

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ, ಯಲ್ಲಾಪುರ: ಭವಿಷ್ಯದ ಪೀಳಿಗೆಯ ಉತ್ತಮ ಜೀವನ ನಿರ್ವಹಣೆಗಾಗಿ ಸ್ವಚ್ಚ ಹಾಗು ಸುಂದರ ಪರಿಸರವನ್ನು ರಕ್ಷಿಸಿ ವರ್ಗಾಯಿಸುವ ಹೊಣೆ ನಮ್ಮ ಮೇಲಿದೆ ಈ ದಿಸೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ವಿವಿಧ ರೂಪದಲ್ಲಿ ಯೋಜನೆ ರೂಪಿಸಿ ಅರಣ್ಯ ರಕ್ಷಣೆಗೆ ಮುಂದಾಗಿದೆ ಅದರಲ್ಲಿ ಪ್ರಮುಖವಾಗಿ ” ದೇವರ ಕಾಡು ” ನಿರ್ಮಾಣವು ಒಂದಾಗಿದೆ.

ಯಲ್ಲಾಪುರ ಪಟ್ಟಣದಿಂದ ಮುಂಡಗೋಡು ಸಾಗುವ ರಸ್ತೆಯಲ್ಲಿ ಕರ್ನಾಟಕ ವಾಯುವ್ಯ ಸಾರಿಗೆ ಯಲ್ಲಾಪುರ ಬಸ್ ಡಿಪೋ ಸಮೀಪ 75 ಹೆಕ್ಟೇರ್ ಪ್ರದೇಶದಲ್ಲಿ ಪ್ರಾರಂಭಿಕ ಹಂತದಲ್ಲಿ 20 ಲಕ್ಷ ವೆಚ್ಚದಲ್ಲಿ ಅರಣ್ಯ ಇಲಾಖೆ ವತಿಯಿಂದ ದೇವರ ಕಾಡು ನಿರ್ಮಾಣವಾಗುತ್ತಿದ್ದು ಸೊಂಡಿಲು ಇಳೆ ಬಿಟ್ಟ ಆನೆಗಳು ಸರ್ವರನ್ನು ಸ್ವಾಗತಿಸುತ್ತಿರುವ ಸುಂದರ ದ್ವಾರ ಬಾಗಿಲು ಸಿದ್ದವಾಗಿದೆ.



ಒಳಗಡೆಯಲ್ಲಿ ಬಿದಿರಿನ ಮತ್ತು ಮರದಿಂದ ಸಿದ್ದಪಡಿಸಿರುವಂತೆ ಕಾಣುವ ಸಿಮೆಂಟ್ ಬೇಂಚುಗಳು ಹಾಕಲಾಗಿದೆ.

ಎಲ್ಲಿಯು ಕಾಡಿನ ಪರಿಸರಕ್ಕೆ ದಕ್ಕೆಯಾಗದಂತೆ ತ್ಯಾಜ್ಯದಿಂದ ರಕ್ಷಿಸಲು ಮರದ ತುಂಡಿನ ಆಕೃತಿಯ ಸಿಮೆಂಟಿನ ಡಬ್ಬಿಗಳನ್ನು ಅಳವಡಿಸಲಾಗಿದೆ.

ಮತ್ತೊಂದು ತುದಿಯಲ್ಲಿ ಸಂಪೂರ್ಣ ಸಿಮೆಂಟ್ ನಲ್ಲಿ ಗುಹೆಯನ್ನು ನಿರ್ಮಿಸಿದ್ದು ಮಕ್ಕಳಿಗೆ ಬಲು ಪ್ರಿಯವಾಗಲಿದೆ. ಇನ್ನು ವಿವಿಧ ಚಿಂತನೆ ಅರಣ್ಯ ಇಲಾಖೆಯದ್ದಾಗಿದ್ದು ಅರಣ್ಯ ರಕ್ಷಣೆಗೆಂದು ತೆಗೆದು ಕೊಳ್ಳುವ ಎಲ್ಲಾ ಯೋಜನೆಗು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎನ್ನುತ್ತಿದೆ ಇಲಾಖೆ.
ಗ್ರಾಮೀಣ ಭಾಗದಲ್ಲಿ ಅರಣ್ಯ ಇಲಾಖೆ ಸಂಘಟಿಸಿರುವ ಗ್ರಾಮ ಅರಣ್ಯ ಸಮಿತಿಗಳು ಅತ್ಯಂತ ಕ್ರಿಯಾಶೀಲವಾಗಿ ಇಲಾಖೆಯೊಂದಿಗೆ ಕೈ ಜೋಡಿಸಿ ಅರಣ್ಯ ರಕ್ಷಣಾ ಸೇವೆ ಮಾಡುತ್ತಿವೆ. ಪ್ರಮುಖವಾಗಿ ಅರಣ್ಯಕ್ಕೆ ಬೆಂಕಿ ಬಿದ್ದಾಗ, ಕಾಡುಗಳ್ಳರಿಂದ ಅರಣ್ಯ ಲೂಟಿ ತಡೆಯಲು, ಕಾಡು ಪ್ರಾಣಿಗಳ ರಕ್ಷಣೆ, ಅರಣ್ಯ ಸಂಬಂಧಿಸಿದ ಜಾಗೃತಿಗಳಲ್ಲಿ ಪಾಲ್ಗೊಳ್ಳುವುದು ಇನ್ನಿತರ ಚಟುವಟಿಕೆಯಲ್ಲಿ ಪಾಲ್ಗೊಂಡು ಇಲಾಖೆಯೊಂದಿಗೆ ಕೈಜೋಡಿಸಿವೆ.

