
ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನಲ್ಲಿ ಹಾದು ಹೋಗಿರುವ ಬಳ್ಳಾರಿ- ಕಾರವಾರ ರಾಷ್ಟ್ರೀಯ ಹೆದ್ದಾರಿ 63 ರ ಅರಬೈಲ್ ಘಟ್ಟ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಒಂದು ಮತ್ತೊಂದು ವಾಹನಕ್ಕೆ ಡಿಕ್ಕಿಯಾಗಿ ರಸ್ತೆಗೆ ಅಡ್ಡಲಾಗಿಬಿದ್ದ ಘಟನೆ ನಡೆದಿತ್ತು.


ಗ್ಯಾಸ್ ತುಂಬಿದ್ದ ಟ್ಯಾಂಕರ್ ರತ್ನಗಿರಿಯಿಂದ ಪುತ್ತೂರಿಗೆ ಸಾಗುವ ವೇಳೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಮೇಲೆ ಮತ್ತೊಂದು ವಾಹನಕ್ಕೆ ಡಿಕಿಯಾಗಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿತ್ತು. ಇದರಿಂದ ಹೆದ್ದಾರಿ ವಾಹನ ಸಂಚಾರ ಸ್ಥಗಿಗೊಳಿಸಿ ಅವಘಡವೇನು ಸಂಭವಿಸದಂತೆ ಯಲ್ಲಾಪುರ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಎರಡು ಬದಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದರು.


ನಂತರ ಯಲ್ಲಾಪುರ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಅನಿಲ ಸೋರಿಕೆಯಾಗುತ್ತಿದ್ದ ಟ್ಯಾಂಕರ್ ಬಳಿ ಅಪಾಯಕಾರಿ ಸ್ಥಿತಿಯಲ್ಲು ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿ ಸೋರಿಕೆಯಾಗುತ್ತಿದ್ದ ಅನಿಲವನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದರು. ಇದರಿಂದ ಸುತ್ತಮುತ್ತಲಿನ ದಟ್ಟ ಅರಣ್ಯ ಅದರೊಳಗಿನ ವನ್ಯಜೀವಿಗಳು ಅಕ್ಕಪಕ್ಕದ ಗ್ರಾಮಗಳು ಅಪಾಯದಿಂದ ಪಾರಾಗಿದ್ದವು.

ಬುಧವಾರ ಬೆಳಗಿನ ಸಮಯದ ವರೆಗು ವಾಹನ ಸಂಚಾರ ಈ ಪ್ರದೇಶದಲ್ಲಿ ತಡೆಯಲಾಗಿತ್ತು. ಟ್ಯಾಂಕರ್ ತೆರವುಗೊಳಿಸಲು ಬೆಳಗಾವಿಯಿಂದ ನುರಿತ ತಜ್ಞರ ತಂಡದ ಆಗಮನದ ನಿರೀಕ್ಷಯಲ್ಲಿದ್ದರು. ತಜ್ಞರ ತಂಡ ಆಗಮಿಸಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಸೋರಿಕೆ ಶಾಶ್ವತವಾಗಿ ನಿಲ್ಲಿಸಿ ಅಂಕೋಲಾದ ಗೋ ಗ್ಯಾಸ್ ಡಂಪಿಗ್ ಯಾಡ್೯ ಗೆ ಅನಿಲ ಸಾಗಿಸುವ ಚಿಂತನೆ ನಡೆಸಿದ್ದರು. ಅದಕ್ಕಾಗಿ ಟ್ಯಾಂಕರ್ ಹೊತ್ತು ಸಾಗುವ ಬದಲಿ ವಾಹನದ ವ್ಯವಸ್ಥೆಯ ಚಿಂತನೆಯನ್ನು ಮಾಡಲಾಗಿತ್ತು.
ನಂತರ ಮದ್ಯಾಹ್ನದ ವೇಳೆಯಲ್ಲಿ ಬೆಳಗಾವಿಯಿಂದ ಬಂದ ನುರಿತ ತಂತ್ರಜ್ಞರ ತಂಡ ನಾಲ್ಕು ಕ್ರೇನ್ ಸಹಾಯದಿಂದ ಪಲ್ಟಿಯಾದ ಗ್ಯಾಸ್ ಟ್ಯಾಂಕರ್ ಮೇಲಕ್ಕೆತ್ತಿ ತೆರವುಗೊಳಿಸಲಾಯಿತು.

ಇಂತಹ ಅಪಾಯಕಾರಿ ಕಾರ್ಯಾಚರಣೆ ಸಂದರ್ಭದಲ್ಲಿ ಆಂಬುಲೆನ್ಸ್ ಒಂದಕ್ಕೆ ತೆರಳಲು ಅನುವು ಮಾಡಿಕೊಟ್ಟು ಕಾರ್ಯಾಚರಣೆ ತೊಡಗಿದ್ದ ತಂಡದವರು ಬದ್ದತೆ ತೋರಿದರು.
ಈ ಸಂದರ್ಭದಲ್ಲಿ ಎರಡು ಬದಿ ಎಲ್ಲಾ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಯಾವುದೆ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿ ಶಾಮಕ ದಳದವರು ಮತ್ತು ಪೊಲೀಸರು ಸ್ಥಳದಲ್ಲೆ ಇದ್ದರು.
ಒಟ್ಟಿನಲ್ಲಿ ಯಾವುದೆ ಹಾನಿ ಸಂಭವಿಸದಂತೆ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ ಯಲ್ಲಾಪುರ ಅಗ್ನಿಶಾಮಕ ದಳದವರು, ಪೊಲೀಸರು ಸೈ ಎನಿಸಿಕೊಂಡರು.

Prathidvani Yellapura