹಲವು ಅಂಶಗಳ ಮೇಲೆ ಅವಲಂಬಿತವಾಗಿರಲಿದೆ. ಆದರೂ, ನಿಷೇಧಿತ ಉತ್ಪನ್ನಗಳ ಮಾರುಕಟ್ಟೆ ಕುಗ್ಗುವುದರಿಂದ ಅಡಿಕೆಯ ಒಂದು ಪ್ರಮುಖ ಬೇಡಿಕೆ ವಲಯ ದುರ್ಬಲವಾದರೆ, ಪೂರೈಕೆ ಹೆಚ್ಚಿರುವ ಸಂದರ್ಭದಲ್ಲಿ ಬೆಲೆ ಕುಸಿತದ ಅಪಾಯ ಹೆಚ್ಚಾಗಬಹುದು. ಇದೇ ಕಾರಣಕ್ಕೆ ಅಧಿಸೂಚನೆಯ ನೇರ ಉದ್ದೇಶ ಗುಟ್ಕಾ ನಿಯಂತ್ರಣವಾಗಿದ್ದರೂ, ಅದರ ಪರೋಕ್ಷ ಹೊರೆ ಅಡಿಕೆ ಬೆಳೆಗಾರರ ಮೇಲೆ ಬೀಳದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.


    ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯವಾದರೂ, ಅದೇ ಸಂದರ್ಭದಲ್ಲಿ ಅಡಿಕೆ ಬೆಳೆಗಾರರ ಆರ್ಥಿಕ ಹಿತಾಸಕ್ತಿಯನ್ನೂ ಸರ್ಕಾರ ಪರಿಗಣಿಸಬೇಕಾಗಿದೆ.
    ಅಡಿಕೆಗೆ ಪರ್ಯಾಯ ಮಾರುಕಟ್ಟೆ ವಿಸ್ತರಣೆ, ಮೌಲ್ಯವರ್ಧಿತ ಉತ್ಪನ್ನಗಳ ಉತ್ತೇಜನ, ಸಂಸ್ಕರಣಾ ಘಟಕಗಳಿಗೆ ಪ್ರೋತ್ಸಾಹ ಹಾಗೂ ಬೆಲೆ ಸ್ಥಿರತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಂಭವನೀಯ ಮಾರುಕಟ್ಟೆ ಆಘಾತದಿಂದ ಬೆಳೆಗಾರರನ್ನು ರಕ್ಷಿಸುವ ಅಗತ್ಯವಿದೆ.

    ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಜಾರಿಗೊಳಿಸಿರುವುದರಿಂದ ಅಡಿಕೆ ಬೆಳೆಗಾರರ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ರಾಜ್ಯದ ಸುಮಾರು 12 ಜಿಲ್ಲೆಗಳ ಲಕ್ಷಾಂತರ ರೈತರು ಅಡಿಕೆ ಬೆಳೆಯನ್ನೇ ತಮ್ಮ ಜೀವನೋಪಾಯದ ಆಧಾರವಾಗಿಸಿಕೊಂಡಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಅಡಿಕೆಗೆ ಬೇಡಿಕೆ ಕುಸಿಯುವ ಆತಂಕ ಎದುರಾಗಿದ್ದು, ರೈತರ ಆರ್ಥಿಕ ಸ್ಥಿತಿಗೆ ತೀವ್ರ ಹೊಡೆತ ಬೀಳಲಿದೆ. ಆದ್ದರಿಂದ ಸರ್ಕಾರ ಕೂಡಲೇ ಈ ನಿಷೇಧದ ಕುರಿತು ಮರುಪರಿಶೀಲನೆ ನಡೆಸಿ, ಅಡಿಕೆ ಬೆಳೆಗಾರರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ. ಈ ವಿಷಯವಾಗಿ ಜನಪ್ರತಿನಿಧಿಗಳ ನಿಯೋಗದೊಂದಿಗೆ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇನೆ  ಮಾಜಿ ಗೃಹ ಸಚಿವರು, ಅಡಿಕೆ ಮಹಾ ಮಂಡಲದ ಅಧ್ಯಕ್ಷರು ಆದ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

    ರಾಜ್ಯ ಸರ್ಕಾರ ದಿಡೀರ್ ನಿರ್ಧಾರ ಪ್ರಕಟಿಸಿ ಒಂದು ವರ್ಷದ ಅವಧಿಗೆ ನಿಕೋಟಿನ್ ಯುಕ್ತ ತಂಬಾಕು ಗುಟ್ಕ ಉತ್ಪಾದನೆ,ಮಾರಾಟಕ್ಕೆ ನಿರ್ಭಂದ ವಿಧಿಸಿರುವುದರ ಮಾಹಿತಿ ಅಸ್ಪಷ್ಟತೆಯಿಂದ ಕೂಡಿದೆ, ಒಂದು ವರ್ಷದ ಅವಧಿ ನಿಗಧಿಪಡಿಸಿರುವುದು ಯಾಚ ವಿಚಾಕ್ಕೆಂಬುದು ತಿಳಿಯುತ್ತಿಲ್ಲ. ಅಡಿಕೆ ಬೆಳೆಗಾರರ ರಕ್ಷಣೆಯ ಯಾವುದೆ ಸ್ಪಷ್ಟತೆ ಇಲ್ಲ. ರೈತರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಪರ್ಯಾಯ ಮಾರ್ಗೋಪಾಯದ ಮಾಹಿತಿ ಇಲ್ಲ. ಯಾವುದೆ ಅನಿಸಿಕೆ ನಿರ್ಧಾರ ತಿಳಿಸಲು ಸರ್ಕಾರ ರೈತರಿಗೆ ಮೊದಲು ಸ್ಪಷ್ಟತೆ ನೀಡಬೇಕಿದೆಶ್ರೀಪಾದ ಭಟ್, ಮಾಲಕರು, ಶ್ರೀ ಮಾತ ಟ್ರೇಡಿಂಗ್ ಕಂಪನಿ ಎಪಿಎಂಸಿ ಯಲ್ಲಾಪುರ.

    About Shyamala Nagesh

    ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

    Check Also

    ಬಸ್ ಅಪಘಾತದಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಿದ ಶಾಸಕ ಹೆಬ್ಬಾರ್ ಮತ್ತು ಪುತ್ರ ವಿವೇಕ್ ಹೆಬ್ಬಾರ್.

    ಪ್ರತಿಧ್ವನಿ ಯಲ್ಲಾಪುರ : ಮುಂಡಗೋಡ ತಾಲ್ಲೂಕಿನ ಶಿಡ್ಲಗುಂಡಿ ಗ್ರಾಮದಲ್ಲಿ ಬುಧವಾರ ಎರಡು ಸಾರಿಗೆ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ, ಬಸ್ ಚಾಲಕ …

    Leave a Reply

    Your email address will not be published. Required fields are marked *