Breaking News

ಉಚಿತ ವಿದ್ಯುತ್ ಬೆನ್ನಲ್ಲೆ ಬೆಲೆ ಏರಿಸಿದ ನಿಗಮದ ನಿರ್ಧಾರ ಜನವಿರೋದಿ

ಪ್ರತಿಧ್ವನಿ,ಯಲ್ಲಾಪುರ : ಈ ತಿಂಗಳು ಸಾಮಾನ್ಯವಾಗಿ ಎಲ್ಲೆಡೆ ವಿದ್ಯುತ್ ಬಿಲ್ಲಿನ ಮೊತ್ತ ಅಧಿಕವಾಗಿ ಬಂದಿದೆ. ಇದಕ್ಕೆ ಪ್ರತಿ ಮನೆಗಳಲ್ಲೂ ವಿದ್ಯುತ್ ಬಳಕೆ ಅಧಿಕವಾಗಿದ್ದು, ಒಂದು ಕಾರಣವಾದರೆ; ಏಪ್ರೀಲ್-ಮೇ ತಿಂಗಳಿನಿಂದ ಪೂರ್ವಾನ್ವಯದ ಹೆಚ್ಚಿನ ದರ ಸೇರ್ಪಡೆಯಾಗಿದ್ದು, ಮತ್ತೊಂದು ಕಾರಣವಾಗಿದೆ ಎಂದು ಯಲ್ಲಾಪುರದ ಹೆಸ್ಕಾಂ ವಿಭಾಗೀಯ ಅಧಿಕಾರಿ ರಮಾಕಾಂತ ನಾಯ್ಕ ಹೇಳಿದರು.


ಅವರು ಪಟ್ಟಣದ ಹೆಸ್ಕಾಂ ಉಪ-ವಿಭಾಗದ ಕಚೇರಿಯಲ್ಲಿ ನಡೆದ ಯಲ್ಲಾಪುರ ಉಪ-ವಿಭಾಗ ಮಟ್ಟದ ವಿದ್ಯುತ್ ಗ್ರಾಹಕರ ಕುಂದು-ಕೊರತೆಗಳ ಸಂವಾದ ಸಭೆಯಲ್ಲಿ ಹೇಳಿದರು.
ಇನ್ನು ಸರ್ಕಾರದ ಘೋಷಣೆಯಂತೆ ಉಚಿತ ವಿದ್ಯುತ್ ಸಂಪರ್ಕ ನೀಡುವ ಬಗೆಗೆ ನಮಗಿನ್ನೂ ಸರ್ಕಾರದ ಮಾರ್ಗಸೂಚಿ ಬಂದಿಲ್ಲ; ಮುಂದಿನ ಅಗಸ್ಟ ತಿಂಗಳಿನಿಂದ ಇದು ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ ಎಂದರು.
ಸಾಮಾನ್ಯವಾಗಿ 400 ರೂ. ಗಳಷ್ಟು ಮಾಸಿಕವಾಗಿ ಬರುತ್ತಿದ್ದ ವಿದ್ಯುತ್ ಬಿಲ್, ಏಕಾಏಕೀ ಈ ತಿಂಗಳು 600 ಕ್ಕೂ ಅಧಿಕ ರೂ. ಬಂದಿದ್ದು, ಬಡವರ ಉದ್ಧಾರ ಮಾಡುತ್ತಿರುವ ಸರ್ಕಾರದ ಇದನ್ನು ಹಗಲುದರೋಡೆ ಎನ್ನಬೇಕಾಗಿದೆ ಎಂದು ತಾಲೂಕಿನ ಹಾಸ್ಪುರದ ಗ್ರಾಹಕ ಸುಬ್ರಾಯ ತೀವ್ರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಉಚಿತವಾಗಿ ವಿದ್ಯುತ್ ಸರಬರಾಜು ಮಾಡುವುದಾಗಿ ಘೋಷಿಸಿ ಅಧಿಕಾರಕ್ಕೆ ಬಂದ ಸರ್ಕಾರ ಇದೀಗ ಬಡವರನ್ನು ಶೋಷಿಸಲು ತೊಡಗಿದೆ. ಇಷ್ಟೊಂದು ಅಧಿಕ ಮೊತ್ತದ ಬಿಲ್ ಬರುವುದಕ್ಕೆ ಕಾರಣವೇನೆಂದು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಸುಬ್ರಾಯ ನಾಯ್ಕ ಅವರ ಅಧಿಕ ಬಿಲ್ ಬಂದಿರುವುದರ ಕುರಿತಾದ ಪ್ರಶ್ನೆಗೆ ಮಂಚಿಕೇರಿ ಎಸ್.ಓ ಸುನೀಲ್ ಬಿ.ಕೆ ಉತ್ತರಿಸಿ ತಕ್ಷಣದಲ್ಲಿಯೇ ಈ ಸಮಸ್ಯೆಗೆ ಸ್ಪಂದಿಸುವ ನಾವು ಅವರ ಮನೆಯ ಮೀಟರ್ ರೀಡಿಂಗ್ ಪರಿಶೀಲಿಸಿ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದರು.
ಮತ್ತೋರ್ವ ಗ್ರಾಹಕ ಅನಂತ ಹೆಗಡೆ ಹಿತ್ಲಳ್ಳಿ ಜಿಲ್ಲೆಯಲ್ಲಿ ಇತ್ತೀಚೆಗೆ ನೂತನ ವಿದ್ಯುತ್ ಸಂಪರ್ಕಕ್ಕೆ ಹಿಂದೆಂದೂ ಕಾಣಿಸದ ಗೊಂದಲ ಕಂಡುಬರುತ್ತಿದ್ದು, ಅಧಿಕಾರಿಗಳು ಅನವಶ್ಯಕ ಗ್ರಾಹಕರನ್ನು ಸತಾಯಿಸುವುದೇಕೆ ಎಂದು ಪ್ರಶ್ನಿಸಿದಾಗ ಈ ಕುರಿತು ಗಂಭೀರ ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.


