
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಕಳೆದ ರವಿವಾರ ಅಂಕೋಲಾದಲ್ಲಿ ನಡೆದ ಸಚಿವ ಎಚ್.ಕೆಪಾಟೀಲ ನೇತೃತ್ವದ ಲೋಕಸಭಾ ಚುನಾವಣಾ ಪೂರ್ವಭಾವಿ ಕಾಂಗ್ರೆಸ್ ಸಭೆಯಲ್ಲಿ ಉ.ಕ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ , ಹಾಲಿ ಉ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿನಾಥ ಗಾಂವ್ಕರ್ ಕುರಿತು ಆಡಿದ ಮಾತುಗಳನ್ನು ಬೇರೆ ಅರ್ಥ ಬರುವಂತೆ ಪತ್ರಿಕೆಗಳಲ್ಲಿ ಸುದ್ದಿಯಾಗಿ ಬಂದಿರುವುದು ವಿಪರ್ಯಾಸವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಪ್ರಶಾಂತ ಸಬಾಹಿತ ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸರಸ್ವತಿ ಗುನಗಾ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಉ.ಕ ಜಿಲ್ಲಾ ನೂತನ ಕಾಂಗ್ರೆಸ್ ಅಧ್ಯಕ್ಷರಾಗಿ ಸಾಯಿನಾಥ ಗಾಂವ್ಕರ್ ಆಯ್ಕೆಯಾದ ನಂತರ ಜಿಲ್ಲೆಯಾದ್ಯಂತ ಪಕ್ಷ ಸಂಘಟನೆಯಾಗುತ್ತಿಲ್ಲ ಎಂಬ ಅರ್ಥ ಬರುವಂತೆ ಮತ್ತು ಭೀಮಣ್ಣ ನಾಯ್ಕ ಸಾಯಿನಾಥ ಗಾಂವ್ಕರ್ ವಿರುದ್ಧ ಮಾತನಾಡಿದ್ದಾರೆ ಎಂಬಂತೆ ಸುದ್ದಿಯಾಗಿದೆ. ಆದರೆ ಅವರಾಡಿದ ಮಾತಿನ ಪ್ರಕಾರ ಪಕ್ಷ ಸಂಘಟನೆ ಕೇವಲ ಜಿಲ್ಲಾಧ್ಯಕ್ಷರ ಹೊಣೆಗಾರಿಕೆ ಮಾತ್ರವಲ್ಲ, ಪ್ರತಿ ತಾಲೂಕಿನ ಬ್ಲಾಕ್ ಅಧ್ಯಕ್ಷರಾದಿಯಾಗಿ ವಿವಿಧ ಘಟಕಗಳ ಪ್ರಮುಖರು , ಬೂತ್ಮಟ್ಟದ ಕಾರ್ಯಕರ್ತರಿಂದ ಹಿಡಿದು ಸಂಘಟಿತರಾಗಿ ಶ್ರಮಿಸಿದಲ್ಲಿ ಮಾತ್ರ ಪಕ್ಷ ಸದೃಡವಾಗಲಿದೆ. ನನಗೂ 13 ವರ್ಷಗಳ ಕಾಲ ಜಿಲ್ಲಾಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ ಅನುಭವದ ಆಧಾರದಲ್ಲಿ ಹೇಳುತ್ತಿದ್ದೇನೆ ಎಂದು ಭೀಮಣ್ಣ ನಾಯ್ಕ ತಮ್ಮ ಭಾಷಣದಲ್ಲಿ ಹೇಳಿದ್ದಾರೆಯೇ ಹೊರತು ಅದಕ್ಕೆ ಬೇರೆ ಅರ್ಥ ಇಲ್ಲ.
ಬರಲಿರುವ ಲೋಕಸಭಾ ಚುನಾವಣೆಗೂ ಬೂತ್ಮಟ್ಟದಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಾ ಪಕ್ಷ ಸಂಘಟಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಖಚಿತವಾಗಿದೆ. ಜಿಲ್ಲೆಯ ಕಾರ್ಯಕರ್ತರು , ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದೆಂದು ಅವರು ವಿವರಿಸಿದರು.
Prathidvani Yellapura