ಆದರೆ ಪಟ್ಟಣದೊಳಗೆ ಅಥವ ಪಟ್ಟಣದಂಚಿಗೆ ಹೊಂದಿಕೊಂಡ ಕಾಡು ಪ್ರದೇಶ ಅತಿಕ್ರಮಣವಾಗದಂತೆ ತಡೆಯಲು ಮರಗಳ ಮಾರಣ ಹೋಮ ತಪ್ಪಿಸಲು. ಕಾಡಿನಿಂದ ನಾಡಿಗೆ ಬರುವ ಜಿಂಕೆ,ನವಿಲು,ಮೊಲ,ಇತ್ಯಾದಿ ಕಾಡುಪ್ರಾಣಿ ಪಕ್ಷಿಗಳ ಪ್ರಾಣಕ್ಕೆ ಕುಂದುಂಟಾಗದಂತೆ ಮತ್ತೆ ಅರಣ್ಯಕ್ಕೆ ಬಿಡಲು ಇಂತಹ ” ದೇವರ ಕಾಡುಗಳು ” ವರದಾನವಾಗಲಿದೆ.

ಅರಣ್ಯ ಇಲಾಖೆ ಇಂತಹ ದೇವರ ಕಾಡು ನಿರ್ಮಾಣಕ್ಕೆ ಸುಮ್ಮನೆ ಯಾವುದೊ ಅರಣ್ಯವನ್ನು ಆಯ್ಕೆ ಮಾಡುವುದಿಲ್ಲ ಬದಲಾಗಿ ಆಯ್ಕೆ ಮಾಡಿಕೊಂಡ ಅರಣ್ಯ ಪ್ರದೇಶದಲ್ಲಿ ಅನಾದಿಕಾಲದಿಂದ ಪ್ರಕೃತಿ ಮಡಿಲಲ್ಲಿ ಸಾಂಪ್ರದಾಯಿಕ ಪೂಜಾ ಪದ್ದತಿಗಳ ಆಚರಣೆ ನಿರಂತರವಾಗಿದ್ದರೆ ಮಾತ್ರ ದೇವರ ಕಾಡು ಯೋಜನೆ ಅನುಷ್ಟಾನಕ್ಕೆ ತರಲಾಗುತ್ತದೆ.

ಕೆಲವು ಸ್ಥಳೀಯರು ದಸರ ಮತ್ತು ಹೊಸ ಬೆಳೆ ಬರುವ ಸಂದರ್ಭದಲ್ಲಿ ವನದೊಳಗಿನ ದೇವರಿಗೆ ಪೂಜೆ ಸಲ್ಲಿಸುವ ಪದ್ದತಿ ಇಂದಿಗು ಮುಂದುವರೆದಿದೆ.
ದೇವರ ಕಾಡಿನಲ್ಲಿ ಬಸರಿ,ಭರಣಗಿ ಕಿಂದಳಿ, ಹೆಬ್ಬಲಸು, ಬಿಳಿಮತ್ತಿ, ದೂಳುಬೈನೆ, ಅಶ್ವಥ ಇನ್ನಿತರ ಮರಗಳು ಹಾಗು ರಾಂಪತ್ರೆ, ಕಾಡುಹಳದಿ, ದಾಲ್ಚಿನ್ನಿ, ಗರಗ, ಪಾತಾಳ ಕಾಡುಮೆಣಸು ಇನ್ನಿತರೆ ಔಷದಿ ಸಸ್ಯಗಳು ಸ್ವಚ್ಚಂದವಾಗಿ ಬೆಳೆಯುತ್ತಿವೆ.ವಿಶೇಷವಾಗಿ ಅಳಿವಿನಂಚಿನ ಸಸ್ಯ ಪ್ರಭೇದಗಳ ರಕ್ಷಣೆಗೆ ಉಪಯುಕ್ತವಾಗಿದೆ..
ಈ ಅರಣ್ಯ ಪ್ರದೇಶ ಪಟ್ಟಣದ ಅಂಚಿಗೆ ಹೊಂದಿಕೊಂಡಿರುವುದರಿಂದ ಅತಿಕ್ರಮಣ,ಮರಕಡಿಯುವುದು, ತ್ಯಾಜ್ಯದ ರಾಶಿ ತಂದು ಸುರಿದು ಪರಿಸರ ಹಾನಿಮಾಡುವುದು ಮತ್ತು ಅನೈತಿಕ ಚಟುವಟಿಕೆ ನಡೆಸುವುದಕ್ಕೆ ಕಡಿವಾಣ ಹಾಕಿದ್ದು ಅರಣ್ಯ ರಕ್ಷಣೆಗೆ ಭಾವನಾತ್ಮಕ ಬೇಲಿ ಹಾಕಿ ದೇವರ ಕಾಡಿನ ಹೆಸರಿನಲ್ಲಿ ಸಂರಕ್ಷಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ವಾಗಿದೆ.

