Breaking News

ಇರಲಿ ನೀರಿನ ಬಗ್ಗೆ ಎಚ್ಚರ ತಪ್ಪಿದರೆ ಎದುರಾಗಲಿದೆ ನೀರಿಗೆ ಹಾಹಾಕಾರ.!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ – ರಣರಣ ಬಿಸಿಲಿಗೆ ಭೂಮಿ ಕಾದ ಕೆಂಡವಾಗುತ್ತಿದೆ. ದಿನದಿಂದ ದಿನಕ್ಕೆ ಬಿಸಿಲ ಧಗೆಗೆ ಕೆರೆ ಕಟ್ಟೆ ಗಳಲ್ಲಿ ನೀರು ಬತ್ತಿಹೋಗುತ್ತಿದೆ. ಎಚ್ಚರ..ಎಚ್ಚರ..ಬರಲಿದೆ ನೀರಿಗೆ ಹಾಹಾಕಾರ ನಿರ್ಲಕ್ಷ್ಯದಿಂದಲೆ ಯಲ್ಲಾಪುರಕ್ಕೆ ಸಂಚಕಾರ ಎನ್ನುತ್ತಿದ್ದಾರೆ ಊರ ಹಿರಿಯರು.


ಯಲ್ಲಾಪುರ ಪಟ್ಟಣ ಪಂಚಾಯತ ಕೇವಲ ಕೊಳವೆ ಬಾವಿಗಳನ್ನೆ ನಂಬಿಕೊಂಡು ಕಳೆದ ಕೆಲವು ವರ್ಷಗಳಿಂದ ಪಟ್ಟಣದ ಸಾರ್ವಜನಿಕರ ನೀರಿನ ದಾಹ ನೀಗಿಸುತ್ತಾ ಬರುತಿದೆ. ಶಕ್ತಿ ಮಾತೆ ಗ್ರಾಮದೇವಿ ಅನುಗ್ರಹವೊ ಪಕೃತಿ ನೀಡಿದ ವರವೊ ಇಲ್ಲಿಯವರೆಗು ನೀರಿನ ಬರ ಯಲ್ಲಾಪುರ ಪಟ್ಟಣಕ್ಕೆ ತಟ್ಟಿಲ್ಲ ಆದರೆ ಈ ಬಾರಿ ನೀರಿನ ಲಭ್ಯತೆಯ ಕುರಿತು ಸಿಬ್ಬಂದಿಗಳೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.


ಪಟ್ಟಣಕ್ಕೆ ನೀರಿನ ಅವಶ್ಯಕತೆಯನ್ನು ಕಳೆದ ಕೆಲವು ವರ್ಷಗಳ ಹಿಂದೆ ಬೇಡ್ತಿ ಕುಡಿಯುವ ನೀರಿನ ಯೋಜನೆ ಮೂಲಕ ಪಡೆಯಲಾಗುತ್ತಿತ್ತು ನಂತರ ಹಲವು ಸಮಸ್ಯೆಗಳಿಂದಾಗಿ ಯೋಜನೆ ಹಳ್ಳ ಹಿಡಿಯಿತು. ಇದೆಲ್ಲವನ್ನು ಬಲ್ಲ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಸತತ ಪ್ರಯತ್ನದ ಫಲವಾಗಿ ಬೊಮ್ಮನಹಳ್ಳಿ ಡ್ಯಾಂ ನಿಂದ ಯಲ್ಲಾಪುರ ಪಟ್ಟಣಕ್ಕೆ ನೀರು ತರುವ ಯೋಜನೆ ತಂದು ಅದರ ಕಾರ್ಯ ಪ್ರಗತಿಯ ಹಂತದಲ್ಲಿದೆ ಇದನ್ನು ಇನ್ನಷ್ಟು ತ್ವರಿತಗತಿಯಲ್ಲಿ ಅನುಷ್ಠಾನಗೊಳ್ಳುವಂತೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಅವಶ್ಯಕತೆ ಇದೆ. ಒಂದಾನುವೇಳೆ ಇದ್ದಕ್ಕಿದ್ದಂತೆ ಅಂತರ್ಜಲ ಮಟ್ಟ ಕುಸಿತವಾದರೆ ನಾಗರಿಕರ ಬದುಕು ಅಸ್ತವ್ಯಸ್ತವಾಗಿ ಊರನ್ನೆ ಬಿಡುವ ಪರಿಸ್ಥಿತಿ ಬಂದೊದಗಬಹುದಾಗಿದೆ.


