

ಭಾರತದ ಪುಣ್ಯ ಭೂಮಿಯಲ್ಲಿ ರಾಮಾಯಣ , ಮಹಾಭಾರತ , ಭಾಗವತದಂಥ ಮಹಾನ್ ಗ್ರಂಥಗಳ ಉದಯದಿಂದ ನಮ್ಮ ಸಾಹಿತ್ಯಕ್ಷೇತ್ರ ಅತ್ಯಂತ ಉನ್ನತಮಟ್ಟದಲ್ಲಿದ್ದು ಇದು ನಮ್ಮ ಸಾಹಿತ್ಯದ ಸಂಪನ್ಮೂಲಗಳೆನ್ನಬಹುದು.

ಅನಾದಿ ಕಾಲದಿಂದಲೂ ಸಾಹಿತ್ಯವು ನಮ್ಮ ಸಂಸ್ಕೃತಿ , ಕಲೆ , ಆಚಾರ ವಿಚಾರ , ಜೀವನ ಶೈಲಿಗಳನ್ನು ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಸಿಕೊಂಡು ಬರುವ ಕೊಂಡಿಯಾಗಿಯೂ , ಸಮಾಜದ ಓರೆ ಕೋರೆಗಳನ್ನು ತಿದ್ದಿ ಸ್ವಸ್ಥ ಸಮಾಜದ ನಿರ್ಮಾಣ ಕಾರ್ಯವೂ ಸಾಹಿತ್ಯದಿಂದ ನಿರಂತರವಾಗಿ ಸಾಗಿ ಬಂದಿದೆ . ರಾವಣ , ದುರ್ಯೋಧನನ, ಕರ್ಣ , ಶಕುನಿ , ಕಂಸನಂತವರ ಮಾದರಿಯನ್ನಿಟ್ಟು ಅಧರ್ಮ ಅನೀತಿಗಳನ್ನು ತಿದ್ದುವಲ್ಲಿ ಮಾರ್ಗದರ್ಶನವನ್ನು ಪಡೆದಿದ್ದೇವೆ . ಅಂಥಹ ದುಷ್ಟ ದುರಾಡಳಿತದಿಂದಾದ ಸಾಮಾಜಿಕ ದುಷ್ಪರಿಣಾಮವನ್ನು ತಿಳಿದಿದ್ದೇವೆ .

ಶಂಕರಾಚಾರ್ಯರ , ರಾಮಾನುಜರ ಶ್ಲೋಕಗಳು ಮನುಷ್ಯನನ್ನು ಇಹದ ಜಂಜಡವನ್ನು ತೊಡೆದು ಭಕ್ತಿ ಮಾರ್ಗದೆಡೆಗೆ ಕೊಂಡೊಂಯ್ದು ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಉತ್ತಮ ಮಾರ್ಗವಾಗಿದೆ . ಡಿವಿಜಿಯವರ ಮೌಲ್ಯ ಯುತ ಕಗ್ಗ ಆಧುನಿಕ ಭಗವದ್ಗೀತೆ ಎಂದೇ ಪ್ರಸಿದ್ಧಿಗೊಂಡು ಮಾನವ ಮಾನವನಾಗಿ ಬದುಕುವಂಥ ಪಾಠ , ಅತಿಆಸೆಯನ್ನು ತೊರೆದು ಇದ್ದುದರಲ್ಲೇ
ನೆಮ್ಮದಿಯಿಂದ ಬಾಳಿ ಬದುಕುವರೀತಿ , ಪ್ರಕೃತಿಯನ್ನು ನಾಶಪಡಿಸದೆ ಅದನ್ನು ಕಾಪಾಡಿಕೊಂಡು ಅದರೊಂದಿಗೇ ಹೊಂದಾಣಿಕೆಯೊಂದಿಗೆ ಬದುಕಬೇಕೆಂಬ ತತ್ವ , ಅತಿಯಾದ ಜಾಗತೀಕರಣದ ದುಷ್ಪರಿಣಾಮ ಇವುಗಳ ಬಗ್ಗೆ ಈ ಹಿಂದೆಯೇ ಸಮಾಜಕ್ಕೆ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ.

