Breaking News

ಪ್ರಕೃತಿದತ್ತ ಗುಡ್ಡ ಕರಗಿಸಿ ರಸ್ತೆ, ತೋಟ ನಿರ್ಮಿಸಿ ಭೂ ಕುಸಿತವಾದರೆ ಹೊಣೆ ಯಾರು.???

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ತಾಲೂಕಿನ ಹುಟಕಮನೆ ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ನಾಶ ಮಾಡಿ ಗುಡ್ಡ ವನ್ನೂ ಮಾಯಗೊಳಿಸಿರುವ ಸುದ್ದಿಗೆ ಸಂಬಂಧಿಸಿದಂತೆ ಮತ್ತಷ್ಟು ಬೆಳವಣಿಗೆ ನಡೆದಿದ್ದು ಕೃತ್ಯಕ್ಕೆ ಬಳಸಿದ್ದ ಎರಡು ಜೆಸಿಬಿ ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು ಜಾಗದ ಮಾಲಿಕನ ಮೇಲೆ ದೂರು ದಾಖಲಿಸಿರುವುದಾಗಿ ಮೌಖಿಕವಾಗಿ ತಿಳಿಸಿದ್ದಾರೆ.


ಗುಡ್ಡ  ಸ್ಥಳದ ಮೊದಲಿದ್ದ ಚಿತ್ರಣ ಕಂಡರೆ ಎಂತಹವರ ಕರುಳು ಕಿತ್ತು ಬರುವಂತಿದೆ. ಹಚ್ಚ ಹಸಿರ ಪರಿಸರ ಬೃಹತ್ ಗಾತ್ರದ ಮರಗಳು, ಚಿಲಿಪಿಲಿಯ ಹಕ್ಕಿಗಳು ಪ್ರಾಣಿ ಪಕ್ಷಿಗಳು ಎಲ್ಲವು ಮಾಯ ಪರಿಸರವೆಲ್ಲವು ಕೆಂಪುಮಯ.

  ನೂರಾರು ಸಂಖ್ಯೆಯ ಗಿಡ ಮರಗಳು, ಬೆಲೆ ಬಾಳುವ ಸಸ್ಯಕಾಶಿ ಭೂಮಿಕಂಟಕ ಜೆಸಿಬಿ ಯಂತ್ರದ ದಾಹಕ್ಕೆ ಬಲಿಯಾಗಿದ್ದು ನೈಸರ್ಗಿಕ ಸೌಂದರ್ಯ ಮಾಯವಾಗಿ ಬಳ್ಳಾರಿ ಗಣಿ ಪ್ರದೇಶಗಳನ್ನು ಕಂಡಹಾಗೆ ಹಸಿರೆಲ್ಲಾ ಮಾಯವಾಗಿ ಬರೀ ಕೆಂಪು ಮಣ್ಣಿನ ರಾಶಿಯೇ ಕಾಣಿಸುತ್ತಿದೆ.


ಸ್ಥಳೀಯರ ಮಾಹಿತಿ ಪ್ರಕಾರ ಕಳೆದ ಮೂರು ತಿಂಗಳಿಂದ ಭೂಮಿಯೊಡಲು ಬಗೆಯುವ ಕಾರ್ಯ ಹಗಲು ರಾತ್ರಿ ಭರದಿಂದ ಸಾಗಿದ್ದರು ಯಾವ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ದುರಂತವಾಗಿದೆ. ಇಷ್ಟು ದೊಡ್ಡ ಪ್ರಮಾಣದ ಅರಣ್ಯ ನಾಶವಾಗಿ ಪ್ರಕೃತಿದತ್ತ ಗುಡ್ಡವೆ ಕಣ್ಮರೆಯಾಗಿದೆ ಎಂದರೆ ಒಪ್ಪುವುದು ಸಹ ಕಷ್ಟದ ಕೆಲಸವಾಗಿದೆ.


