





ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಮ ಪಂಚಾಯತ ವ್ಯಾಪ್ತಿಯ ಲಿಂಗದಬೈಲ್ ನಲ್ಲಿ ಬುಡಕಟ್ಟು ಸಿದ್ದಿ ಸಮುದಾಯದ ಪ್ರವಾಸೋದ್ಯಮ ಹೋಂ ಸ್ಟೇ ವಿದ್ಯುಕ್ತವಾಗಿ ಲೋಕಾರ್ಪಣೆಗೊಂಡಿತು.


ಬುಡಕಟ್ಟು ಸಮುದಾಯದ ಆರ್ಥಿಕ ಪ್ರಗತಿಗೆ ಸ್ವಸಹಾಯ ಸಂಘದ ಅಡಿಯಲ್ಲಿ ಸಿದ್ದಿ ಬುಡಕಟ್ಟು ಮಹಿಳೆಯರಿಂದ ಸಂಘಟಿತವಾದ ಗುಂಪಿಗೆ ಸೀತಾರಾಮ ಸಂಜೀವಿನಿ ಸಂಘದ ಅಡಿಯಲ್ಲಿ ಡಮಾಮಿ ಸಿದ್ದಿ ಪ್ರವಾಸೋದ್ಯಮ ಹೋಂ ಸ್ಟೇ ಚಾಲನೆ ಪಡೆಯಿತು.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಉದ್ಘಾಟಿಸಿದರು.

ಸಮಾಜದಲ್ಲಿ ಅತ್ಯಂತ ಹಿಂದುಳಿದ ಮತ್ತು ಆರ್ಥಿಕವಾಗಿ ದುರ್ಬಲರಾದ ಬುಡಕಟ್ಟು ಸಿದ್ದಿ ಸಮುದಾಯದ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರವಾಸೋದ್ಯಮದ ಭಾಗವಾದ ಹೋಂ ಸ್ಟೇ ಅನುಕೂಲವಾಗಿದೆ. ನೈಸರ್ಗಿಕ ಮತ್ತು ಸಾಂಪ್ರದಾಯಿಕ ಆಚಾರದ ಸೇವೆಯಿಂದ ಬರುವ ಪ್ರವಾಸಿಗರಿಗೆ ಮೆಚ್ಚುಗೆಯಾಗುವಂತೆ ವ್ಯವಸ್ಥೆ ಕಲ್ಪಿಸಿ ಹೆಸರುಗಳಿಸಬೇಕಿದೆ. ಇಂತಹ ಯೋಜನೆ ಅನುಷ್ಟಾನಕ್ಕೆ ತರುವಲ್ಲಿ ಶ್ರಮಿಸಿದ ಪ್ರತಿಯೊಬ್ಬರಿಗು ಅಭಿನಂದಿಸುತ್ತೇನೆ ಎಂದು ಶಾಸಕ ಹೆಬ್ಬಾರ್ ಹೇಳಿದರು.

ಕಳೆದ ಬಾರಿ ಇದೇ ಹೋಂ ಸ್ಟೇ ಉದ್ಘಾಟನೆ ದಿನಾಂಕ ನಿಗದಿಯಾಗಿ ಕಾರ್ಯಕ್ರಮ ಆಯೋಜನೆಯಾದರು ಕೆಲವು ಕಾರಣಗಳಿಂದ ಉದ್ಘಾಟನೆಯಾಗದೆ ಹಾಗೆ ಮುಂದೂಡಲಾಗಿತ್ತು. ಇದೀಗ ಯಾವುದೆ ಅಡಚಣೆಗಳಾಗದೆ ಹೋಂ ಸ್ಟೇ ಪ್ರವಾಸಿಗರ ಆತಿಥ್ಯಕ್ಕೆ ಲೋಕಾರ್ಪಣೆ ಕಂಡಿತು.

ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಜಿಲ್ಲಾ ಪಂಚಾಯತ ಯೋಜನಾಧಿಕಾರಿ ಮಂಜುನಾಥ ನಾವಿ, ಸೀತಾರಾಮ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪ್ರೇಮಾ ಜೋಶಿ, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಎನ್.ಆರ್.ಹೆಗಡೆ, ನಿಸರ್ಗಸ್ಪರ್ಶ ಪ್ರವಾಸೋದ್ಯಮ ಸಂಘದ ಪ್ರತಿನಿಧಿಗಳಾದ ಲಲಿತ ಎಮ್ ಸಿದ್ದಿ, ವೀಣಾ ಎನ್ ಸಿದ್ದಿ ವಿವಿಧ ಇಲಾಖೆಯ ಅಧಿಕಾರಿಗಳು ಎನ್.ಆರ್.ಎಲ್.ಎಮ್ ವಿಭಾಗದ ಪ್ರಮುಖರು ಇಡಗುಂದಿ ಗಾಮಪಂಚಾಯತದ ಅಧಿಕಾರಿಗಳು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.


Prathidvani Yellapura