ಹೊತ್ತಿ ಉರಿಯುವ ಸಮಾಜದಲ್ಲಿಯ ದ್ವೇಷ ಮತ್ಸರದ ಕಿಚ್ಚನ್ನು ಸಾಹಿತ್ಯದ ತಂಪನ್ನೆರೆದು ನಂದಿಸಿದ ಅನೇಕರನ್ನು ನಾವು ಕಾಣಬಹುದು . ಮೇಲು ಕೀಳು, ಬಡವ ಬಲ್ಲಿದನೆಂಬ ಸಮಾಜದಲ್ಲಿನ ಅಸಮಾನತೆಯ ಕಿಡಿಯನ್ನು ತೊಡೆದು ಹಾಕುವಲ್ಲಿ ಬಂಡಾಯ ಸಾಹಿತ್ಯಗಳು ಪ್ರಮುಖ ಪಾತ್ರ ವಹಿಸಿವೆ . ಸರ್ವಜ್ಞ , ಬಸವಣ್ಣ , ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ , ಮುಂತಾದವರ ವಚನ ಸಾಹಿತ್ಯವು ಸಮಾಜದ ಅನೇಕ ಲೋಪದೋಷಗಳನ್ನು ತಿದ್ದಿ , ಅಸ್ಪ್ರಶ್ಯತೆ , ಮೂಢನಂಬಿಕೆಗಳನ್ನು ಹೋಗಲಾಡಿಸಿದ್ದಲ್ಲದೆ ಸಾಂಘಿಕ ಬದುಕಿನಲ್ಲಿರುವ ಮೌಲ್ಯ ವನ್ನು ತಿಳಿಸಿಕೊಟ್ಟಿದ್ದಾರೆ .ಅತಿ ಶೀಘ್ರದಲ್ಲಿ ಮಕ್ಕಳ ಮನವನ್ನು ಸೆಳೆದು ಸದ್ಭಾವನೆ , ಉತ್ತಮ ವಿಚಾರಗಳನ್ನು ಮೂಡಿಸುವಲ್ಲಿ ಪಂಚತಂತ್ರ ಕಥೆಗಳು , ನೀತಿ ಕಥೆಗಳು , ಸಮಾಜಕ್ಕೆ ಸಾಹಿತ್ಯದ ಉತ್ತಮ ಕೊಡುಗೆಯಾಗಿದೆ .

ಪ್ರಕೃತಿಯೇ ದೇವರೆಂದು ಭಾವಿಸಿ , ಪೂಜಿಸಿ ಪ್ರಕೃತಿಯೊಡನೆ ಅವಿನಾಭಾವ ಸಂಬಂಧವಿರುವ ತಮ್ಮ ಬದುಕನ್ನು ಜನಪದ ಸಾಹಿತ್ಯದಲ್ಲಿ ತುಂಬಾ ಚೆನ್ನಾಗಿ ಹೇಳಲಾಗಿದೆ ಮತ್ತು ಭಾವನಾತ್ಮಕ ಜೀವನಕ್ಕೆ ಉತ್ತಮ ಮಾರ್ಗದರ್ಶನವನ್ನು ಜನಪದ ಶೈಲಿಯ ಹಾಡುಗಳಲ್ಲಿ ನಾವು ಕಾಣಬಹುದು . ಒಂದು ಎರಡು ಬಾಳೆಲೆ ಹರಡುಗಳಂತ ಸಂಖ್ಯಾ ಹಾಡುಗಳು , ಅಕ್ಷರ ಮಾಲೆಯ ಹಾಡುಗಳನ್ನು ಬರೆದು ಸುಲಭವಾಗಿ ಮಕ್ಕಳು ಅದನ್ನು ಮನನ ಮಾಡಿಕೊಳ್ಳುವಂಥ ಪ್ರಯೋಗಗಳು ಸಾಹಿತ್ಯದಿಂದ ಸಾಧ್ಯವಾಗಿದೆ.

ನಾಟಕ , ನೃತ್ಯ, ಕವನ, ಯಕ್ಷಗಾನ , ತಾಳಮದ್ದಳೆ, ಭಾವಗೀತೆ , ಭಕ್ತಿಗೀತೆ, ಭಾಷಣ , ಚಿಂತನಗಳಂಥ ಅಭಿವ್ಯಕ್ತಿಯ ಮೂಲಕ ಸಾಹಿತ್ಯವು ಸರಳವಾಗಿ ಮತ್ತು ಮನೋರಂಜಕವಾಗಿ ಜನರ ಮನವನ್ನು ಮುಟ್ಟುವಂತಹ ಮಾರ್ಗಗಳಾಗಿವೆ .

ಕಬೀರ ದಾಸರು , ಸಂತ ಶಿಶುನಾಳ ಶರೀಫರು , ಪುರಂದರ ದಾಸರು , ಕನಕದಾಸರು , ವಿಜಯವಿಠ್ಠಲದಾಸರು ಊರು ಊರುಗಳಲ್ಲಿ ಸಂಚರಿಸಿ ತಮ್ಮ ದಾಸವಾಣಿಯ ಮೂಲಕ ಜನರಲ್ಲಿ ಭಕ್ತಿಯ ಬೀಜ ಮೊಳೆಯುವಂತೆ ಮಾಡಿದುದಲ್ಲದೆ ಜಾಗ್ರತಿಯನ್ನೂ ಮೂಡಿಸಿದ್ದಾರೆ . ಕೆ. ಎಸ್. ನಾರಾಯಣಾಚಾರ್ಯರ ರಾಮಾಯಣ ಮಹಾಭಾರತದ ಕಥೆಗಳು, ದೇವಡುರವರ ಮಹಾಭ್ರಾಹ್ಮಣ ಮಹಾಕ್ಷತ್ರಿಯ , ಕನಸು, ತರಾಸುರವರ ಚಿತ್ರದುರ್ಗ ಇತಿಹಾಸದ ಅನೇಕ ಕಾದಂಬರಿಗಳು ಮತ್ತು ದುರ್ಗಾಸ್ತಮಾನ , ಡಿವಿಜಿ ಅವರ ಕಗ್ಗ , ಸಾಯಿಸುತೆ , ಸುಧಾಮೂರ್ತಿ ಹೀಗೆ ಅನೇಕ ಬರಹಗಾರರ ಸಾಹಿತ್ಯ ಭಂಡಾರದಿಂದ ಕನ್ನಡದ ಕಂಪು , ಕನ್ನಡದ ಹಿರಿಮೆ ಎಲ್ಲೆಲ್ಲೂ ಪಸರಿಸಿದೆ .
ವಿಷಯಾಧಾರಿತ ಸಂವಾದ , ಚರ್ಚೆ, ರಸಪ್ರಶ್ನೆ , ಸಾಹಿತ್ಯಿಕ ಚಟುವಟಿಕೆಗಳು ದೂರದರ್ಶನದಲ್ಲಿ, ಮಾಧ್ಯಮಗಳಲ್ಲಿ ,ಬಾನುಲಿಯಲ್ಲಿ ಪ್ರಸಾರವಾಗುವುದರಿಂದ , ಸಾಹಿತ್ಯಾಧಾರಿತ ಅನೇಕ ಕಾರ್ಯಕ್ರಮಗಳು ಆಯಾ ಪ್ರದೇಶದಲ್ಲಿ ನಡೆಯುವುದರಿಂದ , ಐತಿಹಾಸಿಕ ಮತ್ತು ಪೌರಾಣಿಕ, ಧಾರ್ಮಿಕ ವಿಷಯವಿನಿಮಯದಿಂದ ಸಮಾಜದಲ್ಲಿ ಉತ್ತಮ ವಾತಾವರಣ ಸೃಷ್ಟಿ ಯಾಗುತ್ತದೆ . ಉತ್ತಮ ಸಂಸ್ಕಾರ ಮತ್ತು ಬೌದ್ಧಿಕ ಗುಣಮಟ್ಟದ ಸ್ವಾಸ್ಥ್ಯ ವನ್ನು ಕಾಣಬಹುದು .ಮಕ್ಕಳಲ್ಲಿ
ಸಮಾಜದ ಒಪ್ಪುತಪ್ಪುಗಳ ಬಗ್ಗೆ ಕಲ್ಪನೆ ನೀಡಿ , “ಹಗೆವವರ ಹೆಸರ ಮಕ್ಕಳಿಗೆ ಇಟ್ಟು ಇರುವವರಿಗಿಲ್ಲ ನೋವು “ಎಂಬ ನುಡಿಯಂತೆ ತಾನೂ ಬದುಕಿ ಇತರರಿಗೂ ಬದುಕುವ ಅವಕಾಶ ಕಲ್ಪಿಸುವ ಉದ್ದೇಶ ಸಾಹಿತ್ಯದ್ದಾಗಿದ್ದು , ಸ್ವಸ್ಥ ಸಮಾಜದ ನಿರ್ಮಾಣ ಕಾರ್ಯ ಎಂದಿನಿಂದಲೂ ನಡೆದುಕೊಂಡು ಬಂದಂತೆ ಇಂದಿಗೂ ನಡೆಯುತ್ತಲೇ ಇದೆ.






Prathidvani Yellapura