




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ನಾಡಿನ ಜನತೆಯ ಹೆಮ್ಮೆಯ ಪ್ರತೀಕ ರಾಜಧಾನಿ ಬೆಂಗಳೂರಿನ ನಿರ್ಮಾತೃ ನಾಡ ಪ್ರಭು ಕೆಂಪೆಗೌಡರ ಜಯಂತಿ ಆಚರಣೆ ಅರ್ಥಪೂರ್ಣವಾಗಿದೆ. ವಿಶೇಷವಾಗಿ ಇಂದಿನ ಮಕ್ಕಳಲ್ಲಿ ಮಹಾನ್ ಪುರುಷರ ಜೀವನ ವೃತ್ತಾಂತ ಜಯಂತಿ ಆಚರಣೆಗಳ ಮೂಲಕವಾಗಿ ಅವರ ಸಾಧನೆಯ ಶ್ರೇಷ್ಟತೆಯನ್ನು ತಿಳಿಸುವುದು ತಿಳಿಯುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಕ್ಕಳಲ್ಲಿ ಮತ್ತು ಸಾರ್ವಜನಿಕರಲ್ಲಿ ಕೆಂಪೇಗೌಡರ ಶ್ರೇಷ್ಟತೆಯ ಕುರಿತು ಅರಿವು ಮೂಡಿಸುವ ಸಾರ್ಥಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯ ಎಂದು ತಾಲೂಕು ದಂಡಾಧಿಕಾರಿ ಅಶೋಕ್ ಭಟ್ ಹೇಳಿದರು.

ಅವರು ಪಟ್ಟಣದ ಕಾಳಮ್ಮನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕಾಡಳಿತ, ತಾ.ಪಂ, ಪ.ಪಂ, ಶಿಕ್ಷಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ನಾಡಪ್ರಭು ಕೆಂಪೆಗೌಡ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ನಾಡ ಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಪುಷ್ಪ ನಮನ ಸಲ್ಲಿಸಿ ದೀಪ ಬೆಳಗಿ ಮಾತನಾಡಿದರು.

ಕೆಂಪೇಗೌಡರ ಜೀವನ ವೃತ್ತಾಂತವನ್ನು ಇಂದಿನ ಮಕ್ಕಳು ಅರಿತು ಕೊಳ್ಳಬೇಕಿದೆ. ಅವರ ದೂರದೃಷ್ಟಿ ಭವಿಷ್ಯದ ಬೆಂಗಳೂರಿನ ಕಲ್ಪನೆ ಹೇಗಿರಬಹುದೆಂದು ಮೊದಲೆ ಅರಿತು ನಗರ ನಿರ್ಮಿಸಿದ್ದರು. ಅವರ ನಿರ್ಮಾಣದ ಕಾರ್ಯದಲ್ಲಿ ಕೆರೆಗಳ ನಿರ್ಮಾಣ ಬಹಳ ಮಹತ್ವ ಪಡೆದುಕೊಳ್ಳುತ್ತದೆ ಎಂದು ವಿಶ್ವದರ್ಶನ ಕಾಲೇಜು ಪ್ರಾಚಾರ್ಯ ಡಿ.ಕೆ ಗಾಂವ್ಕರ್ ಉಪನ್ಯಾಸ ನೀಡಿದರು.

ಕೆಂಪೆಗೌಡ ಜಯಂತಿ ಆಚರಣೆ ಪ್ರಯಕ್ತ ತಾಲೂಕು ಮಟ್ಟದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಕೆಂಪೇಗೌಡರ ಚಿತ್ರ ಬಿಡಿಸುವುದು, ಪ್ರಬಂಧ, ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸಿದವರಿಗೆ ಗೌರವಿಸಲಾಯಿತು.

ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ ಶ್ರೀರಕ್ಷಾ ಮತ್ತೊಮ್ಮೆ ತನ್ನ ಭಾಷಣದ ಮೂಲಕ ಸಭಿಕರ ಗಮನಸೆಳೆದಳು.

ವೇದಿಕೆಯಲ್ಲಿ ಗ್ರೇಡ್-2 ತಹಸೀಲ್ದಾರ ಸಿ.ಜಿ.ನಾಯ್ಕ್ , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ದ್ರಾಕ್ಷಾಯಿಣಿ ನಾಯ್ಕ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜ್ಯೋತಿ ನರೊಟ್ಟಿ, ಭೂ ಮಾಪನ ಇಲಾಖೆ ಅಧಿಕಾರಿ ವನಿತಾ ಪಾಟೀಲ್ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿನಿಯರ ನಾಡಗೀತೆ ಮತ್ತು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಸ್ವಾಗತಿಸಿದರು. ದೈಹಿಕ ಶಿಕ್ಷಕ ನಾರಾಯಣ ನಾಯಕ ವಂದಿಸಿದರು.
Prathidvani Yellapura