1200 ಮೀಟರ್ ಫೇವರ್ಸ್ ಅಳವಡಿಸಿದ್ದು ರಾಶಿಗಟ್ಟಲೆ ಘನ ತ್ಯಾಜ್ಯ ತಂದು ಸುರಿದಿರುವುದನ್ನು ಸ್ವಚ್ಚಗೊಳಿಸಿದ್ದು ನಕ್ಷತ್ರವನ,ದೇವಿವನದ ಸಿದ್ದತೆಗೆ ಚಿಂತನೆ ಮಾಡಲಾಗುತ್ತಿದೆ. ಅನಾದಿ ಕಾಲದಿಂದ ಪೂಜೆಗಳನ್ನು ನೆರವೇರಿಸಿಕೊಂಡು ಬರುತ್ತಿರುವ ದೈವ ಸಾನಿದ್ಯ ಯಥಾಸ್ಥಿತಿ ಕಾಪಾಡಲಾಗಿದೆ. ಈಗಾಗಲೆ ಒಂದು ಹಂತದ ಕೆಲಸಗಳು ಮುಕ್ತಾಯ ಹಂತ ತಲುಪಿದ್ದು ಸ್ಥಳೀಯ ರವೀಂದ್ರ ನಗರ ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಪ್ರಯತ್ನದಿಂದ ಬೆಳಕಿನ ವ್ಯವಸ್ಥೆ ಆಗಿದೆ. ಮುಂದೆ ಕೆಲವೆಡೆ ಕಾಂಪೌಂಡ್, ಮೆಶ್ ಫೆನ್ಸಿಂಗ್ ಮಾಡುವ ಯೋಜನೆ ಇದೆ. ಗಿಡಗಳಿಗೆ ರಕ್ಷಣೆ, ಪ್ಯಾರಾಗೋಲ, ಕುಡಿಯುವ ನೀರಿನ ವ್ಯವಸ್ಥೆ, ಕೊಳವೆ ಬಾವಿ ನಿರ್ಮಾಣ, ಸೇರಿದಂತೆ ಇನ್ನಿತರ ಉಪಯುಕ್ತ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಸರ್ಕಾರದ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಅರಣ್ಯ ಅಧಿಕಾರಿಗಳು

ನಮ್ಮ ಭೂಮಿಯನ್ನು ದೈವ ಸ್ವರೂಪದಲ್ಲಿ ಕಾಣುತ್ತೇವೆ. ಪಕೃತಿಯಲ್ಲಿನ ಚರಾಚರ ವಸ್ತುವಿನಲ್ಲು ದೈವತ್ವವಿದೆ ಎಂದು ನಂಬುತ್ತೇವೆ. ಅದರಂತೆ ನಮ್ಮ ಅರಣ್ಯ ಸಂಪತ್ತಿನ ರಕ್ಷಣೆ ಒಂದುರೀತಿಯಲ್ಲಿ ದೇವರ ಕಾರ್ಯ ಇದರ ರಕ್ಷಣೆಯಿಂದ ಅಂತರ್ಜಲ ಮಟ್ಟ ಏರಿಕೆಗೆ, ಸುರಿವ ವರ್ಷಧಾರೆಗೆ, ಜೀವಸಂಕುಲದ ಪ್ರಾಣವಾಯುಗೆ ಒಟ್ಟಿನಲ್ಲಿ ಮನುಕುಲ ಬದುಕಿನ ಹೆಜ್ಜೆಹೆಜ್ಜೆಗೆ ಅರಣ್ಯ ರಕ್ಷಣೆ ಅತ್ಯವಶ್ಯಕವಾಗಿದೆ. ಮುಂದೆ ಈ ಪ್ರದೇಶದಲ್ಲಿ ಪರಿಸರಕ್ಕೆ ಪೂರಕವಾದ ಯೋಜನೆಗಳನ್ನು ಅಳವಡಿಸುವ ಚಿಂತನೆ ಸಾಗಿದ್ದು ಭವಿಷ್ಯದ ಪೀಳಿಗೆಯ ಆರೋಗ್ಯಕರ ಬದುಕಿಗೆ ಅರಣ್ಯ ಉಳಿಸಿ,ಬೆಳೆಸಿ,ರಕ್ಷಿಸಿ ವರ್ಗಾಯಿಸುವ ಗುರುತರವಾದ ಜವಾಬ್ದಾರಿ ಅರಣ್ಯ ಇಲಾಖೆ ಮಾತ್ರವಲ್ಲದೆ ಸಾರ್ವಜನಿಕರ ಮೇಲು ಇದ್ದು ದೇವರ ಕಾಡು ಅಭಿವೃದ್ಧಿ ಪಡಿಸೋಣ.
ಆನಂದ್ ಹೆಚ್.ಎ , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಯಲ್ಲಾಪುರ ಉಪ ವಿಭಾಗ

Prathidvani Yellapura