ಅಗತ್ಯವಿದ್ದೆಡೆ ನೂತನ ಮಾರ್ಗ ನಿರ್ಮಾಣ ಮತ್ತು ಕಂಬ ಬದಲಾಯಿಸುವ ಕುರಿತಂತೆಯೂ ಪ್ರಶ್ನಿಸಿದ ಅನಂತ ಹೆಗಡೆ ಬೇರೆ ಜಿಲ್ಲೆಗಳಲ್ಲಿ ಇರದ ಕಾನೂನು ನಮ್ಮ ಜಿಲ್ಲೆಯಲ್ಲಿದೆ. ಇದಕ್ಕೆ ಕಾರಣವೇನೆಂದು ಖಾರವಾಗಿ ಕೇಳಿದರಾದರೂ ಅಧಿಕಾರಿಗಳು ಸಮಂಜಸ ಉತ್ತರ ನೀಡಲಿಲ್ಲ.


ಜೀವಮಾನದಲ್ಲೇ ಕಾಣದಷ್ಟು ಮೊತ್ತದ ವಿದ್ಯುತ್ ಬಿಲ್ ಈ ತಿಂಗಳು ಬಂದಿದ್ದು, ರೈತರಾದ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕೆ ? ಎಂದು ಸಾವಗದ್ದೆಯ ರವೀಂದ್ರ ಭಟ್ಟ ತೀವ್ರ ಆತಂಕ ವ್ಯಕ್ತಪಡಿಸಿದರು.
ಒಟ್ಟಾರೆ ವಿದ್ಯುತ್ ಗ್ರಾಹಕರ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರದೂ ಈ ಬಾರಿಯ ವಿದ್ಯುತ್ ಬಿಲ್ ಅಧಿಕ ಮೊತ್ತದ್ದಾಗಿ ಬಂದಿರುವುದು ಏಕೆಂಬ ಪ್ರಶ್ನೆಯಾಗಿತ್ತು. ಇದು ಕೇವಲ ನಮ್ಮ ಉಪ-ವಿಭಾಗದ ಕಚೇರಿ ಮಟ್ಟದ ನಿರ್ಣಯವಾಗಿರದೇ ಸರ್ಕಾರದ ನಿರ್ಣಯವಾಗಿದೆ. ಒಂದೆರಡು ತಿಂಗಳ ನಂತರ ಪುನಃ ಯಥಾ ಪ್ರಕಾರ ಮೊದಲಿನಂತೆಯೇ ಬಳಕೆಯಷ್ಟೇ ಮೊತ್ತದ ಬಿಲ್ ಬರುವ ಸಾಧ್ಯತೆಯಿದೆ. ಗ್ರಾಹಕರು ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ರಮಾಕಾಂತ ನಾಯ್ಕ ತಿಳಿಸಿದರು.
ಸಭೆಯಲ್ಲಿ ಗ್ರಾಮೀಣ ವಿಭಾಗದ ಎಸ್.ಓ ಲಕ್ಷ್ಮಣ ಜೋಗಳೇಕರ್, ಕಿರವತ್ತಿ ಎಸ್.ಓ ರವಿಚಂದ್ರ ಪಾಟೀಲ ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *