

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಬದುಕಿನುದ್ದಕ್ಕೂ ತಾನು, ತನ್ನದು ಎಂಬ ಸ್ವಾರ್ಥದಲ್ಲಿರುವ ಮನುಜನು ಭೂಮಿಯ ಮೇಲಿನ ಭಾಂಧವ್ಯ ಮುಗಿದ ನಂತರ ಸೇರಬೇಕಾದ ಕೊನೆಯ ಸ್ಥಳ ಸ್ಮಶಾನ. ಕೆಲವರು ಚಿತೆಯೇರಿದರೆ ಮತ್ತೆ ಕೆಲವರು ಭೂಮಿಯೊಳಗೆ ಮಣ್ಣಾಗುತ್ತಾರೆ. ಈ ಕ್ರಿಯೆಗಳಿಗಾಗಿಯೇ ಇರುವ ಚಿತಾಗಾರವಾಗಲೀ, ಸ್ಮಶಾಣವಾಗಲೀ ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವುದು ದುರ್ದೈವದ ಸಂಗತಿಯಾಗಿದೆ.

ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ಹಿಂದೂಗಳ ಚಿತಾಗಾರ ಅವ್ಯವಸ್ಥೆಯ ಆಗರವಾಗಿದ್ದು ಪ್ರತಿಯೊಬ್ಬರಿಗೂ ಬೇಕಾಗಿರುವ ಸ್ಥಳವಾಗಿದೆ. ಆದರೂ ಅದೇಕೋ ನಿರ್ಲಕ್ಷಕ್ಕೊಳಗಾಗಿದೆ. ಕಳೆದೊಂದು ವರ್ಷದ ಹಿಂದೆ ಸಮಾನ ಮನಸ್ಕ ಸ್ನೇಹಿತರ ಗುಂಪು ಚಿತಾಗಾರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ದೊಡ್ಡ ಮಟ್ಟದಲ್ಲಿ ಆವರಣವನ್ನು ಸ್ವಚ್ಛಗೊಳಿಸಿದ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರೂ ಸಹ ಸ್ವಚ್ಛತಾಕಾರ್ಯದಲ್ಲಿ ಪಾಲ್ಗೊಂಡಿದ್ದರು. ಮುಂದೆ ಇಲ್ಲಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಹಂತಹಂತವಾಗಿ ಪೂರೈಸುವುದಾಗಿಯೂ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಚಿತಾಗಾರದ ಸುತ್ತ ಕಾಂಪೌಡ್ ನಿರ್ಮಾಣವಾಗಿದೆ. ಆದರೆ ಬೇರಾವ ವ್ಯವಸ್ಥೆಗಳೂ ಇಲ್ಲವಾಗಿದೆ.

ಇದೀಗ ಪಟ್ಟಣ ಪಂಚಾಯತ ಸದಸ್ಯ ಸತೀಶ್ ಶಿವಾನಂದ ನೇತೃತ್ವದಲ್ಲಿ ಪಟ್ಟಣ ಪಂಚಾಯತ ಅನುದಾನದಲ್ಲಿ ೩ಲಕ್ಷದ ಕಾಮಗಾರಿ ನಡೆಯುತ್ತಿದ್ದು ಚಿತಾಗಾರದೊಳಗೆ ನೀರು, ಕುಳಿತುಕೊಳ್ಳುವ ವ್ಯವಸ್ಥೆ, ಸ್ವಚ್ಛತೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ಬದುಕಿದ್ದಾಗ ದೇವಾಲಯಗಳಿಗೆ ನೀಡುವಷ್ಟೇ ಮಹತ್ವವನ್ನು ಸತ್ತಾಗ ಚಿತಾಗಾರ, ಸ್ಮಶಾಣಕ್ಕೂ ನೀಡಬೇಕಿದೆ. ಕಾರಣ ಧಾರ್ಮಿಕವಾಗಿ ವಿಧಿ ವಿಧಾನಗಳು, ಜರುಗುವ ಸ್ಥಳವಾಗುವುದರಿಂದ ಕನಿಷ್ಠ ಮೂಲಭೂತ ಸೌಕರ್ಯಗಳು , ಅಚ್ಚುಕಟ್ಟಾದ ವ್ಯವಸ್ಥೆಯಲ್ಲಿ ಇರಬೇಕಿದೆ.

ಇದೇ ಚಿತಾಗಾರದ ಸ್ವಲ್ಪವೇ ದೂರದಲ್ಲಿ ಮುಸ್ಲಿಂ ಸಮುದಾಯದ ಸ್ಮಶಾಣವಿದ್ದು ಅತ್ಯಂತ ಸ್ವಚ್ಛತೆ, ಅಚ್ಚುಕಟ್ಟಾದ ವ್ಯವಸ್ಥೆ , ಸ್ಮಶಾಣದ ಭದ್ರತೆಗೆ ದ್ವಾರಬಾಗಿಲು, ಒಳಗಿನ ವಿಧಿ ವಿಧಾನಗಳಿಗೆ ಕಟ್ಟಡ, ನೀರಿನ ಸೌಲಭ್ಯ, ಸುತ್ತಲೂ ಕಾಂಪೌಂಡ್ ಗೋಡೆ ನಿರ್ಮಿಸಿಕೊಂಡು ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಳ್ಳುತಿರುವುದನ್ನು ಕಂಡರೆ ಹಿಂದೂಗಳ ಚಿತಾಗಾರವೇಕೆ ಇಷ್ಟೊಂದು ನಿರ್ಲಕ್ಷಕ್ಕೊಳಗಾಗಿದೆ ಎಂಬುದೇ ಪ್ರಶ್ನೆಯಾಗಿದೆ. ಇನ್ನಾದರೂ ಸಮಾಜದ ಹಿರಿಯರು, ಧಾರ್ಮಿಕ ಮುಖಂಡರು, ದೇವಾಲಯಗಳಿಗೆ ಕೊಡುವ ಮಾನ್ಯತೆಯನ್ನೇ ಸ್ಮಶಾಣಕ್ಕೂ ನೀಡಲಿ ಎಂಬುದು ಪ್ರಜ್ಞಾವಂತ ನಾಗರೀಕರ ಅನಿಸಿಕೆಯಾಗಿದೆ.
ದಿನಕಳೆದಂತೆ ದೇವಸ್ಥಾನಗಳ ಸಂಕ್ಯೆ ಹೆಚ್ಚುತ್ತಿರುವುದು ಸಂತಸದ ಸಂಗತಿ. ಧಾರ್ಮಿಕವಾಗಿ, ಆದ್ಯಾತ್ಮಿಕವಾಗಿ ಜನರು ಪ್ರಾಜ್ಞರಾಗುತ್ತಿದ್ದಾರೆ ಎಂಬುದಾಗಿದೆ, ಅದೇ ಕಾಲಕ್ಕೆ ನಮ್ಮದೇ ಅಂತ್ಯಕಾಲಕ್ಕೆ ಧಾರ್ಮಿಕ ಪದ್ಧತಿ ಪರಂಪರೆಯಂತೆ ಅಂತ್ಯಕ್ರಿಯೆ ಜರುಗಿಸಲು ಸ್ಮಶಾಣ, ಚಿತಾಗಾರಗಳು ಅತ್ಯಂತ ಪ್ರಮುಖವಾಗಿವೆ. ಅವುಗಳ ರಕ್ಷಣೆ , ಸರ್ಕಾರ ಮತ್ತು ಸಮಾಜದ ಜವಾಬ್ದಾರಿಯಾಗಿದ್ದು ನಿಭಾಯಿಸುವಲ್ಲಿ ಎಚ್ಚೆತ್ತುಕೊಳ್ಳಬೇಕಿದೆ. ಪಟ್ಟಣ ಪಂಚಾಯತದಿಂದ ಮೂರು ಲಕ್ಷದ ಅನುದಾನದಲ್ಲಿ ಕೆಲವು ವ್ಯವಸ್ಥೆಗಳನ್ನು ಅಳವಡಿಸುತ್ತಿದ್ದು ಸಾರ್ವಜನಿಕರೂ ಸಹ ಹಾಳುಗೆಡವದೇ ಕಲ್ಪಿಸಿರುವ ಸೌಕರ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಹಾಗೂ ಸಂಘ ಸಂಸ್ಥೆಗಳು, ಸಮುದಾಯಗಳು ಚಿತಾಗಾರವಾಗಲೀ, ಸ್ಮಶಾಣವಾಗಲೀ ನಮ್ಮದೆಂಬ ಭಾವದಲ್ಲಿ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಸ್ವಚ್ಚ ಕಾರ್ಯದಲ್ಲಿ ತೊಡಗಿಸಿಕೊಂಡು ಉಳಿಸಿಕೊಳ್ಳಬೇಕಿದೆ.- ಸತೀಶ್ ಶಿವಾನಂದ ನಾಯ್ಕ, ಮಂಜುನಾಥ ನಗರ ವಾರ್ಡ್ ಸದಸ್ಯ]





Prathidvani Yellapura