
ಪ್ರತಿಧ್ವನಿ ಯಲ್ಲಾಪುರ : 20/20 ವಿಶ್ವಕಪ್ ಜಯಗಳಿಸುವ ಮೂಲಕ ಕೋಟ್ಯಾಂತರ ಭಾರತೀಯರ ಕನಸನ್ನು ನನಸು ಮಾಡಿದ ಟೀಮ್ ಇಂಡಿಯಾ ಆಟಗಾರರಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕ್ರೀಡಾಪ್ರೇಮಿ ಶಿವರಾಮ ಹೆಬ್ಬಾರ್ ಟೀಂ ಇಂಡಿಯಾ ಆಟಗಾರರಿಗೆ ಅಭಿನಂದಿಸಿದ್ದಾರೆ.

ನಿಮ್ಮ ಪರಿಶ್ರಮ ಮತ್ತು ಸಮರ್ಪಣೆಯಿಂದ ಭಾರತಕ್ಕೆ ಈ ಮಹತ್ವದ ವಿಶ್ವಕಪ್ ಕಿರೀಟ ದೊರೆತಿದೆ. ದೇಶವೇ ನಿಮ್ಮ ಮೇಲೆ ಹೆಮ್ಮೆಪಡುತ್ತಿದೆ ಎಂದು ಮಾದ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರಂಭದಲ್ಲಿ ಬ್ಯಾಟರ್ಗಳ ವಿಸ್ಫೋಟಕ ಬ್ಯಾಟಿಂಗ್ ನಂತರ ಬೌಲರ್ಗಳ ಬೆಂಕಿ ಬೌಲಿಂಗ್ನಿಂದ ಫೈನಲ್ ಪಂದ್ಯದಲ್ಲಿ ಭಾರತ ಸತತ ಎರಡನೇ ಬಾರಿ ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಭಾರತ ಹೊಸ ಇತಿಹಾಸ ಬರೆದಿದೆ. ನ್ಯೂಜಿಲೆಂಡ್ ವಿರುದ್ಧ 96 ರನ್ಗಳಿಂದ ಗೆದ್ದ ಭಾರತ ಮೂರನೇ ಬಾರಿ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ.

ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಭಾರತ 5 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ 19 ಓವರ್ಗಳಲ್ಲಿ 159 ರನ್ಗಳಿಗೆ ಆಲೌಟ್ ಆಗುವ ಮೂಲಕ ಸೋಲನ್ನು ಒಪ್ಪಿಕೊಂಡಿತು. ಸತತವಾಗಿ ಎರಡು ಟಿ20 ಫೈನಲ್ ಪಂದ್ಯವನ್ನು ಯಾವುದೇ ತಂಡ ಜಯಗಳಿಸಿಲ್ಲ. ಆದರೆ ಭಾರತ 2024 ಮತ್ತು 2026 ರಲ್ಲಿ ಜಯಗಳಿಸುವ ಮೂಲಕ ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಟಿ20 ವಿಶ್ವಕಪ್ ಆತಿಥ್ಯ ವಹಿಸಿದ ತಂಡ ಇಲ್ಲಿಯವರೆಗೆ ಚಾಂಪಿಯನ್ ಪಟ್ಟ ಅಲಂಕರಿಸಿರಲಿಲ್ಲ. ಈ ಬಾರಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಟೂರ್ನಿಯನ್ನು ಆಯೋಜಿಸಿತ್ತು. ಇಲ್ಲಿಯವರೆಗೆ ಯಾವುದೇ ತಂಡ 3 ಟಿ20 ವಿಶ್ವಕಪ್ ಪಂದ್ಯ ಗೆದ್ದಿರಲಿಲ್ಲ. ಆದರೆ 2008, 2024 ಮತ್ತು 2026 ರಲ್ಲಿ ಜಯಿಸುವ ಮೂಲಕ ಭಾರತ ವಿಶ್ವದಾಖಲೆ ಬರೆದಿದೆ. ಇಂಗ್ಲೆಂಡ್ 2010, 2022 ರಲ್ಲಿ ಟ್ರೋಫಿ ಗೆದ್ದರೆ ವೆಸ್ಟ್ ಇಂಡೀಸ್ 2012 ಮತ್ತು 2016 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಸಂಜು ಸ್ಯಾಮ್ಸನ್ ಮತ್ತೆ ಹೀರೋ ಆದರು. ಬುಮ್ರಾ 4 ವಿಕೆಟ್ ಪಡೆದು ಸಾಧನೆ ಮಾಡಿದರು. ಇಡೀ ದೇಶ ಈಗ ಸಂಭ್ರಮದಲ್ಲಿದೆ.


Prathidvani Yellapura