
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ತಾಲೂಕಿನ ಅರಬೈಲು ಅರಣ್ಯಪ್ರದೇಶ ವ್ಯಾಪ್ತಿಯಲ್ಲಿ 2.5 ಲಕ್ಷ ಮೌಲ್ಯದ ನಾಲ್ಕು ಸಾಗುವಾನಿ ಹಾಗೂ ಒಂದು ಸೀಸಂ ಜಾತಿಯ ಮರಗಳನ್ನು ಕತ್ತರಿಸಿ ತುಂಡುಗಳನ್ನಾಗಿ ತಯಾರಿಸಿ ಅಕ್ರಮವಾಗಿ ಸಾಗಿಸಲು ಸಜ್ಜಾದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಇಡಗುಂದಿ ವಲಯ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಮಹಾಬಲೇಶ್ವರ ಬೀರಪ್ಪ ಹರಿಕಂತ್ರ, ಸಂದೀಪ ಸದಾನಂದ ನಾಯ್ಕ, ಸುರೇಶ ತುಳಸು ಗೌಡ ಎಂಬುವರೇ ಬಂಧಿತ ಆರೋಪಿಗಳಾಗಿದ್ದು 2.161 ಕ್ಯೂಬಿಕ್ ಮೀಟರಿನಷ್ಟು ಮರದ ತುಂಡುಗಳನ್ನು ಕದ್ದು ಸಾಗಿಸಲು ಸಿದ್ಧತೆ ನಡೆಸಿದ್ದರು. ವಿಷಯ ತಿಳಿದ ಅರಣ್ಯಾಧಿಕಾರಿಗಳು ಧಾಳಿ ನಡೆಸಿ ಮಾಲು ಸಹಿತ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇವರಲ್ಲಿ ಮಹಾಬಲೇಶ್ವರ ಬೀರಪ್ಪ ಹರಿಕಂತ್ರ ಹಿಲ್ಲೂರು ಎಂಬಾತ ನಟೋರಿಯಸ್ ಕಾಡುಗಳ್ಳನಾಗಿದ್ದು ಅರಣ್ಯ ಇಲಾಖೆಯ ಬೇರೆ ಬೇರೆ ವಿಭಾಗಗಳಲ್ಲಿ ಹಲವು ಎಫ್.ಐ.ಆರ್ ಗಳು ಈತನ ಮೇಲೆ ದಾಖಲಾಗಿವೆ. ಅಕ್ರಮವಾಗಿ ಅರಣ್ಯದೊಳಗೆ ನುಸುಳಿ, ಮರಗಳನ್ನು ಕಡಿದು ತುಂಡುಗಳಾಗಿ ತಯಾರಿಸಿ ಸಾಗಿಸುತ್ತಿದ್ದ. ಅಲ್ಲದೇ ವಿವಿಧ ರೀತಿಯ ಅರಣ್ಯ ಅಕ್ರಮಗಳನ್ನು ನಡೆಸಿ ತಲೆ ಮರೆಸಿಕೊಂಡು ಇಲಾಖೆಗೆ ಸಿಗದೇ ತಲೆನೋವಾಗಿದ್ದ.
ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಬಾನು ಹಾಗೂ ಮಂಚೀಕೇರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂಗಮೇಶ ಪ್ರಭಾಕರ ಮಾರ್ಗದರ್ಶನದಲ್ಲಿ ಇಡಗುಂದಿ ವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ ನಾಯಕ್, ಸೋಮೇಶ್ವರ ನಾಯಕ್, ಉಪ ವಲಯ ಅರಣ್ಯಾಧಿಕಾರಿಗಳಾದ ಸಂತೋಷ ಕುಮಾರ, ಚಂದ್ರಹಾಸ ಪಟಗಾರ , ಗಸ್ತು ಅರಣ್ಯ ಪಾಲಕರಾದ ಕಾಶೀನಾಥ ಯಕಂಚಿ ಹಾಗೂ ರಾಮನಗುಳಿ , ಹೊಸಕಂಬಿ, ಅಂಕೋಲಾ ವಲಯದ ವಲಯ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.




Prathidvani Yellapura