
ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಲ್ಲಿ ಒಂದಾದ ಟಿ.ಎಂ.ಎಸ್ ಆಡಳಿತಾಧಿಕಾರಿ ನಡೆಯ ವಿರುದ್ದ ರೈತರು ಸಿಡಿದಿದ್ದು ಗುರುವಾರ ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು.

ಹಿರಿಯ ಸಹಕಾರಿ ಸಂಸ್ಥೆಯ ಮಾಜಿ ಅಧ್ಯಕ್ಷ ನಾರಾಯಣ ಭಟ್ ಅಗ್ಗಾಶಿಕುಂಬ್ರಿ ಸ್ಥಳೀಯ ಶಾಸಕರ ವಿರುದ್ದ ನೇರ ವಾಗ್ದಾಳಿ ನಡೆಸಿ ಅತ್ಯಂತ ಸುಭದ್ರ ಹಾಗು ರೈತ ಸ್ನೇಹಿ ಟಿ.ಎಂ.ಎಸ್ ಸಂಸ್ಥೆಯ ಅಸ್ತಿತ್ವಕ್ಕೆ ಧಕ್ಕೆ ತರುವ ಹುನ್ನಾರ ನಡೆಸುತ್ತಿದ್ದು ಅದರ ಭಾಗವಾಗಿ ಇಲ್ಲಸಲ್ಲದ ನಡೆಯನ್ನು ಪರೋಕ್ಷವಾಗಿ ಆಡಳಿತಾಧಿಕಾರಿ ಕೈಯಲ್ಲಿ ಮಾಡಿಸುತ್ತಿದ್ದಾರೆ.ಇದು ತಾಲ್ಲೂಕಿನ ಜನತೆಗೆ ಅರ್ಥವಾಗಿದೆ. ಸಂಸ್ಥೆಯ ಉಳಿವಿಗಾಗಿ ನಾನು ಯಾವ ತ್ಯಾಗಕ್ಕು ಸಿದ್ದನಿದ್ದು ರೈತರಿಗಾಗುವ ಅನ್ಯಾಯ ಸಹಿಸಲಾಗದು. ಹಿಂಬದಿಯ ರಾಜಕಾರಣ ಮಾಡುವವರ ಮುಂದೆ ನೇರ ಸಂವಾದಕ್ಕೆ ನಾನು ಸಿದ್ದನಿದ್ದೇನೆ. ತತಕ್ಷಣದಿಂದ ಆಡಳಿತಾಧಿಕಾರಿಯನ್ನು ಸರ್ಕಾರ ಕಿತ್ತೊಗೆಯಬೇಕು ಇಲ್ಲವಾದಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಟಿ.ಎಂ.ಎಸ್ ಸಂಸ್ಥೆಯ ಅವನತಿಗೆ ಸಂಚು ರೂಪಿಸುತ್ತಿರುವ ತಂಡಕ್ಕೆ ಇದು ಎಚ್ಚರಿಕೆಯ ಗಂಟೆಯಾಗಿದ್ದು ತಾಲ್ಲೂಕಿನ ರೈತರ ಒಕ್ಕೊರಲ ಆಗ್ರಹವಾಗಿದ್ದು ತಕ್ಷಣಕ್ಕೆ ಆಡಳಿತಾಧಿಕಾರಿಯನ್ನು ಸರ್ಕಾರ ಬದಲಿಸಬೇಕಿದೆ ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರಾಘುಭಟ್ಟ,ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆ, ಸುಬಣ್ಣಉದ್ದಾಬೈಲ್, ನರಸಿಂಹ ಭಟ್ ಇನ್ನಿತರ ಪ್ರಮುಖರು ಪ್ರತಿಭಟನೆ ಸಭೆಯನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ತಾಲೂಕಿನ ಹಲವು ರೈತರು,ಸಂಸ್ಥೆಯ ಸದಸ್ಯರು, ಹಿತೈಷಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿಭದ್ರತೆ ಕೈಗೊಳ್ಳಲಾಗಿತ್ತು. ಕೆಲಕಾಲ ರಸ್ತೆ ತಡೆ ನಡೆಸಿದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಕಚ ಅಡಚಣೆಯಾಯಿತೆ ಹೊರತು ಯಾವುದೆ ಸಮಸ್ಯೆ ಉದ್ಬವಿಸಲಿಲ್ಲ.





Prathidvani Yellapura