Breaking News

ಯಲ್ಲಾಪುರ ವಲಯ ಅರಣ್ಯ ಇಲಾಖೆ ಕಾರ್ಯಾಚರಣೆ  6 ಮಂದಿ ಜಿಂಕೆ ಬೇಟೆಗಾರರ ಬಂಧನ ಒರ್ವ ಪರಾರಿ

ಪ್ರತಿಧ್ವನಿ ಯಲ್ಲಾಪುರ : ಅನಧಿಕೃತ ಬಂದೂಕು ಹಾಗೂ ಜಿಂಕೆ ಮಾಂಸ ಭೇಟೆಯಾಡಿದ ಕಾರಣಕ್ಕಾಗಿ ತಾಲೂಕಿನ ಆರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಒಂದು ಸಿಂಗಲ್ ಬ್ಯಾರೆಲ್ ಬಂದೂಕು, ಟಾಟಾ ಇಂಡಿಕಾ ಕಾರು-2, 4 ಕೆಜಿ ಹಸಿ ಜಿಂಕೆ ಮಾಂಸ, 4 ಕೆ.ಜಿ ಬೇಯಿಸಿದ ಜಿಂಕೆ ಮಾಂಸವನ್ನು ವಶಪಡಿಸಿಕೊಂಡಿದ್ದು ಓರ್ವ ಆರೋಪಿ ಪರಾರಿಯಾಗಿದ್ದು ಏಳೂ ಜನರ ಮೇಲೆ ವನ್ಯಜೀವ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಘಟನೆ ಮೇ 31ರಂದು ನಡೆದಿದೆ.


ಮೇ 31ರಂದು ಸಂಜೆ ಯಲ್ಲಾಪುರ ಅರಣ್ಯ ವಿಭಾಗದ ಹಿರಿಯ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಾಲೂಕಿನ ಚಂದಗುಳಿ ಗ್ರಾಮದ ಜನಕಲಜಡ್ಡಿ ಸತೀಶ ಪರಮೇಶ್ವರ ನಾಯ್ಕ, ಇತನ ವಾಸ್ತವ್ಯದ ಮನೆಯನ್ನು ಜೂ.1ರಂದು ಬೆಳಗಿನ ಜಾವ ತಪಾಸಣೆ ಮಾಡಿದ್ದು ಜಿಂಕೆ ಮಾಂಸ ಹಾಗೂ ಅನಧಿಕೃತವಾದ ಬಂದೂಕು ಪತ್ತೆಯಾಗಿರುತ್ತದೆ. ಈತನನ್ನು ಇಲಾಖೆಯ ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ಮಾಡಲಾಗಿ ಯಲ್ಲಾಪುರ ಪಟ್ಟಣದ ಉಧ್ಯಮನಗರದ ನಿವಾಸಿ ರುಸ್ತುಂ ಅಟೇಲಸಾಬ ಬೇಪಾರಿ ಎಂಬಾತನು ಇನ್ನಿತರರನ್ನು ಪ್ರಚೋದಿಸಿ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಮಾಂಸವನ್ನು ಮಾರಾಟ ಮಾಡುವ ದಂಧೆಯನ್ನು ತನ್ನ ವೃತ್ತಿಯನ್ನಾಗಿ ನಡೆಸಿಕೊಂಡು ಬಂದಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.


ನಂತರ ರುಸ್ತುಂ ಅಟೇಲಸಾಬ ಬೇಪಾರಿ ಇತನನ್ನು ಇಲಾಖಾ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ತಾನು ಚಂದಗುಳಿ ಜನಕಲ ಜಡ್ಡಿಯ ಸತೀಶ ಪರಮೇಶ್ವರ ನಾಯ್ಕ, ತನ್ನ ಮಗನಾದ ಕಾಳಮ್ಮನಗರ ನಿವಾಸಿ ಶಬ್ಬೀರ ರುಸ್ತಂ ಶೇಖ, ಮಹಮ್ಮದ ರಫೀಕ ಇಮಾಮಸಾಬ ಯಳ್ಳೂರ, ಕರೀಂ ಖಾದರಸಾಬ ಶೇಖ, ಮಹಮ್ಮದ ಶಫಿ ಖಾದರಸಾಬ ಶೇಖ, ಹಾಗೂ ಉದ್ಯಮನಗರದ ಪ್ರಶಾಂತ ಮಂಜುನಾಥ ನಾಯ್ಕ, ಇವರನ್ನು ಸಂಘಟಿಸಿಕೊಂಡು ಮೇ 30 ರಂದು ರಾತ್ರಿ ಯಲ್ಲಾಪುರ-ಹಳಿಯಾಳ ರಸ್ತೆಯ ಪಕ್ಕ ಕಾಯ್ದಿಟ್ಟ ಅರಣ್ಯದಲ್ಲಿ ಜಿಂಕೆಯೊಂದನ್ನು ಬೇಟೆಯಾಡಿ ಮಾಂಸವನ್ನು ಟಾಟಾ ಇಂಡಿಕಾ  ಎರಡು  ಕಾರಿನಲ್ಲಿ ಸಾಗಾಟ ಮಾಡಿರುವುದಾಗಿ ಹೇಳಿಕೆ ನೀಡಿರುತ್ತಾನೆ. ಹಾಗೂ ರುಸ್ತುಂ ಅಟೇಲಸಾಬ ಬೇಪಾರಿ ಇತನು ಹವ್ಯಾಸಿ ವನ್ಯಜೀವಿ ಬೇಟೆಗಾರನಾಗಿದ್ದು, ಈ ಹಿಂದೆಯೂ ಹಲವು ವನ್ಯಜೀವಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ.


ಇವರಲ್ಲಿ ಪ್ರಶಾಂತ ಮಂಜುನಾಥ ನಾಯ್ಕ ಎಂಬ ಆರೋಪಿಯು ತಲೆಮರೆಸಿಕೊಂಡಿದ್ದು ಉಳಿದ 6 ಆರೋಪಿಗಳನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ.


ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷ ಬಾನು ಜಿ.ಪಿ ಮತ್ತು ಎಸಿಎಫ್ ಆನಂದ್ ಮಾರ್ಗದರ್ಶನದಲ್ಲಿ ಯಲ್ಲಾಪುರ ವಲಯದ ವಲಯ ಅರಣ್ಯಾಧಿಕಾರಿ ಎಲ್.ಎ.ಮಠ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಅಲ್ತಾಪ್, ಶ್ರೀನಿವಾಸ, ಸಂತೋಷ, ಬಸಲಿಂಗಪ್ಪ, ಅಶೋಕ, ಸಂಜಯಕುಮಾರ, ಶರಣಬಸು, ಗಸ್ತು ಅರಣ್ಯ ಪಾಲಕರಾದ ದೇವರಾಜ, ಅಲ್ಮಾಸ್, ಗೌರೀಶ ಮತ್ತು ವಾಹನ ಚಾಲಕರು ಹಾಗೂ ವಲಯದ ಎಲ್ಲಾ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *