


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಜೂ.8 ರಂದು ಸಹೋದರ ಅಪರಾಧಿಗಳಿಬ್ಬರು ಪೊಲೀಸರನ್ನು ತಳ್ಳಿ ಪರಾರಿಯಾಗಲು ಯತ್ನಿಸಿದ ಖೈದಿಗಳಿಬ್ಬರ ಚರಿತ್ರೆ ಪುಟವನ್ನು ತಿರುಗಿಸಿದರೆ ಬಲು ರೋಚಕ ಮತ್ತು ರೋಮಾಂಚಕವಾದ ವಿಷಯಗಳು ಹೊರಬರುತ್ತವೆ.

ಮೊನ್ನೆ ದಿನ ಯಲ್ಲಾಪುರದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತಂದ ಪ್ರಕಾಶ ಕೃಷ್ಣಾ ಸಿದ್ದಿ, ಪಿಲಿಪ್ ಕೃಷ್ಣಾ ಸಿದ್ದಿ ಸಹೋದರರಾಗಿದ್ದು ಅಪರಾಧ ಪ್ರಕರಣಗಳಿಗೂ ಇವರಿಗೂ ಅವಿನಾಭಾವ ಸಂಬಂಧವಿದೆ.

2020 ರಲ್ಲಿ ಒಬ್ಬನ ಮೇಲೆ ಫೋಕ್ಸೋ ಪ್ರಕರಣ ದಾಖಲಾಗಿದೆ. 2021 ರಲ್ಲಿ ಒಬ್ಬನ ಮೇಲೆ ಅನಧಿಕೃತ ಬಂದೂಕು ಹೊಂದಿರುವ ಪ್ರಕರಣ ದಾಖಲಾಗಿದೆ. 2022 ರಲ್ಲಿ ತಾಲೂಕಿನ ಸುತ್ತಮುತ್ತ ಬಹುತೇಕ ಹಳ್ಳಿಮನೆಗಳ ಅಂಗಳದಲ್ಲಿ ಒಣಗಿಸಲು ಇಟ್ಟ ಅಡಿಕೆಯನ್ನು ಕಳ್ಳತನ ಮಾಡಿರುವ ಪ್ರಕರಣಗಳು ಸಾಕಷ್ಟಿವೆ. 2022 ರಲ್ಲಿ ಔಷಧಿಗಳಿಗೆ ಬಳಸುವ, ಬೆಲೆ ಬಾಳುವ ಕಪ್ಪು ಅರಿಷಿಣ ಮಾರಾಟ ಮಾಡುವ ಉದ್ದೇಶದಲ್ಲಿ ನಡೆದ ಪ್ರಕರಣವೂ ಇವರ ಮೇಲಿದೆ.

ಮುಂಬೈನಿಂದ ಕಪ್ಪು ಅರಿಷಿಣಕ್ಕಾಗಿ ಬಂದ ವ್ಯಾಪಾರಿಗಳಿಗೆ ಬೆದರಿಸಿ ಬೆಲೆ ಬಾಳುವ ಮೊಬೈಲ್, ಬಂಗಾರದ ಒಡವೆ, ನಗದು ಸೇರಿದಂತೆ ಸುಮಾರು 14 .50 ಲಕ್ಷ ಮೌಲ್ಯದ ಸ್ವತ್ತನ್ನು ಎಗರಿಸಿ ಪರಾರಿಯಾಗಿದ್ದರು. ಈ ಪ್ರಕರಣದ ತಂಡದಲ್ಲಿಯೂ ಮಹಿಳೆಯರೂ ಇದ್ದುದು ವಿಶೇಷ. ಇದೊಂದು ರೀತಿ ದಂಡು ಪಾಳ್ಯ ತಂಡದ ಪ್ರಕರಣಗಳನ್ನು ನೆನಪಿಸುವಂತಿದೆ.
ಪ್ರಕಾಶ ಕೃಷ್ಣ ಸಿದ್ದಿ ಮತ್ತು ಪಿಲಿಪ್ ಕೃಷ್ಣಾ ಸಿದ್ದಿ ಮೂಲತಃ ತಾಲೂಕಿನ ಬಿಳಕಿ ಗ್ರಾಮ ಸಮೀಪದ ಜಡಗಿನಕೊಪ್ಪದವರು. ಇದು ದಟ್ಟ ಅಡವಿಯ ಮಧ್ಯದಲ್ಲಿರುವ ಎಂಟ್ಹತ್ತು ಕುಟುಂಬಗಳು ವಾಸವಾಗಿರುವ ಗ್ರಾಮವಾಗಿದೆ. ಅರಣ್ಯದೊಳಗೇ ಇದ್ದು ಕೃಷಿ ಕಾಯಕದೊಂದಿಗೆ ಬದುಕು ನಡೆಸುತ್ತಿರುವ ಕುಟುಂಬದ ಸದಸ್ಯರು ಇವರಾಗಿದ್ದಾರೆ.

ಪೊಲೀಸರಿಂದ ಅಥವಾ ಜೈಲಿನಿಂದ ತಪ್ಪಿಸಿಕೊಳ್ಳುವುದರಲ್ಲಿ ಇವರು ನಿಷ್ಣಾತರು. ಈ ಹಿಂದೆ ಇಂತಹ ಸಾಹಸಕ್ಕೆ ಕೈಹಾಕಿ ಶಿರಸಿಯ ಉಪ ಕಾರಾಗೃಹದಿಂದ ಎಸ್ಕೇಪ್ ಆದವರೇ. ಪೊಲೀಸರ ಕರ್ತವ್ಯ ಪ್ರಜ್ಞೆಯಿಂದ ಮತ್ತೆ ಬಂದಿಸುವಲ್ಲಿ ಪ್ರಕರಣ ಸುಖಾಂತ್ಯ ಕಂಡಿತ್ತು. ಇದೀಗ ಯಲ್ಲಾಪುರ ಪಟ್ಟಣದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
ಇಲ್ಲಿಯೂ ಅದೇ ರೀತಿಯ ಸನ್ನಿವೇಶ ನಿರ್ಮಾಣವಾಗಿದೆ. ಕಾರವಾರದ ಜೈಲಿನಿಂದ ವಿಚಾರಣೆಗೆ ಕರೆತಂದ ಪೊಲೀಸರಲ್ಲಿ ಇಬ್ಬರು ಕರ್ತವ್ಯಕ್ಕೆ ಸೇರಿ ಕೆಲವೇ ವರ್ಷಗಳಾಗಿದ್ದು ಯುವಕರಾಗಿದ್ದಾರೆ. ಈ ಹಿನ್ನಲೆಯಲ್ಲಿ ತಪ್ಪಿಕೊಂಡ ಖೈದಿಗಳ ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಚೇಸಿಂಗ್ ಸಹ ಸುಲಭದ್ದಾಗಿರಲಿಲ್ಲ. ಬಿಲ್ಡಿಂಗ್, ಕಾಂಪೌಂಡ್, ಗಲ್ಲಿಯ ಸಂದಿಗೊಂದಿಗಳಲ್ಲಿ ನುಸುಳಿಕೊಂಡು ಓಡುತ್ತಿದ್ದವರನ್ನು ಪೊಲೀಸರು ಪ್ರಾಣಭಯ ಬಿಟ್ಟು ಹಿಡಿದಿದ್ದಾರೆ. ಇದೇ ಖೈದಿಗಳು ಕಾಡಿನೊಳಗೆ ತಪ್ಪಿಸಿಕೊಂಡಿದ್ದರೆ ಬ್ರಹ್ಮ ಬಂದರೂ ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ, ಅಂತಹ ನಿಪುಣರು.
ಇಬ್ಬರ ಮೇಲೆ ದಾಖಲಾಗಿರುವ ಪ್ರಕರಣಗಳು : ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಅಪರಾಧಿಗಳಲ್ಲಿ ಪ್ರಕಾಶ ಕೃಷ್ಣಾ ಸಿದ್ದಿ ಎಂಬಾತನ ಮೇಲೆ ಯಲ್ಲಾಪುರ ಠಾಣೆಯಲ್ಲಿ 2022 ರಲ್ಲಿ ಐಪಿಸಿ 379 ಪ್ರಕರಣದ ಅಡಿಯಲ್ಲಿ 4 ಕೇಸುಗಳು,2023 ರಲ್ಲಿ ಶಿರಸಿ ನಗರ ಠಾಣೆಯಲ್ಲಿ ಐಪಿಸಿ 224 ರ ಅಡಿಯಲ್ಲಿ 1 ಪ್ರಕರಣ ದಾಖಲಾಗಿದ್ದು ಒಟ್ಟು ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ ಜೈಲು ವಾಸ ಅನುಭವಿಸುತ್ತಿದ್ದಾನೆ. ಪ್ರಕರಣಗಳೆಲ್ಲವೂ ನ್ಯಾಯಾಲಯದ ವಿಚಾರಣೆಯ ಹಂತದಲ್ಲಿವೆ.
ಪಿಲಿಪ್ ಕೃಷ್ಣಾ ಸಿದ್ದಿಯ ಮೇಲೆ 2022 ರಲ್ಲಿ ಐಪಿಸಿ 379 ರ ಪ್ರಕರಣದ ಅಡಿಯಲ್ಲಿ 4 ಕೇಸುಗಳು , 2020 ರಲ್ಲಿ ಐಪಿಸಿ 506,504,448,354,363,376,420 ಮತ್ತು 4,6,10 ಫೋಕ್ಸೋ ಆಕ್ಟ್ ಪ್ರಕರಣಗಳು ಯಲ್ಲಾಪುರ ಠಾಣೆಯಲ್ಲಿ ದಾಖಲಾಗಿದ್ದು ಒಟ್ಟು 4 ಪ್ರಕರಣಗಳು ಯಲ್ಲಾಪುರ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದರೆ ಫೊಕ್ಸೋ ಪ್ರಕರಣ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ, ಕಾರವಾರದಲ್ಲಿ ವಿಚಾರಣೆಯಲ್ಲಿದೆ.
ಒಂದು ರೀತಿಯಲ್ಲಿ ಇವರಲ್ಲಿ ಕಾನೂನಿನ ಅರಿವು ಕಡಿಮೆ ಇದ್ದು ಅಪರಾಧದಿಂದಾಗುವ ದುಷ್ಪರಿಣಾಮಗಳ ತೀವ್ರವಾದ ತಿಳುವಳಿಕೆ ಇಲ್ಲವಾಗಿದೆ. ಒಟ್ಟಿನಲ್ಲಿ ತಪ್ಪಿಸಿಕೊಳ್ಳಬೇಕೆಂಬ ಮನಸ್ಥಿತಿ ಇದೆಯೇ ಹೊರತು ಅದರಿಂದ ಮತ್ತೊಂದು ದೂರು ದಾಖಲಾಗುತ್ತದೆ, ಇನ್ನಷ್ಟು ಶಿಕ್ಷೆ ಹೆಚ್ಚಾಗುತ್ತದೆಂಬ ಅರಿವಿಲ್ಲ. ಇಂತಹ ಗಂಭೀರ ಪ್ರಕರಣದಲ್ಲಿರುವ ಅಪರಾಧಿಗಳನ್ನು ವಿಚಾರಣೆಗೊಳಪಡಿಸುವ ಅಥವಾ ಹಾಜರು ಪಡಿಸುವ ಉದ್ದೇಶದಿಂದ ಕಾರಾಗೃಹದಿಂದ ನ್ಯಾಯಾಲಯಕ್ಕೆ ಕರೆತರುವ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಿದೆ. ಬಸ್ಸಿನಲ್ಲಿ ಕರೆತರುವುದು ಅತ್ಯಂತ ಅಪಾಯಕಾರಿಯಾಗಿದೆ. ಅಲ್ಲದೇ ಇದು ಪೊಲೀಸರಿಗೆ ತಲೆನೋವಿನ ಕೆಲಸ. ಅಪರಾಧಿಗಳು ಈ ರೀತಿ ತಪ್ಪಿಸಿಕೊಂಡು ಓಡಿದರೆ ಬೆನ್ನತ್ತಿ ಹಿಡಿಯಲು ಗಟ್ಟಿಮುಟ್ಟಾದ ಯುವಕ ಪೊಲೀಸರಾದರೆ ತೊಂದರೆಯಿಲ್ಲ, ಆದರೆ ವಯಸ್ಸಿನಲ್ಲಿ ಹಿರಿಯರಾಗಿ ಅಥವಾ ಆರೋಗ್ಯದಲ್ಲಿ ವ್ಯತ್ಯಯ ಇರುವಂತಹ ಪೊಲೀಸ್ ಸಿಬ್ಬಂದಿಗಳಾದರೆ ಅವರ ಜೀವಕ್ಕೂ ಅಪಾಯ ಕಟ್ಟಿಟ್ಟ ಬುತಿ. .





Prathidvani Yellapura