ಹಲವು ತಲೆಮಾರುಗಳಿಂದ ಅರಣ್ಯವನ್ನೆ ಆಶ್ರಯಿಸಿ ಬದುಕು ನಡೆಸುತ್ತಿರುವವರು ಎಲ್ಲಾದರು ಭೂಮಿ ಅತಿಕ್ರಮಿಸಿಕೊಂಡು ಸಣ್ಣದೊಂದು ಮನೆ ನಿರ್ಮಾಣಕ್ಕೆ ಮುಂದಾದರೆ ತಕ್ಷಣ ಸ್ಥಳಕ್ಕೆ ತಂಡೋಪತಂಡದಲ್ಲಿ ಸಾಗುವ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳ ಕಣ್ಣಿಗೆ ಎಕರೆಗಟ್ಟಲೆ ಸಮತಟ್ಟಾಗುತ್ತಿರುವುದು ಕಾಣಲಿಲ್ಲವೆ ? ಗುಡ್ಡವೆ ಮಾಯವಾಗಿರುವುದು ಸಹ ಕಾಣದೆ ಇಲಾಖೆ ಜಾಣ ಕುರುಡಾಗಿದೆಯೆ? ಎಂಬ ಅನುಮಾನ ಸಾರ್ವಜನಿಕರಿಗೆ ಕಾಡುತ್ತಿದೆ.


61/6 ಸರ್ವೆ ನಂಬರ್ ಮಾಲ್ಕಿ ಜಮೀನಾದರೂ ಲಗ್ತಾಗಿರುವ ಅರಣ್ಯ ಭೂಮಿಯನ್ನು ಬಗೆದಿರುವುದು ಅಕ್ಷಮ್ಯ ಮತ್ತು ಗುಡ್ಡವನ್ನೆ ಮಾಯಮಾಡಿರುವುದು ಮಹಾಪರಾಧವಾಗಿದೆ. ಈ ಪ್ರಕರಣದಲ್ಲಿ ಅರಣ್ಯ ಇಲಾಖೆ ಎಚ್ಚರಿಕೆ ಹೆಜ್ಜೆಯನಿಟ್ಟು ಕಾನೂನು ಕ್ರಮ ಕೈಗೊಳ್ಳಬೇಕಿದೆ ಇಲ್ಲವಾದರೆ ಜನರಿಗೆ ಅರಣ್ಯ ಇಲಾಖೆಯ ಮೇಲಿನ ನಂಬಿಕೆ ಕಳೆದುಕೊಳ್ಳುವ ಆತಂಕವಿದೆ.
ಕಾಮಗಾರಿ ನಡೆಸುವ ಭರದಲ್ಲಿ ಸ್ಥಳದಲ್ಲಿ ಹೆಸ್ಕಾಂ ಆಸ್ತಿಗೂ ಧಕ್ಕೆಯಾಗಿದ್ದು ಇಲಾಖೆಯ ಗಮನಕ್ಕೂ ತಾರದಿರುವುದು ಆಶ್ಚರ್ಯ ತಂದಿದೆ.


ದೂರು ದಾಖಲಿಸಿಕೊಂಡು ದಂಡ ವಿಧಿಸಿ ಕೈ ಬಿಟ್ಟರೆ ನಾಶ ಪಡಿಸಿದ ಅಮೂಲ್ಯ ಅರಣ್ಯ ಪ್ರಕೃತಿದತ್ತ ಗುಡ್ಡ ಮರು ಸೃಷ್ಟಿ ಸಾದ್ಯವೆ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇಷ್ಟೊಂದು ಭಾರಿ ಪ್ರಮಾಣದಲ್ಲಿ ಅರಣ್ಯ ನಾಶವಾಗಿರುವುದು ಇದರ ತನಿಖೆ ಮತ್ತು ಕೈಗೊಳ್ಳುವ ಕಾನೂನು ಕ್ರಮ ಭವಿಷ್ಯದಲ್ಲಿ ಅರಣ್ಯ ನಾಶಕ್ಕೆ ಮುಂದಾಗುವವರಿಗೆ ಪಾಠವಾಗಬೇಕಿದೆ ಎಂಬುದು ಪರಿಸರ ಪ್ರೇಮಿಗಳು ಹಾಗು ಪ್ರಜ್ಞಾವಂತ ನಾಗರಿಕರ ಅನಿಸಿಕೆಯಾಗಿದೆ.


ಈ ಕುರಿತು ಮನವಿದಾರರಿಂದ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮತ್ತೊಂದು ದೂರು ಸಲ್ಲಿಕೆಯಾಗಿದ್ದು ಗುಡ್ಡ ಕೊರೆದ ಯಂತ್ರಗಳು ಮತ್ತು ಈ ಕೃತ್ಯಕ್ಕೆ ಮುಂದಾದವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಬೇಕಿದೆ. ಮಣ್ಣಿನಡಿ ಹಾಕಿರುವ ಬೆಲೆಬಾಳುವ ಮರಗಳನ್ನು ಹೊರತೆಗೆದು ಕ್ರಮ ಜರುಗಿಸಬೇಕಿದೆ. ಕೃತ್ಯಕ್ಕೆ ಬಳಸಿದ ಜೆಸಿಬಿ ಮಾತ್ರವಲ್ಲದೇ ಲಾರಿ, ಟಿಪ್ಪರ್, ಟ್ರಾö್ಯಕ್ಟರ್ ಹಾಗೂ ಜಾಗದ ಮಾಲೀಕರಾದ ದೀಪಕ್ ಪುಂಡಲೀಕ ನಾಯ್ಕ ಹಳವಳ್ಳಿ ಅವರ ಮೇಲೆಯೂ ಕಾನೂನು ಕ್ರಮ ಕೈಗೊಳ್ಳಬೇಕೆಂದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾನೂನಿನ ಅಡಿಯಲ್ಲಿ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಹುಟಕಮನೆ ಅರಣ್ಯ ವ್ಯಾಪ್ತಿಯಲ್ಲಿ ಜೆಸಿಬಿ ಬಳಸಿ ಕೆಲಸ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಜಾಗದ ಮಾಲೀಕನ ಮೇಲೆ ದೂರು ದಾಖಲಿಸಿದ್ದು ಕಾಮಗಾರಿಗೆ ಬಳಸಿದ ಎರಡು ಜೆಸಿಬಿಗಳನ್ನು ವಶಕ್ಕೆ ಪಡೆಯಲಾಗಿದೆ. ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದ್ದು ಕಂದಾಯ ಇಲಾಖೆಯೊಂದಿಗೆ ಸೇರಿ ಜಂಟಿಯಾಗಿ ತನಿಖೆ ಪ್ರಗತಿಯಲ್ಲಿದೆ ಎಂದು ಇಡಗುಂದಿ ವಲಯ ಅರಣ್ಯಾಧಿಕಾರಿ ಎಂ. ಎಚ್ ನಾಯ್ಕ ಪ್ರತಿಕ್ರಿಯೆ ನೀಡಿದ್ದಾರೆ.
ಹುಟಕಮನೆಯ ಅರಣ್ಯ ವ್ಯಾಪ್ತಿಯಲ್ಲಿ ಜೆಸಿಬಿ ಕೆಲಸ ನಡೆಸಿದ ಸಂದರ್ಭದಲ್ಲಿ ಕಣ್ತಪ್ಪಿನಿಂದ ವಿದ್ಯುತ್ ಕಂಬಕ್ಕೆ ಧಕ್ಕೆಯಾಗಿದ್ದು ಸ್ಥಳಕ್ಕೆ ಹೆಸ್ಕಾಂ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ನೀಡಿದ್ದಾರೆ. ಜಾಗದ ಮಾಲೀಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೆಸ್ಕಾಂ ಇಡಗುಂದಿ ವಿಭಾಗಾಧಿಕಾರಿ ಲಕ್ಷ್ಮಣ ಜೋಗಳೇಕರ ಪ್ರತಿಕ್ರಿಯಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *