


ಪ್ರತಿಧ್ವನಿ,ಯಲ್ಲಾಪುರ : ಯಲ್ಲಾಪುರದಲ್ಲಿ ಎಚ್.ಡಿ.ಎಫ್.ಸಿ ಬ್ಯಾಂಕಿನ ಶಾಖೆ ಉದ್ಘಾಟನೆಗೊಂಡಿರುವುದು ಸಂತಸದ ಸಂಗತಿ. ಎಚ್.ಡಿ.ಎಫ್.ಸಿ ಬ್ಯಾಂಕು ಬಡವರಿಗೂ, ಸಣ್ಣ ಪುಟ್ಟ ಉದ್ಯೋಗ ಸ್ಥಾಪಿಸುವವರಿಗೂ ಸಾಲ ನೀಡಿ ಸಮಾಜದ ಎಲ್ಲ ವರ್ಗದವರ ಆರ್ಥಿಕ ಭದ್ರತೆಗೆ ನೇರವು ನೀಡಬೇಕಲ್ಲದೇ, ಸಿಬ್ಬಂದಿಗಳು ಗ್ರಾಹಕರೊಂದಿಗೆ ಸೌಜನ್ಯದಿಂದ ಉತ್ತಮ ಸೇವೆ ಸಲ್ಲಿಸುವ ಮನೋಭಾವ ತಳೆಯಬೇಕು. ಬ್ಯಾಂಕುಗಳಿಗೆ ಉತ್ತಮ ಸಾಲಗಾರರ ಕೊರತೆ ಸಾಕಷ್ಟು ಪ್ರಮಾಣದಲ್ಲಿದ್ದರೂ, ಠೇವುದಾರರ ಕೊರತೆ ಉಂಟಾಗಿಲ್ಲ ಎಂದು ಕೆಡಿಸಿಸಿ ಬ್ಯಾಂಕಿನ ಅಧ್ಯಕ್ಷರೂ, ಶಾಸಕರೂ ಆದ ಶಿವರಾಮ ಹೆಬ್ಬಾರ ಹೇಳಿದರು.
ಅವರು ಪಟ್ಟಣದ ಬಸ್ ನಿಲ್ದಾಣದ ಸಮೀಪದ `ಬದ್ದಿ ಸಂಕಿರ್ಣ’ದಲ್ಲಿ ಆರಂಭಗೊಂಡ ಎಚ್‌ಡಿಎಫ್‌ಸಿ ಬ್ಯಾಂಕಿನ ನೂತನ ಶಾಖೆಯನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು.
ಯು.ಕೆ ಸೌಹಾರ್ದ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ವಿಶ್ವದಲ್ಲೇ ನಾಲ್ಕನೆಯ ಅತಿದೊಡ್ಡ ಬ್ಯಾಂಕೆAದು ಗುರುತಿಸಿಕೊಂಡಿರುವ ಎಸ್.ಬಿ.ಐ ಯನ್ನೂ ಹಿಂದಿಕ್ಕಿ ಎಚ್.ಡಿ.ಎಫ್.ಸಿ ಬ್ಯಾಂಕು ತ್ವರಿತ ಸೇವೆಯಿಂದ ಜನರ ವಿಶ್ವಾಸಗಳಿಸಿದೆ. ಇಲ್ಲಿನ ಜನ ಸಾತ್ವಿಕರಾಗಿದ್ದು, ಸೌಜನ್ಯದಿಂದ ವರ್ತಿಸುವ ಗುಣ ಹೊಂದಿದ್ದಾರೆ. ಇಂತಹ ಜನರೊಂದಿಗೆ ಅಷ್ಟೇ ಸೌಜನ್ಯದಿಂದ ಸೇವೆ ನೀಡಿದಾಗ ಬ್ಯಾಂಕು ಯಲ್ಲಾಪುರದಲ್ಲಿ ಉತ್ತಮ ಪ್ರಗತಿ ಸಾಧಿಸಲು ಸಾಧ್ಯ ಎಂದರು.
ಎಚ್‌ಡಿಎಫ್‌ಸಿ ಬ್ಯಾಂಕಿನ ಜಿಲ್ಲಾ ಉಸ್ತುವಾರಿ ಅಧಿಕಾರಿ ಗಣಪತಿ ಭಟ್ಟ ಮಾತನಾಡಿ, ನಮ್ಮ ಬ್ಯಾಂಕು 7,812 ಶಾಖೆ ಹೊಂದಿದ್ದು, ಉತ್ತಮ ಗ್ರಾಹಕರಿಂದಾಗಿ ಬ್ಯಾಂಕಿನ ಪ್ರಗತಿ ಸಾಧ್ಯವಾಗಿದೆ ಎಂದ ಅವರು, ನಾವು ಕೃಷಿಕರಿಗೆ ಗೋವು, ಕುರಿ, ಹಾಲು ಡೇರಿ ಸ್ಥಾಪನೆ, ಇವುಗಳಿಗೆ ವಿಶೇಷ ರೀತಿಯ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಸರ್ಕಾರ ಈ ಸಾಲಗಳಿಗೆ ಶೇ.4 ರಷ್ಟು ಸಹಾಯಧನ ನೀಡುತ್ತಿದೆ. ಇದರಿಂದ ಕಡಿಮೆ ಬಡ್ಡಿಯಲ್ಲಿ ರೈತರಿಗೆ ಹೆಚ್ಚಿನ ಸಹಾಯವಾಗಲಿದೆ. ನಮ್ಮಲ್ಲಿ 8.15 ರಿಂದ 10.30 ರವರೆಗೆ ಸಾಲದ ಬಡ್ಡಿದರ ವಿಧಿಸಲಾಗುತ್ತಿದೆ. ಅಲ್ಲದೇ 7.1 ರೂ. ಮತ್ತು ಹಿರಿಯ ಪ್ರಜೆಗಳಿಗೆ 8 ರೂ., ನಮ್ಮಲ್ಲಿಟ್ಟ ಠೇವಿಗೆ ಬಡ್ಡಿ ನೀಡುತ್ತೇವೆ ಎಂದು ಮಾಹಿತಿ ನೀಡಿದರು.
ವಿಭಾಗೀಯ ವ್ಯವಸ್ಥಾಪಕ ಜಸ್ಟಿನ್ ಜೇಮ್ಸ್ ಬೆಂಗಳೂರು, ಸ್ಥಳಿಯ ಸಹಕಾರಿಗಳಾದ ಡಿ.ಶಂಕರ ಭಟ್ಟ, ಪಿ.ಜಿ.ಹೆಗಡೆ ಕಳಚೆ, ಕಟ್ಟಡ ಮಾಲಿಕ ದತ್ತಾತ್ರೇಯ ಬದ್ಧಿ ಮತ್ತಿತರರು ಉಪಸ್ಥಿತರಿದ್ದರು. ಶಾಖಾ ವ್ಯವಸ್ಥಾಪಕ ಮೋಹನ್ ಬಗ್ಗೋಣ ಸ್ವಾಗತಿಸಿ, ವಂದಿಸಿದರು.






Prathidvani Yellapura