ಬಲ್ಲ ಮೂಲಗಳ ಪ್ರಕಾರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಸುಮಾರು 9೦ಕ್ಕೂ ಅಧಿಕ ಕೊಳವೆ ಬಾವಿಗಳು ಪಟ್ಟಣದ ನೀರಿನ ಅವಶ್ಯಕತೆಯನ್ನು ಪೂರೈಸುತ್ತಿದ್ದು ಈಗಾಗಲೇ ಅಂತರ್ಜಲ ಕುಸಿತವಾಗಿರುವ ಸುಳಿವು ದೊರೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರೂ ಸಹ ನೀರು ಪೋಲಾಗದಂತೆ ಮತ್ತು ಅನವಶ್ಯಕವಾಗಿ ವ್ಯರ್ಥ ಮಾಡದಂತೆ ಜಾಗ್ರತೆ ವಹಿಸಬೇಕಿದೆ.

ಸಾಂದರ್ಭಿಕ ಚಿತ್ರ


ತಾಲೂಕಿನಾದ್ಯಂತ ಬೋರ್‌ವೆಲ್ ಕೊರೆಯುವ ಲಾರಿಗಳು ಮನ ಬಂದಂತೆ ಸುತ್ತುತ್ತಿದ್ದು ಕೆಲವೆಡೆ ತಾಲೂಕು ಪಂಚಾಯತ, ಗ್ರಾಮ ಪಂಚಾಯತ ಅಥವಾ ಪಟ್ಟಣ ಪಂಚಾಯತ ಅನುಮತಿ ಪಡೆಯದೇ ಎಲ್ಲೆಂದರಲ್ಲಿ ಬೋರ್ ಕೊರೆಯುತ್ತಿರುವುದು ಆತಂಕ ಸೃಷ್ಟಿ ಮಾಡಿದೆ. ಈ ಕುರಿತು ಈಗಾಗಲೇ ತಾಲೂಕಾಡಳಿತ ಸಾರ್ವಜನಿಕ ಮಾಹಿತಿ ನೀಡಿದ್ದು ಅನುಮತಿ ಇಲ್ಲದೆ ಕೊಳವೆ ಬಾವಿ ಕೊರೆಯುವಂತಿಲ್ಲ ಎಂಬುದು ಗಂಭೀರವಾಗಿ ಪರಿಗಣಿಸಿದಂತೆ ಕಂಡು ಬರುತ್ತಿಲ್ಲ. ಇನ್ನಾದರೂ ಇಲಾಖೆಗಳು ಎಚ್ಛೆತ್ತುಕೊಂಡು ಭೂಮಿ ಕೊರೆಯುವವರ ವಿರುದ್ಧ ನಿಗಾವಹಿಸಿ ಕ್ರಮ ಜರುಗಿಸಬೇಕಿದೆ. ಹಾಗೂ ಅನುಮತಿ ಪಡೆಯದೇ ಬೋರ್ ಕೊರೆಸಿದರೆ ಅಂತಹ ಕೊಳವೆಬಾವಿಗಳನ್ನು ಸರ್ಕಾರ ಯಾವ ಮುಲಾಜಿಲ್ಲದೇ ತನ್ನ ವಶಕ್ಕೆ ಪಡೆಯಬೇಕಿದೆ ಕಾರಣ ಇದು ನಿರ್ಲಕ್ಷಿಸುವ ವಿಚಾರವಲ್ಲ ಬದಲಾಗಿ ಯಲ್ಲಾಪುರ ತಾಲೂಕಿನಾದ್ಯಂತ ಬದುಕಿತ್ತಿರುವ ಸಾರ್ವಜನಿಕರ ಜೀವನದ ಪ್ರಶ್ನೆಯಾಗಿದೆ ಎಂಬುದು ಪ್ರಾಜ್ಞರ ಆತಂಕವಾಗಿದೆ.


ತಾಲೂಕಿನಲ್ಲಿ ಕಿರವತ್ತಿ ಮತ್ತು ಮದನೂರು ಗ್ರಾ.ಪಂ ವ್ಯಾಪ್ತಿಯಲ್ಲಿ 10 ಕ್ಕೂ ಹೆಚ್ಚು ಕಡೆ ಟ್ಯಾಂಕರ್ ಮೂಲಕ ಮನೆ ಮನೆಗಳಿಗೆ ನೀರು ಕೊಡಲಾಗುತ್ತಿದೆ. ಅದೂ ಸಹ ಸಾಲುತ್ತಿಲ್ಲ. ಪಟ್ಟಣದಲ್ಲಿ ಇನ್ನೂ ಅಂತಹ ಸ್ಥಿತಿ ಬಂದಿಲ್ಲವಾದರೂ ಕೆರೆಗಳಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದೆ.

ಈ ಬಾರಿ ನೀರಿನ ಅಭಾವ ಕಾಡುವ ಎಲ್ಲ ಲಕ್ಷಣಗಳೂ ಗಮನದಲ್ಲಿದ್ದು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀರಿನ ಅಭಾವ ಕಾಡದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ವಿಷಯ ಮತ್ತಷ್ಟು ಗಂಭೀರವಾಗುತ್ತಿರುವುದರಿಂದ ಮತ್ತೊಂದು ಸುತ್ತಿನ ಸಭೆ ನಡೆಸಿ ನೀರಿನ ಬರ ಎದುರಿಸಲು ಕೈಗೊಳ್ಳಬೇಕಾದ ಜಾಗೃತಿ, ಪೂರೈಸಬೇಕಾದ ವ್ಯವಸ್ಥೆ , ಸ್ಥಳೀಯ ಆಡಳಿತ ವ್ಯವಸ್ಥೆ ತೊಡಗಿಕೊಳ್ಳುವುದು ಹಾಗೂ ಇನ್ನಿತರ ವಿಚಾರಗಳ ಕುರಿತು ಚರ್ಚಿಸಲಾಗುವುದು. ಅನುಮತಿ ಇಲ್ಲದೇ ಕೊಳವೆಬಾವಿ ಕೊರೆಯುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡಬಹುದಾಗಿದೆ. – ಗುರುರಾಜ್, ತಾಲೂಕು ದಂಡಾಧಿಕಾರಿ

ವಿಶೇಷವಾಗಿ ಯಲ್ಲಾಪುರ ಸೀಮೆಯ ವ್ಯಾಪ್ತಿಯಲ್ಲಿ ಶಕ್ತಿ ಮಾತೆಯರಾದ ಯಲ್ಲಾಪುರ ಗ್ರಾಮದೇವಿಯರ ಅನುಗ್ರಹದಿಂದ ನೀರಿನ ಬರವೆಂಬ ಭಾರಿ ಸಮಸ್ಯೆ ಬಂದಿಲ್ಲ. ಸಕಲ ಮನುಕುಲವನು ಕಾಯುವ ತಾಯಿ ತನ್ನ ಮಕ್ಕಳಿಗೆ ನೀರಿನ ಕ್ಷಾಮ ಬರದಂತೆ ಕಾಯ್ದು ಕೊಂಡಿದ್ದಾಳೆ. ಹಾಗೆಂದು ಆಕೆಯ ಮಕ್ಕಳಾದ ನಮ್ಮದು ಕೆಲವು ಕರ್ತವ್ಯ ಇದೆ ಅಲ್ಲವೆ.  ದಯವಿಟ್ಟು ಸಂಕಷ್ಟದ ಸಮಯ ಎದುರಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ. ನೀರನ್ನು ಮಿತವಾಗಿ ಬಳಸಬೇಕಿದೆ. ಮನೆಗೊಂದೊಂದು ಕೊಳವೆ ಬಾವಿ ತೋಡಿಸುವುದಕ್ಕೆ ಕಡಿವಾಣ ಹಾಕಬೇಕಿದೆ. ಮಕ್ಕಳಿಗೆ ನೀರಿನ ಪ್ರಾಮುಖ್ಯತೆಯ ಅರಿವು ಮೂಡಿಸಬೇಕಿದೆ. ನೀರಿನ ಸರಬರಾಜಿನ ಪೈಪ್ ಒಡೆದು ಪೋಲಾಗುತ್ತಿದ್ದರೆ ತಕ್ಷಣ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕಿದೆ. ಇನ್ನೂ ಹಲವು ಬಗೆಯಲ್ಲಿ ನೀರಿನ ಕ್ಷಾಮ ತಲೆದೂರದಂತೆ ಕಾಯುವುದು ನಾಗರಿಕರಾದ ನಮ್ಮ ಜವಬ್ದಾರಿಯು ಹೆಚ್ಚಿದೆ ಅದನ್ನು ಪಾಲಿಸೋಣ. ಪ್ರತಿಧ್ವನಿ ಕಳಕಳಿ

ಯಲ್ಲಾಪುರದಲ್ಲಿ ಬಂಜೆತನ ಸಮಾಲೋಚನಾ ಶಿಭಿರ ಹುಬ್ಬಳ್ಳಿಯ ಬಂಜೆತನ ತಜ್ಞರು ಡಾ.ವಿನುತಾ ಕುಲಕರ್ಣಿ ಅವರೊಂದಿಗೆ. ಮಾಹಿತಿಗಾಗಿ ಈ ವಿಡಿಯೋ ವೀಕ್ಷಿಸಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *