
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪ್ರತಿ ಚುನಾವಣೆಯಲ್ಲೂ ಒಂದಲ್ಲ ಒಂದು ವಿಚಾರದ ಅಲೆ ಸೃಷ್ಟಿಯಾಗಿರುತ್ತದೆ. ಅದೇ ರೀತಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದ್ದದ್ದು ಮಹಾ ಗೆಲುವಿಗೆ ಕಾರಣವಾಗಿದೆ. ಇಂತಹ ಅಲೆಯಲ್ಲೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮತದಾರ ಪ್ರಭು ಕೈಹಿಡಿದು ಗೆಲುವಿನ ದಡ ತಲುಪಿಸಿದ್ದಾರೆ. ಇದರ ಹಿಂದೆ ದೈವ ದುರ್ಲಭ ಕಾರ್ಯಕರ್ತರ ಶ್ರಮ, ಅಭಿವೃದ್ಧಿ ಕಾರ್ಯಗಳು, ಹೆಚ್ಚಾಗಿ ನನ್ನ ಮತ್ತು ಸಾರ್ವಜನಿಕರ ನಡುವಿನ ಒಡನಾಟ, ದೇವರ ಆಶೀರ್ವಾದ ಗೆಲುವಿನ ಹಾದಿ ಸುಗಮಗೊಳಿಸಿವೆ. ಆ ಎಲ್ಲಾ ಕಾರಣಗಳಿಗೂ ಧನ್ಯತಾ ಭಾವದ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಚುನಾವಣೆಯ ಗೆಲುವಿಗೆ ಕಾರಣೀಕರ್ತರಾದ ಮತದಾರರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತಾ ಹೇಳಿದರು.
ರಾಜ್ಯದಲ್ಲಿ ಬೆಜೆಪಿ ನೇತೃತ್ವದ ಯಡಿಯೂರಪ್ಪನವರ ಆಡಳಿತ ನಂತರದ ಬೊಮ್ಮಾಯಿ ಆಡಳಿತದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದು ಕೊರೊನಾದಂತಹ ಸಂಕಷ್ಟ ಕಾಲದಲ್ಲೂ ರಾಜ್ಯವನ್ನು ಸಮರ್ಥವಾಗಿ ನಿಭಾಯಿಸಲಾಗಿತ್ತು. ಆದರೂ ಚುನಾವಣೆಯ ಸಂದರ್ಭಕ್ಕೆ ಅಭಿವೃದ್ಧಿ ಕಾರ್ಯಗಳೆಲ್ಲಾ ಗೌಣವಾಗಿ ಕಾಂಗ್ರೆಸ್ ಪರ ಅಲೆ ಸೃಷ್ಟಿಯಾದ ಪರಿಣಾಮ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.
ರಾಜಕೀಯ ಜೀವನದಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ಸಾರ್ವಜನಿಕ ಬದುಕಿನಲ್ಲಿ ಹುಮ್ಮಸ್ಸಿನಿಂದ ಮುನ್ನಡೆಯಲು ಸಾಧ್ಯವಿದೆ. ಆಡಳಿತ ಪಕ್ಷವಾಗಿ ಮಾತ್ರ ಮುಂದುವರೆದರೆ ಸಾಲದು ಪ್ರಬಲವಾದ ವಿರೋಧ ಪಕ್ಷವಾಗಿಯೂ ರಾಜ್ಯದ ಒಳಿತಿಗೆ ಕಾರ್ಯ ನಿರ್ವಹಿಸಬೇಕಿದೆ ಎಂಬ ಜನಾಭಿಪ್ರಾಯಕ್ಕೆ ತಲೆ ಬಾಗಿದ್ದೇವೆ. ಮುಂದೆಯೂ ಕ್ಷೇತ್ರದ ಅಭಿವೃದ್ಧಿಗಾಗಿ ಎಲ್ಲ ರೀತಿಯ ಪ್ರಯತ್ನಗಳೊಂದಿಗೆ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ದೃಡವಾದ ನಂಬಿಕೆ ಮತ್ತು ಭರವಸೆ ಇದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶಾಮಿಲಿ ಪಾಟಣಕರ, ಬಿಜೆಪಿ ಪ್ರಮುಖರಾದ ಉಮೇಶ್ ಭಾಗ್ವತ್, ರಾಮು ನಾಯ್ಕ, ಶಿರೀಶ್ ಪ್ರಭು , ಮುರಳೀ ಹೆಗಡೆ ಉಪಸ್ಥಿತರಿದ್ದರು.
ಮಾಧ್ಯಮದವರು ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ಹೆಬ್ಬಾರ್ ಪಕ್ಷದ ಹೀನಾಯ ಫಲಿತಾಂಶಕ್ಕೆ ಕೆಲವು ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ ವ್ಯಕ್ತಿಗಳೇ ಕಾರಣ , ಅವರನ್ನು ಉಚ್ಚಾಟಿಸಬೇಕಿದೆ ಎಂಬ ಪತ್ರವು ಪಕ್ಷದ ಆಂತರಿಕ ವಿಚಾರದ್ದಾಗಿದ್ದು ಮಾಧ್ಯಮಗಳಿಗೆ ಸಿಕ್ಕ ಬಗೆ ಹೇಗೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಸೋಲು ಗೆಲುವಿನ ಅವಲೋಕನವನ್ನು ಪಕ್ಷದ ಚೌಕಟ್ಟಿನೊಳಗೆ ವರಿಷ್ಠರ ಮುಂದೆ ಮಂಡಿಸುವುದು ಪಕ್ಷದ ಸಿದ್ದಾಂತವಾಗಿದೆ. ಆದಾಗ್ಯೂ ಈ ಪತ್ರ ಮಾಧ್ಯಮದಲ್ಲಿ ಭಿತ್ತರವಾಗಿದ್ದು ಹೇಗೆಂಬುದು ತಿಳಿಯಬೇಕಿದೆ ಎಂದರು.
Prathidvani Yellapura