





ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಕಳೆದ ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯಲ್ಲಾಪುರ ಪಟ್ಟಣ ಪಂಚಾಯತ್ ಪೌರಕಾರ್ಮಿಕರ ವಸತಿಗೃಹದ ಕಾಮಗಾರಿ ತೆವಳುತ್ತ ಕುಂಟುತ್ತ ಸಾಗುತ್ತಿದೆ.
ಅಂದಾಜು 83.44 ಲಕ್ಷರೂ ಮೊತ್ತದಲ್ಲಿ 2020 ರ ಸೆಪ್ಟೆಂಬರ್ 1 ರಂದು ಕಾಮಗಾರಿ ಪ್ರಾರಂಭವಾಗಿದ್ದು ಕಾಮಗಾರಿ ಸಂಪೂರ್ಣಗೊಳಿಸಲು 12 ತಿಂಗಳುಗಳ ಗಡುವು ನೀಡಲಾಗಿತ್ತು(ಮಳೆಗಾಲ ಹೊರತುಪಡಿಸಿ) ಆದರೆ ಕುಂಟುತ್ತಾ ಸಾಗಿದ ಕಾಮಗಾರಿ ಇಂದಿಗೂ ಪೂರ್ಣವಾಗದೇ ವ್ಯವಸ್ಥೆಯ ಅವ್ಯವಸ್ಥೆಯನ್ನು ಎತ್ತಿ ತೋರಿಸುತ್ತಿದೆ. ಕಟ್ಟಡದ ಗುತ್ತಿಗೆಯನ್ನು ಅಂಕೋಲಾದ ಪ್ರದೀಪ ನಾಯ್ಕ ಎಂಬುವರಿಗೆ ನೀಡಲಾಗಿತ್ತು. ಟೆಂಡರ್‌ನಲ್ಲಿ ಬಿಲೋ ಹೋಗಿದ್ದು ನೆಲಮಹಡಿ ಮತ್ತು ಮೊದಲ ಅಂತಸ್ತು ಕಟ್ಟಲಾಗಿತ್ತು. ನಂತರ ನಗರೋತ್ಥಾನ ಅಡಿಯಲ್ಲಿ 14.58 ಲಕ್ಷ ಮತ್ತು 5.9ಲಕ್ಷ ಉಳಿಕೆ ಮೊತ್ತವನ್ನು ಬಳಸಿಕೊಂಡು ಎರಡನೇ ಮಹಡಿಯನ್ನು ಕಟ್ಟಲಾಗಿದೆ. ಇದೀಗ ಕೊನೆಯ ಹಂತದ ಕಾಮಗಾರಿ ಬಾಕಿ ಉಳಿದಿದ್ದು ಚುನಾವಣಾ ನೀತಿ ಸಂಹಿತೆ ಮುಗಿಯುತ್ತಲೇ ಟೆಂಡರ್ ಕರೆದು ಅಂತಿಮ ಹಂತದ ಕಾಮಗಾರಿ ಪೂರ್ಣಗೊಳಿಸುವ ಕುರಿತು ಮಾಹಿತಿ ಲಭಿಸಿದೆ.

