

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಪುರ ; ರಾಷ್ಟಪತಿ, ರಾಜ್ಯ ಪಾಲ ದಂತಹ ಹುದ್ದೆಗಳನ್ನು ನಿರಾಕರಿಸಿ, ತಮ್ಮನ್ನು ರಾಷ್ಟಕ್ಕಾಗಿ ಸಮರ್ಪಿಸಿಕೊಂಡ ಸರಳ ಜೀವಿ ಜಗನ್ನಾಥರಾವ್ ಜೋಶಿ. ಅವರ ವ್ಯಕ್ತಿತ್ವ ಅಟಲ್ ಬಿಹರಿ ವಾಜಪೇಯಿ ಅವರ ವ್ಯಕ್ತಿತ್ವಕ್ಕೆ ಸರಿಸಮಾನವಾಗಿತ್ತು. ಅಂತವರ ಆದರ್ಶಗಳು ನಮಗೆ ಮಾರ್ಗದರ್ಶಕವಾಗಿವೆ ಎಂದು ಚಿಂತಕ , ಶಿಕ್ಷಣ ತಜ್ಞ, ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ನಿಕಟಪೂರ್ವ ಅಧ್ಯಕ್ಷ ರೋಹಿತ ಚಕ್ರತೀರ್ಥ ಹೇಳಿದರು.

ಅವರು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಸಭಾಭವನದಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ರಾಷ್ಟ್ರನಮನ ಹಾಗೂ ಮಕ್ಕಳ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ತಿಮ್ಮಣ್ಣ ಭಟ್ಟ ವಿರಚಿತ ‘ ಕರ್ನಾಟಕ ಕೇಸರಿ ಜಗನ್ನಾಥ ರಾವ್ ಜೊಶಿ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಉದ್ಯೋಗ ತೊರೆದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ಗೋವಾ ವಿಮೋಚನೆಯ ನೇತ್ರತ್ವ ವಹಿಸಿ ಜೈಲುಪಾಲಾದ ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜಕೀಯ ವಿಭಾಗ ಜನಸಂಘ ಸ್ಥಾಪನೆಯಾದಾಗ ಅಟಲ ಬಿಹಾರಿ ವಾಜಪೇಯಿ ಅವರ ಜೊತೆಗೆ ಜನಸಂಘವನ್ನು ಸಂಘಟಿಸುವ eವಾಬ್ದಾರಿ ಹೊತ್ತಿದ್ದರು. ಕರ್ನಾಟಕದವರಾಗಿದ್ದರೂ, ಇವರ ಭಾಷಣ ಕೇಳಲು ಲಕ್ಷಾಂತರ ಜನರು ಸೇರುತ್ತಿದ್ದರು. ಮಧ್ಯಪ್ರದೇಶದ ಭೋಪಾಲನಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು. ಇಂತವರು ಇತಿಹಾಸದಲ್ಲಿ ಅಳಿಸಲಾಗದ ಪುಟವಾಗಿ ನಿಂತಿದ್ದಾರೆ ಎಂದರು.

ಕೃತಿಕಾರ ತಿಮ್ಮಣ್ಣ ಭಟ್ಟ ಮಾತನಾಡಿ, ‘ ಬಿಜೆಪಿ ಕಾರ್ಯಕರ್ತರಿಗೇ ಜಗನ್ನಾಥ ರಾವ್ ಅವರ ಬಗ್ಗೆ ಗೊತ್ತಿಲ್ಲದ ಸಂದರ್ಭದಲ್ಲಿ ಅವರ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿದ್ದೇನೆ. ಇದು ಇವರ ಜೀವನ ಚರಿತ್ರೆಯಲ್ಲ. ಅವರ ಬದುಕಿನ ಸ್ವಾರಕಸ್ಯಕರವಾದ ಘಟನೆಗಳನ್ನು ವಿವರಿಸುವ ಪ್ರಯತ್ನಮಾಡಿದ್ದೇನೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ವನರಾಗ ಶರ್ಮಾ ಮಾತನಾಡಿ ‘ ರಾಷ್ಟ್ರೀಯ ಚಿಂತನೆಗಳನ್ನು ಹೋರಾಟ ಮಾಡಿ ನಮ್ಮಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಸಂಕ್ರಮಣ ಕಾಲದಲ್ಲಿ ನಾವಿದ್ದೇವೆ. ಮನೆ ಮನೆ ಒಡೆಯುವ ಕೆಲಸದಲ್ಲಿ ನಾವಿದ್ದು, ರಾಜಕೀಯ ಇಚ್ಚಾಶಕ್ತಿಗಳು ಜನರಲ್ಲಿ ರಾಷ್ಟ್ರೀಯ ಚಿಂತನೆಗಳನ್ನು ಬಿತ್ತದೇ ಹೋದರೆ ಇಡೀ ದೇಶದಲ್ಲಿ ಜನಾಂಗೀಯ ಕಲಹವಾದರೂ ಆಶ್ಚರ್ಯವಿಲ್ಲ’ ಎಂದು ನುಡಿದರು.



ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಕವನ ವಾಚನ ಮಾಡಿದರು.


ವ್ಯವಸ್ಥಾಪಕ ಅಜಯ ಭಾರತೀಯ ಪ್ರಾಸ್ತಾವಿಕ ಮಾತನ್ನಾಡಿದರು, ವಿದ್ಯಾ ಭಟ್ಟ, ಶ್ರೀವತ್ಸ ಭಟ್ಟ ನಿರೂಪಿಸಿದರು. ಜಿ.ಎಸ್. ಗಾಂವ್ಕರ್ ವಂದಿಸಿದರು.
Prathidvani Yellapura