
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಭಾರತೀಯ ನೆಲದಲ್ಲಿ ಉನ್ನತ ಗುಣಮಟ್ಟದ ವಿದ್ಯೆ ಮತ್ತು ಸಂಸ್ಕಾರಗಳನ್ನು ಕಲಿತು ವಿದೇಶಕ್ಕೆ ತಮ್ಮ ಸೇವೆ ಸಲ್ಲಿಸುವಂತಾದರೆ ಪ್ರಯೋಜನವಿಲ್ಲ ನಿಮ್ಮ ಸೇವೆ ಇದೇ ನೆಲಕ್ಕೆ ಸಲ್ಲಬೇಕಿದೆ. ಪ್ರಸ್ತುತ ದಿನಗಳಲ್ಲಿ ಪೋಷಕರು ಮಕ್ಕಳಿಗೆ ಕೆಲಸ ಮಾಡಲು ಬಿಡದೆ ಕೇವಲ ಓದುವುದಕ್ಕೆ ಪ್ರೇರಣೆ ನೀಡುತ್ತ ಇರುತ್ತಾರೆ ಅದು ತಪ್ಪಲ್ಲ ಆದರೆ ಅದೇ ಸಮಯದಲ್ಲಿ ಕಷ್ಟಪಟ್ಟು ಕೆಲಸಮಾಡಿ ಬದುಕುವ ಜೀವನ ಸತ್ಯವನ್ನು ಕಲಿಸಬೇಕಿದೆ.

ಯಲ್ಲಾಪುರದಂತಹ ಪ್ರಕೃತಿ ಸೌಂದರ್ಯದ ಮದ್ಯೆ ಭಾರತ ನೆಲದ ಸಂಸ್ಕೃತಿಯನ್ನೂ ಅಳವಡಿಸಿ ವಿದ್ಯಾಭ್ಯಾಸ ನೀಡುವ ಧ್ಯೇಯ ಹೊತ್ತ ವಿಶ್ವದರ್ಶನ ಸಂಸ್ಥೆಯ ಉದ್ದೇಶ ಅಪೂರ್ವವಾಗಿದೆ ಎಂದು ಯಶಸ್ವಿ ಉದ್ಯಮಿ ವಿ.ಆರ್.ಎಲ್ ಸಮೂಹ ಸಂಸ್ಥೆ ಸಂಸ್ಥಾಪಕ ಡಾ,ವಿಜಯ ಸಂಕೇಶ್ವರ ಹೇಳಿದರು.

ಅವರು ಪಟ್ಟಣದ ವಿಶ್ವ ದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ಶಾಲಾ ಕಲಿಕಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಪ್ರಥಮ ಬಾರಿಗೆ ಆಯ್ಕೆಯಾಗಿರುವ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಸಿ.ಇ.ಒ ಆಗಿ ಕೆಲಸ ನಿರ್ವಹಿಸುತ್ತಿದ್ದ ಕುಂದಾಪುರದ ಗುರುರಾಜ ಗಂಟಿಹೊಳಿ ಅವರಿಗೆ ಸಂಸ್ಥೆಯ ವತಿಯಿಂದ ಗೌರವ ಸನ್ಮಾನ ಸಲ್ಲಿಸಲಾಯಿತು.

ನಂತರ ಮಾತನಾಡಿದ ಅವರು , ಯಲ್ಲಾಪುರ ಅತ್ಯಂತ ಸಂಸ್ಕಾರವಂತರ ಒಳ್ಳೆಯ ಊರಾಗಿದೆ. ನನ್ನ ಮತ್ತು ಶಾಲೆಯ ಉತ್ತಮ ಭಾಂದವ್ಯಕ್ಕೆ ಮತ್ತು ನನ್ನ ಜೀವನ ಆದರ್ಶಗಳಿಗೆ ಶಾಲೆಯ ಎಲ್ಲರ ಪ್ರಭಾವವಿದೆ. ಅದಕ್ಕಿಂತ ಮಿಗಿಲಾಗಿ ತನ್ನ ಹುಟ್ಟೂರಿಗೆ ಏನನ್ನಾದರು ನೀಡಲೇಬೇಕೆಂಬ ತುಡಿತದಿಂದ ಹರಿಪ್ರಕಾಶ್ ಕೋಣೆಮನೆ ಪ್ರಯತ್ನ ಯಶಸ್ವಿಯಾಗಿದೆ. ನನ್ನ ಚುನಾವಣೆಯಲ್ಲಿಯು ಅವರ ಮಾರ್ಗದರ್ಶನ ಗೆಲುವಿಗೆ ಸಹಕಾರಿಯಾಗಿದೆ. ಶಾಲಾ ಕಲಿಕಾ ಪ್ರಾರಂಭೋತ್ಸವಕ್ಕೆ ಶುಭವಾಗಲಿ ಎಂದರು.

ವಿಶ್ವದರ್ಶನ ಶಾಲೆಯ ಸಂಸ್ಕಾರವಂತ ಶಿಕ್ಷಣ ಕಲಿಕೆ ಮುಂದೆ ಉತ್ತಮ ಸಮಾಜ ನಿರ್ಮಾಣ ಆಗುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಭಾರತದಲ್ಲಿ ಇದುವರೆಗೂ ವಿಜ್ಞಾನ ವಿಭಾಗದಲ್ಲಿ ಒಂದೇ ನೋಬೆಲ್ ಪ್ರಶಸ್ತಿ ಬಂದಿದೆಯೇ ಹೊರತು ಮತ್ತೆ ತೆಗೆದುಕೊಳ್ಳಲು ಸಾಧ್ಯವಾಗದಿರುವುದು ವಿಷಾದದ ಸಂಗತಿ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮತ್ತೊಬ್ಬ ಅತಿಥಿ ದಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಉಪ ಕುಲಪತಿ ಕೆ.ಬಿ.ಗುಡಸಿ ಅಭಿಪ್ರಾಯ ಪಟ್ಟರು.

ಪ್ರಸಕ್ತ ಸಾಲಿನಿಂದ ಡಾ.ವಿಜಯ ಸಂಕೇಶ್ವರ ಹೆಸರಿನಲ್ಲಿ ಮೀಡಿಯಾ ಸ್ಕೂಲ್ ಪ್ರಾರಂಭಿಸುತ್ತಿದ್ದು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪಿಜಿ ಡಿಪ್ಲೊಮಾ ಕೋರ್ಸು (ಒಂದು ವರ್ಷ) ಪ್ರಾರಂಭಿಸುತ್ತಿದ್ದು ಅದರ ಮಾಹಿತಿ ಕರಪತ್ರವನ್ನು ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು. ಸಂಸ್ಥೆಯ ಪ್ರಮುಖರಾದ ಹರಿಪ್ರಕಾಶ ಕೋಣೆಮನೆ , ಶ್ರೀನಿವಾಸ ಹೆಬ್ಬಾರ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಹರ್ಷಿತಾಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿಶ್ವದರ್ಶನ ಪ.ಪೂ ಕಾಲೇಜು ಪ್ರಾಂಶುಪಾಲ ಡಿ.ಕೆ.ಗಾಂವ್ಕರ್ ಹಾಗೂ ಸಿ.ಬಿ.ಎಸ್.ಸಿ ಉಪ ಪ್ರಾಂಶುಪಾಲೆ ಆಸ್ಮಾ ಶೇಕ್ ನಿರ್ವಹಿಸಿದರು. ಸಿ.ಬಿ.ಎಸ್.ಸಿ ವಿಭಾಗದ ಪ್ರಾಂಶುಪಾಲೆ ಮಹಾದೇವಿ ಭಟ್ಟ ವಂದಿಸಿದರು.
Prathidvani Yellapura