ಯಾರು ಮಾಡಲಾಗದ ಅತ್ಯಂತ ಕಷ್ಟಕರ ಕೆಲಸಗಳನ್ನು ಗೌರವಾನ್ವಿತ ಪೌರಕರ್ಮಿಕರು ಮಾಡುತ್ತಿರುವುದರಿಂದಲೆ ಸಮಾಜ ಪರಿಸರ ಸ್ವಾಸ್ಥ್ಯ ವಾಗಿದೆ ನಮ್ಮ ಆರೋಗ್ಯ ಚೆನ್ನಾಗಿದೆ. ನಮ್ಮಕುಟಬದ ಸ್ವಾಸ್ಥ್ಯ ದ ಸಲುವಾಗಿ ತಮ್ಮ ಆರೋಗ್ಯವನ್ನು ಪಣಕ್ಕಿಟ್ಟು ದುಡಿಯುವ ಕುಟುಂಬದ ನೆಮ್ಮದಿ ಸಂತೋಷ ಕಾಪಾಡುವುದು ಕೇವಲ ಪಟ್ಟಣ ಪಂಚಾಯತ್ ಇಲಾಖೆಯ ಕಾರ್ಯ ಮಾತ್ರವಲ್ಲ ಸಮಾಜದ ಕರ್ತವ್ಯ ಕೂಡ ಹೌದು. ಆದರೆ ಯಲ್ಲಾಪುರ ಪಟ್ಟಣದಲ್ಲಿ ಆಗುತ್ತಿರುವುದೆ ಬೇರೆ ಪೌರ ಕಾರ್ಮಿಕರ ವಾಸಕ್ಕಾಗಿ ಸರ್ಕಾರದ ವತಿಯಿಂದ ಮಚ್ಚಿಗಲ್ಲಿ ಉರ್ದು ಶಾಲೆಯ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ವಸತಿಗೃಹ ಸಮುಚ್ಚಯ ಕಳೆದ ಕೆಲವು ವರ್ಷಗಳಿಂದ ಕುಂಟುತ್ತಲೆ ಸಾಗುತ್ತಿದೆ. ಇದಕ್ಕೆ ಹೊಣೆ ಯಾರು ? ಅತ್ಯವಶ್ಯ ಸೇವೆ ಸಲ್ಲಿಸುವ ಶ್ರಮಿಕರ ಕನಿಷ್ಟ ಅವಶ್ಯಕತೆಗಳನ್ನು ಪೂರೈಸದ ಸಮಾಜ ಮತ್ತು ಸರ್ಕಾರಕ್ಕೆ ನಾಚಿಕೆಯಾಗಬೇಕು ಮತ್ತು ತಲೆ ತಗ್ಗಿಸಬೇಕಿದೆ.

ಸಂಬಳ ಹೆಚ್ಚಿಸಲಿಲ್ಲ, ಕೆಲಸದಲ್ಲಿ ಕಿರುಕುಳ, ಮೇಲಾದಿಕಾರಿ ದೌರ್ಜನ್ಯ, ಸವಲತ್ತುಗಳಿಲ್ಲ, ಬಡ್ತಿ ನೀಡಲಿಲ್ಲ, ವರ್ಗಾವಣೆ ಮಾಡಿದ್ದಾರೆ ಎಂಬಂತಹ ಕಾರಣಗಳಿಗೆ ಬೀದಿಗಿಳಿದು ಪ್ರತಿಭಟನೆ, ಧರಣಿ ಯಂತಹ ಹೋರಾಟ ಮಾಡಿ ಸರ್ಕಾರದ ಮೇಲೆ ಒತ್ತಡಬಹೇರುವ ಸರ್ಕಾರಿ ನೌಕರರು ಅದೇಕೊ ಸರ್ಕಾರಿ ನೌಕರರಾದ ಪೌರಕಾರ್ಮಿಕರ ಅಳಲು ಕೇಳಲಿಲ್ಲವೇನೊ ಅಥವ ಇಲ್ಲಿಯು ಮೇಲು ಕೀಳೆಂಬ ಲೆಕ್ಕಾಚಾರವಿದೆಯೊ ತಿಳಿಯದಾಗಿದೆ.

