
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಆನಗೋಡು ಗ್ರಾಮ ಪಂಚಾಯತ ವ್ಯಾಪ್ತಿಯ ಸಾತೊಡ್ಡಿ ತೆರಳುವ ಮಾರ್ಗ ಮದ್ಯೆ ಶಿಸ್ತುಮುಡಿ ಎಂಬಲ್ಲಿ ಯಲ್ಲಾಪುರ ಪಟ್ಟಣ ಪಂಚಾಯತ್ ತ್ಯಾಜ್ಯ ಸಂಸ್ಕರಣ ಘಟಕವಿದ್ದು ಪಟ್ಟಣದಲ್ಲಿ ನಿತ್ಯವು ಸಂಗ್ರಹವಾಗುವ ರಾಶಿ ರಾಶಿ ಕಸವನ್ನು ತಂದು ಇಲ್ಲಿ ಸಂಸ್ಕರಣೆ ಮಾಡಲಾಗುತ್ತಿತ್ತು. ಸದ್ಯ ಮಾನವನ ಶಕ್ತಿ ಹೆಚ್ಚಾಗಿ ಬಳಸದೆ ಅತ್ಯಾಧುನಿಕ ತಂತ್ರಜ್ಞಾನದ ಕಸವಿಂಗಡಣೆ ಯಂತ್ರ ಅಳವಡಿಸಲಾಗುತ್ತಿದ್ದು ಶೀಘ್ರದಲ್ಲೇ ಕಸದಿಂದ ರಸ ತೆಗೆಯುವ ಪ್ರಕ್ರಿಯೆ ಪ್ರಾರಂಭವಾಗಲಿದೆ.

ಯಲ್ಲಾಪುರ ಪಟ್ಟಣ ವ್ಯಾಪ್ತಿ 18.26.ಚ.ಕಿ.ಮೀ ಇದ್ದು ಸುಮಾರು 18,158 ಜನಸಂಖ್ಯೆಯನ್ನು ಹೊಂದಿದೆ. ಒಟ್ಟು 19 ವಾರ್ಡುಗಳಿದ್ದು 1 ಟಿಪ್ಪರ್, 5 ಕಸ ಸಂಗ್ರಹಣಾ ವಾಹನಗಳು ನಿತ್ಯ ಅಂದಾಜು 6 ಟನ್ ಕಸ ಸಂಗ್ರಹಣೆ ಮಾಡುತ್ತವೆ. ಇಷ್ಟೆಲ್ಲಾ ಸಂಗ್ರಹವಾಗುವ ಕಸವನ್ನು ಶಿಸ್ತುಮುಡಿಯಲ್ಲಿರುವ ಪ.ಪಂ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಸಾಗಿಸಲಾಗುತ್ತದೆ.

ಸಿಬ್ಬಂದಿಗಳ ಕೊರತೆಯ ನಡುವೆಯೂ ಸಂಸ್ಕರಣಾ ಘಟಕದಲ್ಲಿ ಹಸಿಕಸ ಮತ್ತು ಒಣಕಸ ಪ್ರತ್ಯೇಕ ಮಾಡಲಾಗುತ್ತದೆ. ಹಸಿಕಸವನ್ನು ಮರು ಸಂಸ್ಕರಿಸಿ ಗೊಬ್ಬರವನ್ನಾಗಿಸಿ ರೈತರಿಗೆ ಕೆ.ಜಿ ಗೆ 2 ರೂನಂತೆ ನ್ಯಾಯವಾದ ಬೆಲೆಗೆ ಮಾರಲಾಗುತ್ತದೆ. ಇದೀಗ ಮಾನವಶಕ್ತಿ ಕಡಿಮೆ ಮಾಡಿ ಯಂತ್ರಗಳ ಮೂಲಕ ಕಸದ ಸಂಸ್ಕರಣೆಯನ್ನು ಮಾಡುವ ಯೋಜನೆ ರೂಪಿಸಿದ್ದು ಅದಕ್ಕಾಗಿ ಬೃಹತ್ ಗಾತ್ರದ ಯಂತ್ರೋಪಕರಣಗಳನ್ನು ಘಟಕದಲ್ಲಿ ಅಳವಡಿಸಲಾಗಿದೆ.

ತ್ಯಾಜ್ಯ ನಿರ್ವಹಣೆಗೆಂದು 35 ಪೌರಕಾರ್ಮಿಕರ ಅವಶ್ಯಕತೆ ಇದ್ದು ಸದ್ಯ 12 ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ 10 ಜನ ಪೌರಕಾರ್ಮಿಕರ ಮಂಜೂರಾಗಿದ್ದರೂ 6 ಜನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಗಳ ಕೊರತೆ ದೊಡ್ಡ ಮಟ್ಟದಲ್ಲಿ ಕಾಡುತ್ತಿದ್ದು ತ್ಯಾಜ್ಯ ಸಂಸ್ಕರಣಾ ಘಟಕದೊಳಗೇ ಕರ್ತವ್ಯ ನಿರ್ವಹಿಸಲು ಕನಿಷ್ಟ 10 ಜನರ ಅವಶ್ಯಕತೆ ಇದೆ. ಪಟ್ಟಣ ಪಂಚಾಯತ್ ನಲ್ಲಿ ಎರಡು ಜೆಸಿಬಿಗಳಿದ್ದು ಒಂದು ಕೆಲಸಕ್ಕೆ ಬಾರದೇ ಹಾಳಾಗಿ ನಿಂತಿದೆ. ಇನ್ನೊಂದು ಜೆಸಿಬಿ ಕೆಲಸ ಮಾಡುತ್ತಿದೆ.

ನೂತನವಾಗಿ ಅಳವಡಿಸಲಾಗುತ್ತಿರುವ ಅತ್ಯಾಧುನಿಕ ತಂತ್ರಜ್ಞಾನದ ಹೊಸ ಸಂಸ್ಕರಣಾ ಯಂತ್ರ ನಿರ್ವಹಣೆಗೆ ಓರ್ವ ನುರಿತ ತಂತ್ರಜ್ಞರ ನೇಮಕವಾಗಬೇಕಿದೆ ಎಂಬುದು ಅಲ್ಲಿನ ಸಿಬ್ಬಂದಿಗಳ ಮಾತಾಗಿದೆ.

ಹೊಸ ಸಂಸ್ಕರಣಾ ಯಂತ್ರವು ಪ್ಲಾಸ್ಟಿಕ್ ಬಾಟಲ್‌ಗಳು, ಹಸಿಕಸ ಸೇರಿದಂತೆ ಒಟ್ಟು 6 ವಿಧದಲ್ಲಿ ತ್ಯಾಜ್ಯ ಸಂಸ್ಕರಿಸುತ್ತದೆ. ಸದ್ಯ ಸಂಸ್ಕರಣಾ ಘಟಕದ ಆವರಣದಲ್ಲಿ ಶೇಖರಣೆಯಾಗಿರುವ 20 ವರ್ಷದ ಪಾರಂಪರಿಕ ತ್ಯಾಜ್ಯವನ್ನು ಸಂಸ್ಕರಿಸಲು ಡಿಪಿಆರ್ ಸಿದ್ಧಪಡಿಸಿದ್ದು 6 ತಿಂಗಳಲ್ಲಿ ಸಂಸ್ಕರಣೆಯಾಗುತ್ತದೆ.
2023 ರ ಫೆಬ್ರವರಿ ತಿಂಗಳಿನಲ್ಲಿ ನಡೆದ ರಾಜ್ಯ ಪ್ರಸಿದ್ಧ ಯಲ್ಲಾಪುರ ಗ್ರಾಮದೇವಿ ಜಾತ್ರೆಯ ಸಂದರ್ಭದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದೊಳಗಿನ ಕಸದ ರಾಶಿಗೆ ಬಿದ್ದ ಬೆಂಕಿ ಇಂದಿಗೂ ಉರಿಯುತ್ತಿದ್ದು ಪ್ರತಿನಿತ್ಯ ನೀರನ್ನು ಬಳಸಿ ಬೆಂಕಿ ನಂದಿಸಿದರೂ ಒಳಗೇ ಸುಡುತ್ತಿರುವ ಬೆಂಕಿ ಹೊಗೆಯ ರೂಪದಲ್ಲಿ ಆಗಾಗ ಹೊರಬರುತ್ತಿರುತ್ತದೆ.

ಒಟ್ಟಿನಲ್ಲಿ ಬೆಳೆಯುತ್ತಿರುವ ಜಗತ್ತಿನ ವೇಗದಲ್ಲಿ ತ್ಯಾಜ್ಯದ ಪ್ರಮಾಣವೂ ಹೆಚ್ಚುತ್ತಿರುವುದಲ್ಲದೇ ಪ್ಲಾಸ್ಟಿಕ್ ತ್ಯಾಜ್ಯವೇ ಹೆಚ್ಚಿರುವುದು ಆತಂಕಕಾರಿಯಾಗಿದೆ. ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ತ್ಯಜಿಸಿ ಪೂರಕವಾದ ವಸ್ತುಗಳನ್ನು ಹೆಚ್ಚಾಗಿ ಬಳಸಲು ಜನತೆ ಮುಂದಾಗಬೇಕಿದೆ. ಇದು ಕೇವಲ ಕಸದ ವಿಚಾರ ಎಂದು ತಾತ್ಸಾರ ತೋರಿದರೆ ಭವಿಷ್ಯದ ಬದುಕು ಗಂಡಾಂತರ ಕ್ಕೆ ಸಿಲುಕುವುದು ಖಂಡಿತವಾಗಿದೆ. ಆ ನಿಟಿನಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ವೈಜ್ಞಾನಿಕವಾಗಿ ನಿರ್ವಹಿಸಬೇಕಿರುವುದು ಸರ್ಕಾರದ, ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಪೌರಕಾರ್ಮಿಕರ ಕೊರತೆಯ ನಡುವೆಯೂ ಯಲ್ಲಾಪುರ ಪಟ್ಟಣ ಪಂಚಾಯತ ಕಸ ನಿರ್ವಹಣೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದರೂ ಅವರ ಬೇಕು ಬೇಡಗಳನ್ನು ಪೂರೈಸುವಲ್ಲಿ ಸರ್ಕಾರ ಗಂಭೀರವಾಗಿ ಚಿಂತಿಸಿ ಅತ್ಯಾಧುನಿಕ ವ್ಯವಸ್ಥೆಗಳನ್ನು ಕಲ್ಪಿಸಬೇಕಿದೆ ಎಂಬುದು ಪರಿಸರ ಪ್ರೇಮಿಗಳ , ಕಸಮುಕ್ತ ಯಲ್ಲಾಪುರದ ಕನಸು ಕಾಣುವ ಸಾರ್ವಜನಿಕರ ಅಭಿಪ್ರಾಯವಾಗಿದೆ.

ಕೆಲವೇ ದಿನಗಳ ಹಿಂದಷ್ಟೇ ಯಂತ್ರಗಳನ್ನು ಅಳವಡಿಸಲಾಗಿದ್ದು ಅದಕ್ಕೆ ಬೇಕಾಗುವ ವಿದ್ಯುತ್ ಸಾಮರ್ಥ್ಯವನ್ನು ಪಡೆಯಬೇಕಿದೆ. ನಂತರ ಪ್ರಾಯೋಗಿಕ ಚಾಲನೆ ನೀಡಿ ಬರುವ ಫಲಿತಾಂಶವನ್ನಾಧರಿಸಿ ದಿನಕ್ಕೆ ಎಷ್ಟು ಸಮಯ ಕಸದ ಸಂಸ್ಕರಣೆಯಾಗಬೇಕು, ವಿಭಜಿಸಿದ ತ್ಯಾಜ್ಯದ ನಿರ್ವಹಣೆ , ಗೊಬ್ಬರವಾಗಿ ಮಾರ್ಪಡುವ ಕಸದ ವಿತರಣೆ ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿ ನಿರ್ವಹಣೆಗೆ ತಜ್ಞರನ್ನು ನೇಮಿಸಲಾಗುವುದು. ಕಸಮುಕ್ತ ಯಲ್ಲಾಪುರದ ಪ್ರಯತ್ನಕ್ಕೆ ಮತ್ತು ಉತ್ತಮ ಕಸ ಸಂಸ್ಕರಣಾ ಘಟಕವನ್ನಾಗಿಸುವ ನಿಟ್ಟಿನಲ್ಲಿ ಯಲ್ಲಾಪುರ ಪಟ್ಟಣ ಪಂಚಾಯತ ಅವಿರತವಾಗಿ ಶ್ರಮಿಸುತ್ತಿದೆ. ಕಸದ ವಿಚಾರದಲ್ಲಿ ಸಾರ್ವಜನಿಕರ ಜಾಗೃತಿಯೂ ಅವಶ್ಯಕವಾಗಿದೆ. -ಸಂಗನಬಸಯ್ಯ ಮುಖ್ಯಾಧಿಕಾರಿ ಯಲ್ಲಾಪುರ ಪಟ್ಟಣ ಪಂಚಾಯತ್





Prathidvani Yellapura