
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ..........
ಪ್ರತಿಧ್ವನಿ,ಯಲ್ಲಾಪುರ : ಪ್ರಕೃತಿಯದ್ದು ಭೂಮಿಯೊಂದಿಗಿನ ಅಧ್ಯಯನವಿದ್ದಂತೆ. ಭವಿಷ್ಯ, ಭೂತ , ವರ್ತಮಾನಗಳಲ್ಲೂ ಪ್ರಕೃತಿ ನಿತ್ಯನೂತನ. ಹಿರಿಯರು ಬರೆದರು, ಇಂದಿನವರೂ ಬರೆಯುತ್ತಾರೆ, ಮುಂದಿನವರೂ ಬರೆಯುತ್ತಾರೆ. ಅಲ್ಲಿಗೆ ಪ್ರಕೃತಿಯೊಂದಿಗಿನ ಯುಗಾದಿಯ ಸಂಬಂಧವನ್ನು ಹಳೆಯದು ಎನ್ನಲು ಯಾವ ಕಾಲಕ್ಕೂ ಸಾಧ್ಯವಿಲ್ಲ. ಅಖಿಲ ಭಾರತ ಸಾಹಿತ್ಯ ಪರಿಷತ್ತು, ಸಾಹಿತ್ಯದ ಜೀವಂತಿಕೆಗೋಸ್ಕರ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದು ಖ್ಯಾತ ಯಕ್ಷಗಾನ ಅರ್ಥದಾರಿ, ತಾ.ಪಂ ಮಾಜಿ ಅಧ್ಯಕ್ಷೆ ಚಂದ್ರಕಲಾ ಭಟ್ಟ ಹೇಳಿದರು.

ಅವರು ಪಟ್ಟಣದ ಹಿರಿಯ ಸಾಹಿತಿ ಶ್ರೀರಂಗ ಕಟ್ಟಿಯವರ ನಿವಾಸದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡಿದ್ದ “ತಿಂಗಳ ನನ್ನ ಕವನ ಹಾಗೂ ಯುಗಾದಿ ಸಂಭ್ರಮ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತನು ,ಮನ , ಭಾವ ಶುದ್ಧವಿರುವ ಶರಣರ ತೋರಯ್ಯ ಎನಗೆ ಎಂಬ ಅಕ್ಕಮಹಾದೇವಿಯ ವಚನಗಳ ಸಾಲು ಸಾರ್ವಕಾಲಿಕ ಅರ್ಥಪೂರ್ಣ. ಎಲ್ಲ ಕಾಲದಲ್ಲೂ ಮೇಲಿನ ಎಲ್ಲಾ ಶುದ್ಧತೆಗಳು ಎಲ್ಲರಲ್ಲೂ ಇರಬೇಕೆಂಬ ಭಾವ ಮತ್ತು ಇಚ್ಛೆ ವ್ಯಕ್ತಪಡಿಸಿದಂತಿದೆ. ಸಾಹಿತ್ಯ ಸೇವೆಗೆ ವಿನೂತನ ಪ್ರಯತ್ನದೊಂದಿಗೆ ಪ್ರತಿ ತಿಂಗಳು ಒಂದು ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಸಾಹಿತ್ಯಾಭಿಮಾನಿಗಳ ಮನ ಗೆಲ್ಲುತ್ತಿದೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಎಂದು ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ವನರಾಗ ಶರ್ಮ ಹೇಳಿದರು.

ಪ್ರಕೃತಿಯಲ್ಲಿನ ಬದಲಾವಣೆಗಳನ್ನು ಸೂಕ್ಷವಾಗಿ ಗಮನಿಸುತ್ತಾ ಹೋದರೆ ಯುಗಾದಿಯ ಗೋಚರವಾಗುತ್ತದೆ. ಪಂಚಾಂಗ ಪಠಣ ಈ ಸಂದರ್ಭದಲ್ಲಿ ಅತಿಶ್ರೇಷ್ಟವಾಗಿದ್ದು ಫಲಾಫಲಗಳ ಮಾಹಿತಿ ತಿಳಿಯಬಹುದಾಗಿದೆ ಎಂದು ಯುಗಾದಿ ಸಂಭ್ರಮದ ಕುರಿತು ಶಿವರಾಮ ಗಾಂವ್ಕರ್ ಉಪನ್ಯಾಸ ನೀಡಿದರು.
ತಿಂಗಳ ನನ್ನ ಕವನ ಕವಿಗೋಷ್ಠಿಯಲ್ಲಿ ಹಿರಿ-ಕಿರಿಯ 16 ಕವಿಗಳು ಯುಗಾದಿಗೆ ಸಂಬಂಧಿಸಿದ ಕವನಗಳನ್ನು ವಾಚಿಸಿದರು.


ಶ್ರೀಲತಾ ರಾಜೀವ ಪ್ರಾರ್ಥಿಸಿದರು. ಶ್ರೀರಾಮ ಲಾಲಗುಳಿ ಸ್ವಾಗತಿಸಿದರು. ಅಖಿಲ ಭಾರತ ಸಾಹಿತ್ಯ ಪರಿಷತ್ ಅಧ್ಯಕ್ಷ ಗಣಪತಿ ಕಂಚಿಪಾಲ ಪ್ರಾಸ್ತಾವಿಕ ನುಡಿದರು. ಕಾರ್ಯದರ್ಶಿ ಚಂದ್ರಶೇಖರ ನಿರೂಪಿಸಿ ವಂದಿಸಿದರು.


