

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ-ಹಿಂದೆಲ್ಲ ಅಡಿಕೆ ಹಣ್ಣಾದಾಗ ಮಂಗಗಳ ಕಾಟ ಇರುತ್ತಿತ್ತು. ಅವು ಹಣ್ಣಡಿಕೆಗಳ ರಸ ಚೀಪಿ ಕೆಡವುತ್ತಿದ್ದವು. ಹಂದಿಗಳ ಹಾವಳಿಯೂ ಅಷ್ಟೇ; ಕೊಯ್ಲಿಗೆ ಮೊದಲು ಭತ್ತದ ಗದ್ದೆಗಳಿಗಷ್ಟೇ ಸೀಮಿತವಾಗಿರುತ್ತಿತ್ತು. ಆದರೆ ಈಗ ಕಾಲ ಬದಲಾದಂತೆ ಅವುಗಳೂ ಬದಲಾಗಿವೆ. ಮಂಗ ಬಾಳೆಕಾಯಿ,ಹಣ್ಣಡಿಕೆಗಳೊಂದಿಗೆ ಅಡಿಕೆಯ ಎಳೆ ಮಿಳ್ಳೆಗಳನ್ನೇ ತಿಂದು ಹಾಳು ಮಾಡುತ್ತಿವೆ. ಹಂದಿಗಳು ಭತ್ತದ ಗದ್ದೆಗಳಿಂದ ತೆಂಗಿನ ತೋಟಗಳಿಗೇ ನುಗ್ಗಿ, ಮರದಿಂದ ಕೆಳಗೆ ಉದುರಿದ ತೆಂಗಿನ ಕಾಯಿಗಳನ್ನು ಮನುಷ್ಯರಿಗಿಂತ ನಾಜೂಕಾಗಿ ಸುಲಿದು ತಿರುಳು ತಿನ್ನುವ ವಿಧಾನವನ್ನು ರೂಢಿಸಿಕೊಂಡಿವೆ!

ತೋಟದಕಲ್ಲಳ್ಳಿ ವೆಂಕಟ್ರಮಣ ಹೆಗಡೆಯವರದ್ದು ಸುಮಾರು ಮೂರುವರೆ ಎಕರೆ ಅಡಿಕೆ ತೋಟ. ಅಲ್ಲಿ ಕಾಳುಮೆಣಸು, ಯಾಲಕ್ಕಿ, ಜಾಯ್ಕಾಯ್, ಬೇರು ಹಲಸು, ಕಾಫಿ, ಲಿಂಬು,ಅರಿಷಿಣ ಹೀಗೆ ಬಹಳಷ್ಟು ಬಗೆಯ ಉಪಬೆಳೆಗಳಿವೆ. ತೆಂಗಿನ ತೋಟದಲ್ಲಿ ಮಾವು, ಹಲಸು, ಬೆಣ್ಣೆಹಣ್ಣು ದೊಡ್ಳಿ ಮೊದಲಾದ ಉಪ ಉತ್ಪನ್ನದ ಗಿಡ,ಮರಗಳಿವೆ.
ಅವುಗಳಲ್ಲಿ ಕಾಫಿಯನ್ನು ಹೊರತುಪಡಿಸಿ ಉಳಿದೆಲ್ಲವಕ್ಕೂ ಮಂಗಗಳ ಕಾಟ. ಹಂದಿ ತೆಂಗಿನ ಕಾಯಿ ಸುಲಿದು ತಿನ್ನುವುದಲ್ಲದೆ, ಎಳೆಯ ಅರಿಷಿಣದ ಎಲೆಗಳನ್ನೂ ಹರಿದು ತಿನ್ನುತ್ತದೆ.

ಎರಡು ವರುಷಗಳ ಹಿಂದೆ ತೋಟದ ಸುತ್ತ ಬಲೆ ಕಟ್ಟಿದರೆ ಮಂಗಗಳು ಬರುತ್ತಿರಲಿಲ್ಲ. ಈಗ ಬಲೆಯನ್ನೇ ಹರಿದು ಒಳಗೆ ಬರುತ್ತವೆ. ಹೆಗಡೆಯವರ ಮಾತಿನಲ್ಲೇ ಹೇಳುವುದಾದರೆ, ಸಂಜೆ ಐದರ ನಂತರ ತೋಟಕ್ಕೆ ಬಂದ ಮಂಗಗಳು ರಾತ್ರಿ ಅಡಿಕೆ ಮರಗಳ ಮೇಲೇ ವಾಸ್ತವ್ಯ ಹೂಡುತ್ತವೆ. ಬೆಳಿಗ್ಯೆ ಬೆಳಕು ಹರಿಯುವ ಮೊದಲೇ ಎದ್ದು, ಬೆಳೆಗಳನ್ನು ತಿಂದು ಮನೆಯವರು ಏಳುವ ಹೊತ್ತಿಗೆ ನಾಪತ್ತೆಯಾಗುತ್ತವೆ ಎನ್ನುತ್ತಾರೆ.
ಇದು ಒಂದು ಮನೆ, ಒಂದು ಊರಿನದಷ್ಟೇ ಸಮಸ್ಯೆಯಲ್ಲ. ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ತೋಟದಕಲ್ಲಳ್ಳಿ,ಕೋಟೆಮನೆ,ಮಲ್ಲಾಪುರ,ನರೀಸರ,ಕನೇನಳ್ಳಿ, ಉಮ್ಮಚ್ಗಿ, ಸೀಗೆಮನೆ,ಬೆಳಗುಂದ್ಲಿ,ಚವತ್ತಿ,ಕಾನಗೋಡ,ಹಾಸ್ಪುರ ಹೀಗೆ ಬಹುತೇಕ ಊರುಗಳ ರೈತರ ಸಮಸ್ಯೆಯೂ ಆಗಿದೆ. ಈ ಕಾಟದಿಂದಾಗಿ ಕೆಲವು ಕೃಷಿಕರ ವಾರ್ಷಿಕ ಉತ್ಪಾದನೆಯಲ್ಲಿ ಕೂಡ ಕುಸಿತ ಕಾಣಿಸಿರುತ್ತದೆ.
ಪ್ರಾಣಿಗಳಿಗೆ ಕಾಡಿನಲ್ಲಿ ಊಟವಿಲ್ಲದ ಕಾರಣ ಊರಿಗೆ ನುಗ್ಗುತ್ತಿವೆ. ಅವುಗಳ ಊಟ ಕಾಡಿನಲ್ಲೇ ಸಿಗುವಂತೆ ಕಾಡು ಬೆಳೆಸಬೇಕಿದ್ದ ಅರಣ್ಯ ಇಲಾಖೆ ರೈತರ ಗೋಳು ಕಂಡೂ ಕಾಣದಂತೆ ಉಳಿದುಕೊಂಡಿದೆ. ಬಹುತೇಕ ಊರುಗಳಲ್ಲಿ ಯುವಕರೆಲ್ಲ ಪೇಟೆ ಸೇರಿ ಮುದುಕರಷ್ಟೇ ಮನೆಯಲ್ಲಿರುವ ಕಾರಣ,ಕೂಲಿ ಕಾರ್ಮಿಕರೂ ಹೊತ್ತಿಗೆ ಸರಿಯಾಗಿ ಸಿಗದೇ ಇರುವುದರಿಂದ, ರೈತರ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.
ಬೆಳೆ ನಾಶಕ್ಕೆ ಕಾರಣವಾಗುತ್ತಿರುವ ಪ್ರಾಣಿಗಳ ಮೇಲೆ ಕಾನೂನು ಸಮರ
ಇನ್ನು ಹೀಗೇ ಇದ್ದರೆ ಸಾಧ್ಯವಿಲ್ಲ. ಮಂಗ ಮತ್ತು ಹಂದಿಗಳ ಕಾಟಕ್ಕೆ ಕಾನೂನಾತ್ಮಕ ಹೋರಾಟಕ್ಕೆ ಸಜ್ಜಾಗಬೇಕೆಂಬುದು ಉಮಚ್ಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಂಡಿಯವರ ಅಂಬೋಣವಾಗಿದೆ. ಸಮಾನ ಮನಸ್ಕ ರೈತರ ಗುಂಪೊಂದು ಹೋರಾಟಕ್ಕೆ ಕೈ ಜೋಡಿಸುವ ಸಾಧ್ಯತೆಯೂ ಇದೆ. ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸುತ್ತಿರುವ, ಯಾರು ಏನೇ ಮಾಡಿದರೂ ತಾನಂತೂ ಈ ವಿಷಯದಲ್ಲಿ ಸಾಮಾಜಿಕ ಹಿತಾಸಕ್ತಿ ಅರ್ಜಿಯೊಂದನ್ನು ಕೋರ್ಟಿಗೆ ಸಲ್ಲಿಸುವುದಾಗಿ ವೆಂಕಟ್ರಮಣ ಹೆಗಡೆ ತೋಟದಕಲ್ಲಳ್ಳಿ ತಿಳಿಸಿರುತ್ತಾರೆ.

Prathidvani Yellapura