ಬೇರೆಲ್ಲಾ ಸರ್ಕಾರಿ ನೌಕರರಿಗೆ ಅಥವಾ ಇನ್ನಾವುದೆ ನೌಕರರಿಗೆ ಬಾಡಿಗೆ ಮನೆಗಳು ಸಿಗುವುದು ಕಷ್ಟವಿಲ್ಲ ಆದರೆ ಒಬ್ಬ ಪೌರ ಕಾರ್ಮಿಕನಿಗೆ ಬಾಡಿಗೆ ಮನೆ ಸಿಗಬೇಕೆಂದರೆ ಎಷ್ಟು ಸಮಸ್ಯೆ ಇದೆ ಎಂದು ಹತ್ತಿರದಿಂದ ನೋಡಿದರೆ ತಿಳಿಯಲಿದೆ. ಆಕಸ್ಮಿಕ ಮನೆ ಸಿಕ್ಕರು ಅದರಲ್ಲಿ ವಾಸದ ದಿನಗಳಲ್ಲಿ ಮನೆಯ ಮಾಲಿಕರಿಂದಾಗುವ ಇರಿಸುಮುರಿಸು ಅಷ್ಟಿಷ್ಟಲ್ಲ ಸ್ವಾಭಿಮಾನದ ಬದುಕು ನಡೆಸಲು ಕಷ್ಟವಾಗಲಿದೆ.

ಈ ಎಲ್ಲಾ ಸಮಸ್ಯೆ ಬರದಂತೆ ನಮಗಾಗಿ ಶ್ರಮಿಸುವ ಜೀವಕ್ಕೆ ನಮ್ಮಿಂದಾಗುವ ಸಹಾಯ ಸಹಕಾರ ನೀಡಬೇಕೆ ಹೊರತು ಅಯ್ಯೋ ಎನ್ನಿಸಬಾರದು. ವಿವಿಧ ಇಲಾಖೆಗಳ ದೊಡ್ಡ ಅಧಿಕಾರಿಗಳಿಗೆ ವಸತಿಗೃಹಗಳು ಅತಿ ವೇಗವಾಗಿ ನಿಮಾಣಗೊಂಡು ವಾಸಕ್ಕೆ ಸಿದ್ದವಾಗಿಬಿಡುತ್ತದೆ. ಅದೇ ಪೌರ ಕಾರ್ಮಿಕರ ವಸತಿ ಗೃಹಗಳೆಂದರೆ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸರ್ಕಾರದ ಅಡಿಯಲ್ಲಿಯೆ ಇಂತಹ ತಾರತಮ್ಯ ವ್ಯವಸ್ಥೆ ಒಪ್ಪುವಂತಹದ್ದಲ್ಲ.
ಕೂಡಲೆ ಇರುವ ಸಮಸ್ಯೆ ಬಗೆಹರಿಸಿ ಪ್ರತಿನಿತ್ಯ ಅತ್ಯಂತ ಕಷ್ಟಕರ ಕೆಲಸ ನಿರ್ವಹಿಸುವ ಪೌರಕಾರ್ಮಿಕರು ನೆಮ್ಮದಿ, ಗೌರವ ಹಾಗು ಸ್ವಾಭಿಮಾನದ ಬದುಕು ನಡೆಸಲು ಅನುವು ಮಾಡಿಕೊಡಬೇಕಿದೆ ಇಲ್ಲವಾದಲ್ಲಿ ಸರ್ಕಾರಿ ನೌಕರರ ಸಂಘ, ಸಮಾಜದ ವಿವಿಧ ಸಂಘ ಸಂಸ್ಥೆಗಳು ಒಟ್ಟಾಗಿ ಪ್ರತಿಭಟನೆ ನಡೆಸಿಯಾದರು ಪೌರಕಾರ್ಮಿಕರ ನೆರಳಿಗೆ ಆಸರೆಯಾಗಬೇಕಿದೆ ಇಲ್ಲವಾದರೆ ಮಾನವತ್ವಕ್ಕೆ ಬೆಲೆ ಇಲ್ಲವಾಗಲಿದೆ ಎಂಬುದು ಮನುಷ್ಯರ ನಡುವೆ ತಾರತಮ್ಯ ತಿಳಿಯದ ನಾಗರಿಕರ ಅಭಿಪ್ರಾಯವಾಗಿದೆ.
Prathidvani Yellapura