Breaking News

ಒಂದು ನೆನಪು…………ತುರ್ತು ಪರಿಸ್ಥಿತಿಯ ಸುತ್ತ 50 ವರ್ಷ..


ಯಲ್ಲಾಪುರ : ದೇಶದ ರಾಜಕೀಯ ದಿಗಂತದಲ್ಲಿ ದಿಢೀರ್ ಪ್ರತ್ಯಕ್ಷವಾಗಿ 21 ತಿಂಗಳ ಕಾಲ ಸಾಕಷ್ಟು ಅನಾಹುತಗಳನ್ನು ಸೃಷ್ಠಿಸಿ ಅಷ್ಟೇ ವೇಗದಲ್ಲಿ ಕಣ್ಮರೆಯಾದ “ತುರ್ತು ಪರಿಸ್ಥಿತಿ” ಎಂಬ ಧೂಮಕೇತು ಅಪ್ಪಳಿಸಿದ ದಿನ  1975 ರ ಜೂನ್ 25 ಅಂದಿನ ಹೋರಾಟದಲ್ಲಿ ಧುಮುಕಿ 6 ತಿಂಗಳು ಜೈಲು ಸೇರಿ ರಾಜಕೀಯ ಖೈದಿಯಾಗಿ ಶಿಕ್ಷೆ ಅನುಭವಿಸಿದ ನಾಗರೀಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ತಮ್ಮ ನೆನಪಿನಂಗಳದಿಂದ ಹೋರಾಟದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.


ಅಂದು ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ರಸ್ತೆಗೆ ಇಳಿದಿದ್ದ, ಇಂದಿರಾ ಕೃಪೆಯಿಂದ ಜೈಲು ಪಾಲಾಗಿದ್ದ, ಪೊಲೀಸರ ಲಾಠಿ, ಬೂಟುಗಳಿಗೆ ಸಿಕ್ಕಿ ನಡುರಸ್ತೆಯಲ್ಲೇ ಕೊನೆಯುಸಿರು ಎಳೆದಿದ್ದ ಅಸಂಖ್ಯಾತ ದೇಶಭಕ್ತರನ್ನು ನೆನಪಿಸುವ ಈ ದಿನಕ್ಕೆ 50 ವರ್ಷ ತುಂಬಿದೆ.


50 ವರ್ಷಗಳ ಹಿಂದೆ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ತಮ್ಮ ಅಧಿಕಾರ ಗದ್ದುಗೆ ಉಳಿಸಿಕೊಳ್ಳಲು ಈ ದೇಶದ ಮೇಲೆ ಮಾರಕ ಕಾನೂನು ಹೇರಿದ್ದರು. ಆ ಸಂದರ್ಭದಲ್ಲಿ ದೇಶದಲ್ಲಿ ಆಂತರಿಕ ಪ್ರಜಾಪ್ರಭುತ್ವ ಹತ್ತಿಕ್ಕಿ ವಾಕ್ ಸ್ವಾತಂತ್ರ ಕಿತ್ತುಕೊಂಡು ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡಿ ಸಂಘದ ಮೇಲೆ ನಿಷೇಧ ಹೇರಲಾಗಿತ್ತು. ಕಾಂಗ್ರೆಸ್ ಹೊರತುಪಡಿಸಿ ಉಳಿದ ರಾಜಕೀಯ ಪಕ್ಷಗಳ ಹಾಗೂ ಸಂಘ ಪರಿವಾರದ ಪ್ರಮುಖರನ್ನು ಬಂಧಿಸಿ ನಿರ್ದಾಕ್ಷಿಣ್ಯವಾಗಿ ಜೈಲಿಗೆ ತಳ್ಳಲಾಗಿತ್ತು.

ಇಡೀ ದೇಶದಲ್ಲಿ ಇಂದಿರಾ ಸರ್ವಾಧಿಕಾರದ ಕರಾಳ ಛಾಯೆ ಹರಡಿತ್ತು. ಇಂತಹ ಸಂಧಿಗ್ಧತೆ ಗಮನಿಸಿದ ಜನ ಸಂಘ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ತಮ್ಮ ವೈಯಕ್ತಿಕ ಬದುಕನ್ನು ಬದಿಗಿಟ್ಟು ರಸ್ತೆಗಿಳಿದರು.

ಪ್ರತಿಭಟನೆ, ಜೈಲ್ ಭರೋ ಆರಂಭಿಸಿದರು. ಅನೇಕರು ಬೀದಿ ಹೆಣವಾದರು. ಆದರೂ ಇಂದಿರಾ ಸರ್ವಾಧಿಕಾರಕ್ಕೆ ಮಾತ್ರ ಯಾರೂ ಜಗ್ಗಲಿಲ್ಲ, ಆ ಹೋರಾಟದ ಫಲವೇ 1977ರಲ್ಲಿ ಕಾಂಗ್ರೆಸ್ ಪತನ ! ಜನತಾ ಪಕ್ಷದ ಉದಯ.


ಇಂದು ಹಳ್ಳಿಯಿಂದ ದಿಲ್ಲಿಯವರೆಗೆ ಹರಡಿರುವ ಬಿಜೆಪಿಯ ಜೊತೆಗೆ ಚದುರಿದ ಮೋಡಗಳಂತೆ ಜನತಾದಳ, ಲೋಕದಳ, ಬಿಜು ದಳ, ಮಾಯಾವತಿಯ ಆನೆ ಮುಲಾಯಂ ಸಿಂಗ್‌ರ ಸೈಕಲ್ಲು, ಲಲ್ಲು ಪ್ರಸಾದರ ಲಾಟೀನು, ಕ್ರೇಜೀವಾಲರ ಕಸಬರಿಕೆ ಇವೆಲ್ಲ ಪ್ರಜಾಪ್ರಭುತ್ವದಲ್ಲಿ ಉಳಿದಿದ್ದರೆ ಅಂದಿನ ತುರ್ತು ಪರಿಸ್ಥಿತಿಯ ಹೋರಾಟಗಾರರಿಗೆ ಧನ್ಯವಾದ ಹೇಳಲೇಬೇಕು. ತಮ್ಮದೇ ದೇಶದಲ್ಲಿ ತಮ್ಮವರಿಂದಲೇ ಒದೆ ತಿನ್ನುತ್ತಾ 21 ತಿಂಗಳುಗಳ ಕಾಲ ಮುನ್ನೆಡಿಸಿದ ಹೋರಾಟ ಯಾವ ಸ್ವಾತಂತ್ರ ಚಳುವಳಿಗೂ ಕಡಿಮೆ ಇರಲಿಲ್ಲ. ದುರಾದೃಷ್ಟವೆಂದರೆ ಬಿಜೆಪಿಗೊಂದಷ್ಟು ನೆನಪಿದೆ. ಉಳಿದವರು ಮರೆತೆ ಬಿಟ್ಟಿದ್ದಾರೆ.


ಅಂಕಿ ಅಂಶಗಳ ಪ್ರಕಾರ ಉತ್ತರಕನ್ನಡ ಜಿಲ್ಲೆಯೊಂದರಲ್ಲೇ 700 ಕ್ಕೂ ಹೆಚ್ಚು ಸತ್ಯಾಗ್ರಹಿಗಳು ಇಂದಿರಾ ಸರ್ವಾಧಿಕಾರ ಧೋರಣೆಯನ್ನು ಪ್ರತಿಭಟಿಸಿ ಜೈಲು ಸೇರಿದ್ದರು. ಜೈಲಿನ ಹೊರಗೆ ಒಂದಷ್ಟು ಜನ ಜನಾಂದೋಲನ ರೂಪಿಸಿ ಹೋರಾಡುತ್ತಿದ್ದರು. ದೇಶ ಪ್ರೇಮದ ಪ್ರಾಮಾಣಿಕತೆಯಿಂದಲೇ ಇಂದಿಗೂ ಬೆರಳೆಣಿಕೆಯಷ್ಟು ಹೋರಾಟಗಾರರು ಸಕ್ರಿಯ ರಾಜಕಾರಣ, ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಇಂದಲ್ಲ ನಾಳೆ ಹೋರಾಟಗಾರರೂ ಸಹ ತೆರೆಮರೆಗೆ ಸರಿಯಲಿದ್ದಾರೆ. 2025 ಜೂನ್ 25 ಕ್ಕೆ 50 ವರ್ಷ ತುಂಬಿದ ಸ್ಮರಣೆಗಾಗಿ ಒಂದು ಅಭಿಯಾನವಾಗಲಿ. ಹೋರಾಟಗಾರರನ್ನು ಗೌರವಿಸುವಂತಾಗಲಿ. 1975 ರ ತುರ್ತು ಪರಿಸ್ಥಿತಿಯಲ್ಲಿ ಜೈಲಿನೊಳಗಿದ್ದ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಡಾ.ಚಿತ್ತರಂಜನ್, ಹೊನ್ನಾವರದ ಡಾ.ಎಂ.ಪಿ ಕರ್ಕಿ, ಕುಮಟಾದ ಡಾ.ಟಿ.ಟಿ ಹೆಗಡೆ, ಗೋಕರ್ಣದಲ್ಲಿ ಡಾ. ಜಟಾರ, ಕಾರವಾರಾದಲ್ಲಿ ಡಾ.ಎಸ್.ಆರ್ ಪಿಕಳೆ, ದಾಂಡೇಲಿಯಲ್ಲಿ ಡಾ.ವಸ್ತ್ರದ ಇವರೆಲ್ಲರೂ ಸ್ಮರಣಾರ್ಹರು. ರೋಗಿಗಳ ಆರೈಕೆಯಲ್ಲಿ , ಪಕ್ಷದ ಸೇವೆಯಲ್ಲಿ ಅಂದಿನ ಜನಸಂಘದ ದೊಡ್ಡ ಶಕ್ತಿಯಾಗಿದ್ದರು. ಯಲ್ಲಾಪುರದ ಮಂಜುನಾಥ ಹೆಗಡೆ, ಪ್ರಕಾಶ ಶಾನಭಾಗ, ಸದಾನಂದ ಬೀಡೀಕರ, ಶೇಷಪ್ಪ ಪಾಲೇಕರ, ಓಂಕಾರ ಭಟ್ಟ, ಕೇಶವ ಕಲ್ಲಳ್ಳಿ ದಿವಂಗತರಾಗಿಯೂ ಹೋರಾಟದ ನೆನಪಿನಲ್ಲುಳಿದವರು. ಕೋಟೆಮನೆ ಶಿವರಾಮ ಭಟ್ಟ, ರವೀಂದ್ರ ಬದ್ಧಿ, ರವಿಕುಮಾರ ಲಕ್ಷ್ಮಣ ಶಾನಭಾಗ, ರಾಮಚಂದ್ರ ಮುದ್ದೇಪಾಲ, ಸುರೇಶ ಮುರಕುಂಬಿ, ಕಣ್ಣಿ ವಕೀಲರು, ಗೋಪಾಲಕೃಷ್ಣ ಕೊಂಬೆ, ದಯಾನಂದ ಶೆಟ್ಟಿ ಇನ್ನೂ ಅನೇಕ ಹೋರಾಟಗಾರರ ಹೆಸರುಗಳು ಮರೆತುಹೋಗಿರಬಹುದು.


1975 ರ ತುರ್ತು ಪರಿಸ್ಥಿತಿಯ ಹೋರಾಟದ ನೆನಪು ಪ್ರಸ್ತುತ ಸನ್ನಿವೇಶದಲ್ಲಿ ಹಸಿರಾಗಿರಿಸಲು ಉಳಿದಿರುವ ಮಹನೀಯರ ಹಾಗೂ ದಿವಂಗತರಾದ ಕುಟುಂಬದವರನ್ನೂ ಗೌರವಿಸಿ ಸನ್ಮಾನಿಸಿದರೆ ಕೃತಜ್ಞತಾ ಭಾವ ಮೂಡಲಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *