
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರ ಅಂಬೇಡ್ಕರ್ ಕುರಿತಾದ ಹೇಳಿಕೆಯನ್ನು ಖಂಡಿಸಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಸಮಿತಿಯ ಅಡಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯೂ ಸೇರಿದಂತೆ ವಿವಿಧ ಸಂಘಟನೆಗಳ ಅಡಿಯಲ್ಲಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಕೇಂದ್ರ ಸರ್ಕಾರದ ಗೃಹ ಸಚಿವ ಗೌರವ ಸ್ಥಾನದಲ್ಲಿದ್ದುಸಂವಿಧಾನ ಶಿಲ್ಪಿ, ಡಾ.ಬಾಬಾ ಸಾಹೇಬ ಅಂಬೇಡ್ಕರ್ ಕುರಿತು ಹಗುರವಾದ ಹೇಳಿಕೆನ್ನು ನೀಡಿದ್ದಾರೆ. ಅವರ ಹೇಳಿಕೆಯಂತೆ ಅಂಬೇಡ್ಕರ್ ಅಂಬೇಡ್ಕರ್ ಎಂದು ಹೇಳಿದಷ್ಟು ಸಲ ದೇವರ ಹೆಸರು ತೆಗೆದುಕೊಂಡಿದ್ದರೆ ಏಳೇಳು ಜನ್ಮಕ್ಕೂ ಸ್ವರ್ಗದಲ್ಲೇ ಸ್ಥಾನ ಸಿಗುತ್ತಿತ್ತು ಎಂಬ ಕುಹಕದ ನುಡಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಅವಮಾನಿಸಿದಂತಿದೆ. ಇದು ಒಬ್ಬ ಗೃಹಸಚಿವರಿಗೆ ಶೋಭೆ ತರುವಂತಹದ್ದಲ್ಲ. ಇಂತಹ ಹೇಳಿಕೆಯನ್ನು ಖಂಡಿಸುವುದಲ್ಲದೇ ಸಂವಿಧಾನ ಶಿಲ್ಪಿಗೆ ಅವಮಾನಿಸಿದ ಗೃಹ ಸಚಿವರನ್ನು ಕೂಡಲೇ ಮಂತ್ರಿ ಸ್ಥಾನದಿಂದ ಉಚ್ಛಾಟಿಸುವ ಜೊತೆಯಲ್ಲಿ ಲೋಕಸಭೆ ಸದಸ್ಯತ್ವವನ್ನೂ ಕೂಡ ರದ್ದುಗೊಳಿಸಬೇಕೆಂದು ರಾಷ್ಟ್ರಪತಿಗಳಿಗೆ ತಲುಪಿಸುವಂತೆ ತಹಸೀಲ್ದಾರರ ಮೂಲಕ ಮನವಿಯಲ್ಲಿ ಕೋರಲಾಗಿದೆ.

ಮನವಿ ಸ್ವೀಕರಿಸಿದ ತಹಸೀಲ್ದಾರ ಯಲ್ಲಪ್ಪ ಗೋಣೆಣ್ಣವರ್ ಸಂಬಧಿಸಿದವರಿಗೆ ಮನವಿ ತಲುಪಿಸಲಾಗುವುದೆಂದು ಪ್ರತಿಕ್ರಿಯಿಸಿದರು. ಈ ಸಂದರ್ಭದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಜಗನ್ನಾಥ ರೇವಣಕರ, ದಲಿತ ಸಂಘಟನೆಗಳ ಪ್ರಮುಖರಾದ ಮಾರುತಿ ಬಿ ವಡ್ಡರ್, ಅನಿಲ್ ಮರಾಠೆ, ಕಲ್ಲಪ್ಪ ಹೋಳಿ, ಪೂಜಾ ನೇತ್ರೇಕರ, ಉಲ್ಲಾಸ ಶಾನಭಾಗ , ಸುನಿಲ್ ಕಾಂಬ್ಳೆ, ಫಕೀರಪ್ಪ ಹರಿಜನ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ದೇಶಕ್ಕೆ ಪರಮೋಚ್ಚ ಗ್ರಂಥವಾದ ಸಂವಿಧಾನ ಕೊಟ್ಟಂತಹ ಮಹಾನ್ ಪುರುಷ ಡಾ,ಬಾಬಾ ಸಾಹೆಬ್ ಅಂಬೇಡ್ಕರ್ ಅವರು. ಅಂತಹ ಮಹಾನ್ ಚೇತನ ನೀಡಿದ ಸಂವಿಧಾನದ ಬಲದಿಂದಲೆ ಅಮಿತ್ ಶಾ ಸಹಿತ ರಾಷ್ಟ್ರದ ಗೃಹ ಸಚಿವ ಸ್ಥಾನ ಅನುಭವಿಸಲು ಸಾದ್ಯವಾಗಿದೆ ಅಂತಹ ದೈವಾಂಶ ಸಂಬೂತರೆನಿಸಿಕೊಂಡು ಕೋಟ್ಯಾಂತರ ಭಾರತೀಯರ ಹೃದಯದಲ್ಲಿ ನೆಲೆಸಿರುವ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿರುವ ಅಮಿತ್ ಶಾ ಒಂದು ಕ್ಷಣ ಪದವಿಯಲ್ಲಿ ಮುಂದುವರೆಯಲು ಅನರ್ಹ ಮತ್ತು ಅಂತಹ ವ್ಯಕ್ತಿಯನ್ನು ಪಕ್ಷದಲಿಟ್ಟುಕೊಂಡು ಅಧಿಕಾರ ನೀಡುವುದು ಸಹ ಅಂಬೇಡ್ಕರ್ ಅವರಿಗೆ ಅಗೌರವ ತೋರಿದಂತೆ ತಕ್ಷಣ ಪಕ್ಷದಿಂದಲು ಉಚ್ಚಾಟಿಸಬೇಕಿದೆ. – ಜಗನ್ನಾಥ ರೇವಣ್ಕರ್, ಅಧ್ಯಕ್ಷರು, ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಸೇವಾ ಸಮಿತಿ, ಯಲ್ಲಾಪುರ
Prathidvani Yellapura