
ವಿಶೇಷ ಸೂಚನೆ :- ನಾಳೆ ಬೆಳಗ್ಗೆ ಅಂತ್ಯಕ್ರಿಯೆ ನಡೆಯಲಿದ್ದು ಹುಬ್ಬಳ್ಳಿ ರಸ್ತೆಯಲ್ಲಿರುವ ಹಿಂದೂ ಚಿತಾಗಾರದಲ್ಲಿ ನಡೆಯಲಿದೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ರಾಷ್ಟ್ರೀಯ ಕ್ರೀಡಾಪಟು, ಸ್ನೇಹಪರ ವ್ಯಕ್ತಿ, ಸರಳ ಸಜ್ಜನಿಕೆಯ , ದಯಮಾಮ , ದಯಣ್ಣ ಎಂದೇ ಚಿರಪರಿಚಿತ ಪಟ್ಟಣದ ಎಲ್ಲರ ಮೆಚ್ಚಿನ ದಯಾನಂದ ಕಾರಂತ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಪಟ್ಟಣದ ಮಹಿಳಾ ಮಂಡಳ ರಸ್ತೆಯಲ್ಲಿ ಜಿಮ್ ತರಬೇತುದಾರರಾಗಿ ಯುವಕರಿಗೆ ದೇಹ ದಂಡನೆಯ ವಿದ್ಯೆಗಳನ್ನು ಹೇಳಿಕೊಡುತ್ತಿದ್ದರು. ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ , ಮಕ್ಕಳಾದಿಯಾಗಿ ಎಲ್ಲರೊಂದಿಗೆ ಆತ್ಮೀಯವಾಗಿದ್ದ ದಯಾನಂದ ಕಾರಂತರ ನಿಧನಕ್ಕೆ ಶಾಸಕ ಶಿವರಾಮ ಹೆಬ್ಬಾರ, ಎಂ.ಎಲ್.ಸಿ ಶಾಂತಾರಾಂ ಸಿದ್ದಿ, ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ, ನಿವೃತ್ತ ಪ್ರಾಚಾರ್ಯ ಬೀರಣ್ಣ ನಾಯಕ ಮೊಗಟಾ, ಉದ್ಯಮಿ ಬಾಲಕೃಷ್ಣ ನಾಯಕ್, ಅಂಬೇಡ್ಕರ್ ಸೇವಾ ಸಂಘದ ಮಾಜಿ ಅಧ್ಯಕ್ಷ ಜಗನ್ನಾಥ ರೇವಣಕರ ಸಮಾಜದ ಹಿರಿಯರು, ಎಲ್ಲ ಸಮುದಾಯದ ನಾಯಕರು ಹಾಗೂ ಇನ್ನಿತರೆ ಗಣ್ಯರು ಕಂಬನಿ ಮಿಡಿದಿದ್ದು ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರಿದ್ದಾರೆ.

ಪಾರ್ಥಿವ ಶರೀರ ಮಂಗಳವಾರ ಮದ್ಯಾಹ್ನ ಸರ್ಕಾರಿ ಆಸ್ಪತ್ರೆ ತಲುಪಿ ನಂತರ ಪಟ್ಟಣದ ಅವರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಯಿತು. ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಅಂತಿಮ ದರ್ಶನ ಪಡೆದರು.

ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅಂತಿಮ ದರ್ಶನ ಪಡೆದು ಪುಷ್ಪನಮನ ಸಲ್ಲಿಸಿದರು.

ವಿಧಾನಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಪುಷ್ಪ ನಮನ ಸಲ್ಲಿಸಿದರು.

ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಕೊಂಡಿ ಕಳಚಿತು – ಒಂದು ಲೆಕ್ಕಾಚಾರದಲ್ಲಿ ಹಿಂದುತ್ವದ ಗೋಡೆಯಂತೆ ನಿಂತು ಅನೇಕ ಹೋರಾಟಗಳಲ್ಲಿ ಭಾಗವಹಿಸಿ ಮುಂಚೂಣಿಯಲ್ಲಿರುತ್ತಿದ್ದರೂ ಮುಸ್ಲಿಂ ಸಮಾಜದೊಂದಿಗೆ ಅತ್ಯಂತ ಅವಿನಾಭಾವ ಸಂಬAಧವನ್ನು ಹೊಂದಿದ್ದರು. ಸಮಾಜದಲ್ಲಿ ದಾರಿ ತಪ್ಪುತ್ತಿದ್ದ ಅದೆಷ್ಟೋ ಯುವಕರಿಗೆ ಜೀವನದ ಪಾಠ ಹೇಳಿಕೊಡುತ್ತಿದ್ದರು. ಕುಟುಂಬದ ಸಂಘರ್ಷಗಳಲ್ಲಿ ಮನೆಮಗನಂತೆ ನಿಂತು ಸಮಸ್ಯೆಯನ್ನು ಇತ್ಯರ್ಥ ಪಡಿಸುತ್ತಿದ್ದರು. ಇದಕ್ಕೆ ಜಾತಿ, ಧರ್ಮ , ಅಂತಸ್ತು ಎಂಬ ಬೇಧವಿರಲಿಲ್ಲ. ಮುಸ್ಲಿಂ ಸಮಾಜದಲ್ಲೂ ಸಹ ದಯಣ್ಣ ಎಂದರೆ ಎಲ್ಲಿಲ್ಲದ ಗೌರವ ಮತ್ತು ಪ್ರೀತಿ. ಧರ್ಮ-ಧರ್ಮಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಬರದಂತೆ, ಸಣ್ಣ ಪುಟ್ಟ ವಿಚಾರಗಳಿಗೆ ಶಾಂತಿ ಕದಡದಂತೆ , ಎರಡೂ ಸಮುದಾಯದ ಪ್ರಮುಖರೊಡನೆ ಆತ್ಮೀಯತೆಯ ಮಾತುಗಳನ್ನಾಡುತ್ತಲೇ ಸೌಹಾರ್ದತೆ ಸಾರುತ್ತಿದ್ದ ಭಾವೈಕ್ಯತೆಯ ಕೊಂಡಿ ಕಳಚಿದಂತಾಗಿದೆ.
ಊರಿನ ಧಾರ್ಮಿಕ ಕಾರ್ಯಗಳಲ್ಲಿ ಮಿಂಚುತ್ತಿದ್ದ ದೃವ ನಕ್ಷತ್ರ ಮರೆಯಾಗಿದೆ. – ಪಟ್ಟಣದಲ್ಲಿರುವ ಯಾವುದೇ ದೇವಾಲಯಗಳಲ್ಲಿ ಧಾರ್ಮಿಕ ಆಚರಣೆಗಳು ನಡೆದಾಗ ಕೈಲಾದ ಸೇವೆ ಸಲ್ಲಿಸುವುದರ ಜೊತೆಗೆ ಅನ್ನ ದಾಸೋಹದಂತಹ ಪವಿತ್ರ ಕಾರ್ಯಗಳಲ್ಲಿ ಕೆಲಸ ಕಾರ್ಯಗಳನ್ನೆಲ್ಲಾ ಹೆಗಲ ಮೇಲೆ ಹೊತ್ತು ಹಗಲು-ರಾತ್ರಿ ಎನ್ನದೇ ಶ್ರಮಿಸುತ್ತಿದ್ದರು. ಅದರೊಂದಿಗೆ ಇಂತಹ ಕಾರ್ಯಗಳಿಗೆ ಯುವಕರಲ್ಲಿ ಹೊಸ ಉತ್ಸಾಹವನ್ನು ತುಂಬುತ್ತಿದ್ದರು. ಭವಿಷ್ಯದ ಪೀಳಿಗೆಗೆ ಧರ್ಮ ಕಾರ್ಯ, ದೇಶ ಭಕ್ತಿ ಮತ್ತು ಸಾಮರಸ್ಯ ಜೀವನದ ಕುರಿತು ಸ್ವಯಃ ಕಥೆಯಾಗಿಯೇ ಉದಾಹರಣೆಯಾಗುತ್ತಿದ್ದರು. ಧಾರ್ಮಿಕ ಕಾರ್ಯಗಳಲ್ಲಿ ಸದಾ ಹೊಳೆಯುತ್ತಿದ್ದ ದೃವ ನಕ್ಷತ್ರವೊಂದು ಯಲ್ಲಾಪುರ ಮಣ್ಣಿನಿಂದ ಕಣ್ಮರೆಯಾಗಿರುವುದು ಅತೀವ ದುಃಖ ತಂದಿದೆ.]
ಕ್ರೀಡೋತ್ಸಾಹದ ಚೇತನ ; ಯುವ ಪೀಳಿಗೆಗೆ ಜ್ವಲಂತ ನಿದರ್ಶನ ; ಅಗಲಿದ ದಯಣ್ಣ – ಹಿಂದೆ ಕರ್ನಾಟಕ ಯೂಇವರ್ಸಿಟಿ ಬ್ಲೂ ಆಗಿದ್ದರು. ರಾಷ್ಟ್ರೀಯ ವಾಲಿಬಾಲ್ ತಂಡದ ಆಟಗಾರನಾಗಿ ಹಾಗೂ ಮುಖ್ಯಸ್ಥನಾಗಿಯೂ ಮಿಂಚಿದ್ದರು. ಕಬ್ಬಡ್ಡಿ, ಲಾಂಗ್‌ಜಂಪ್‌ನಲ್ಲೂ ಭಾಗವಹಿಸುತ್ತಿದ್ದರು. ವಿಶೇಷವಾಗಿ ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಕ್ರೀಡೆಯ ಪ್ರಾಮುಖ್ಯತಯನ್ನು ತಿಳಿಸಿಕೊಡುತ್ತಿದ್ದರು. ಯಲ್ಲಾಪುರ ಪಟ್ಟಣದಲ್ಲಿ ಉತ್ತಮ ಗುಣಮಟ್ಟದ ವಾಲಿಬಾಲ್ ಟೂರ್ನಮೆಂಟುಗಳನ್ನು ಆಯೋಜಿಸುತ್ತಿದ್ದರು. ಕ್ರೀಡಾಲೋಕದಲ್ಲಿ ಯಲ್ಲಾಪುರದಲ್ಲೇ ಹೆಚ್ಚು ಹೆಸರು ಮಾಡಿದ್ದ ದಯಣ್ಣ ಇನ್ನಿಲ್ಲವಾಗಿರುವುದು ಕ್ರೀಡಾಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಹಿಂದು ಸಮಾಜದ ಹುಲಿಯಂತಿದ್ದರು ದಯಾಕಾರಂತ್. ಯಾರಿಗೆ ಏನೆ ಸಮಸ್ಯೆ ಬಂದರು ಗಟ್ಟಿ ಧ್ವನಿಯಲ್ಲಿ ಮಾತನಾಡಿ ಬಗೆಹರಿಸುತ್ತಿದ್ದರು ದಾರಿ ತಪ್ಪುತ್ತಿದ್ದ ಅದೆಷ್ಟೊ ಯುವಕರಿಗೆ ಬುದ್ದಿ ಹೇಳಿ ಸರಿದಾರಿಗೆ ತಂದಿದ್ದರು. ಎಲ್ಲರ ಅಚ್ಷುಮೆಚ್ಚಿನವರಾಗಿ ಮಕ್ಕಳೊಡನೆ ಮಕ್ಕಳಂತೆ ಹಿರಿಯರೊಂದಿಗೆ ಹಿರಿಯರಂತೆ ಯುವಕರೊಂದಿಗೆ ಯುವಕರಂತೆ ಬೆರೆಯುತ್ತಿದ್ದ ಹಸನ್ಮುಖಿಯಾಗಿದ್ದರು ಅವರ ಅಗಲಿಕೆ ಕಣ್ತುಂಬಿ ಬಂದಿದೆ ಅವರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ.- ಜಗನ್ನಾಥ ರೇವಣಕರ, ಅಂಬೇಡ್ಕರ್ ಸೇವಾ ಸಂಘದ ಮಾಜಿ ಅಧ್ಯಕ್ಷರು
ಸರ್ವಜನಾಂಗದ ಶಾಂತಿಯ ದೂತನಂತಿದ್ದ ದಯಾಕಾರಂತ್ ಯಾವುದೆ ಧರ್ಮದ ಮನೆಗಳಲ್ಲಿ ಸಮಸ್ಯೆ ಬಂದು ಸಲಹೆಗಾಗಿ ಇವರ ಬಳಿ ಬಂದರೆ ಕುಟುಂಬದ ಹಿರಿಯನಂತೆ ನಿಂತು ಸಮಸ್ಯ ಬಗೆಹರಿಸುತ್ತಿದ್ದರು ಅಲ್ಲದೆ ಎರಡು ಧರ್ಮದ ನಡುವಿನ ಸ್ನೇಹಮಯ ಸೇತುವೆ ಆಗಿದ್ದರು ಅವರ ಅಗಲಿಕೆ ಯಲ್ಲಾಪುರ ಜನತೆಗೆ ತುಂಬಲಾರದ ನಷ್ಟವಾಗಿದೆ. ಬಾಬಾ ಅಲನ್ ಮುಸ್ಲಿಂ ಸಮುದಾಯದ ಹಿರಿಯರು
Prathidvani Yellapura