Breaking News

ನಿಸರ್ಗ ಸ್ವರ್ಗ ಸಾತೊಡ್ಡಿ ಜಲಪಾತ ಆಗಬೇಕಿದೆ ವಿಶ್ವ ವಿಖ್ಯಾತ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಬಿಸಿಲಿನ ಜಳಕ್ಕೆ ನೀರಿಗೆ ಮೈಯ್ಯೊಡ್ಡಲು ನಿಸರ್ಗ ನಿರ್ಮಿತ ರಮಣೀಯ ತಾಣ ಸಾತೊಡ್ಡಿ ಜಲಪಾತಕ್ಕೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಪ್ರಕೃತಿ ಸೌಂದರ್ಯದ ಹಸಿರು ಮಡಿಲೆಂದೇ ಖ್ಯಾತಿ ಪಡೆದ ಜಲಪಾತಗಳ ಆಗರ ಯಲ್ಲಾಪುರ ತಾಲೂಕು ಪ್ರವಾಸಿಗರ ಕೈ ಬೀಸಿ ಕರೆಯುವ ರಮಣೀಯ ತಾಣವಾಗಿದೆ. ಇಲ್ಲಿನ ಜಲಪಾತಗಳು ದೇಶದ ನಾನಾ ಭಾಗದ ಜನರಿಗೆ ಬಲು ಪ್ರಿಯವಾಗಿದೆ.

ಮೇಲಿನಿಂದ ದೋ..ಎಂದು ಸುರಿಯುವ ಹಾಲ್ಗೆನೆಯ ನೀರಿಗೆ ಮೈಯ್ಯೊಡ್ಡಿ ನೀರಲ್ಲಿ ಮಿಂದು ಆಟವಾಡುವುದೆ ಒಂದು ಸೊಬಗು. ವಿಶೇಷ ಎಂದರೆ ಬೇರೆಲ್ಲಾ ಜಲಪಾತಗಳಂತೆ ಇದರಲ್ಲಿ ಅಷ್ಟೇನು ಅಪಾಯಕಾರಿ ಎನಿಸುವಂತ ವಾತಾವರಣವಿಲ್ಲ ಆದರು ನಮ್ಮ ಜಾಗ್ರತೆಯಲ್ಲಿ ಸೌಂದರ್ಯ ಆಸ್ವಾದಿಸುವುದರ ಜೊತೆಗೆ ಎಚ್ಚರಿಕೆಯು ಅಗತ್ಯವಿದೆ.

ತಾಲೂಕಿನ ದೇಹಳ್ಳಿ ಪಂಚಾಯತ ವ್ಯಾಪ್ತಿಯಲ್ಲಿ ಸಾತೊಡ್ಡಿ ಜಲಪಾತವಿದ್ದು ಬಳ್ಳಾರಿ-ಕಾರವಾರ ರಾಷ್ಟ್ರಿಯ ಹೆದ್ದಾರಿಯಿಂದ 24 ಕಿ.ಮೀ ಅಂತರದಲ್ಲಿದೆ. ಈ ಹಿಂದೆ ಜಲಪಾತಕ್ಕೆ ಸಾಗುವ ಮಾರ್ಗ ಅತ್ಯಂತ ದುಸ್ಥಿತಿಯಲ್ಲಿದ್ದು ಪ್ರವಾಸಿಗರ ಶಾಪಕ್ಕೆ ಗುರಿಯಾಗುತ್ತಿತ್ತು. ಈಗಿನ ಶಾಸಕರು ಮಾಜಿ ಸಚಿವರಾದ ಶಿವರಾಮ ಹೆಬ್ಬಾರರ ಪ್ರಯತ್ನದ ಫಲವಾಗಿ ಹಂತಹಂತದಲ್ಲಿ ಸಿಸಿ ರಸ್ತೆ ನಿರ್ಮಿಸಿದ್ದು ಪ್ರವಾಸಿಗರ ಸಂಚಾರಕ್ಕೆ ಅಲ್ಲದೇ ಈ ವ್ಯಾಪ್ತಿಯ ಸಾವಿರಾರು ರೈತಾಪಿ ಕುಟುಂಬಕ್ಕೆ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗಿದೆ.

ಮಧ್ಯದಲ್ಲಿ 4 ಕಿ.ಮೀ ಸಿಸಿ ರಸ್ತೆಯಾದರೆ ಸಂಪೂರ್ಣ ಸಾತೊಡ್ಡಿ ಜಲಪಾತದ ವರೆಗಿನ ರಸ್ತೆಯು ಸಂಚಾರಕ್ಕೆ ಯೋಗ್ಯವಾಗಲಿದೆ.
ಸಾತೊಡ್ದಿಡ ಜಲಪಾತದ ನಿರ್ವಹಣೆಯನ್ನು ದೇಹಳ್ಳಿ ಪಂಚಾಯತ ಮತ್ತು ಸ್ಥಳಿಯ ಗ್ರಾಮ ಅರಣ್ಯ ಸಮಿತಿ ನಿರ್ವಹಿಸುತ್ತಿದ್ದು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರವಾಸಿಗರ ವಾಹನಗಳ ಶುಲ್ಕವನ್ನು ಪಂಚಾಯತದ ವತಿಯಿಂದ ವಸೂಲಿ ಮಾಡುತ್ತಿದ್ದು ವಾಹನಗಳ ಗಾತ್ರದ ಮೇಲೆ ಶುಲ್ಕ ತೆಗೆದುಕೊಳ್ಳಲಾಗುತ್ತಿದೆ .

ಇಲ್ಲಿನ ಜಲಪಾತದ ವೀಕ್ಷಣೆಗೆಂದು ಬರುವ ಪ್ರವಾಸಿಗರಿಗೆ ಒಬ್ಬರಿಗೆ 20 ರೂ ಪ್ರವೇಶ ಶುಲಕ್ವನ್ನು ಗ್ರಾಮ ಅರಣ್ಯ ಸಮಿತಿ ವತಿಯಿಂದ ವಸೂಲಿ ಮಾಡುತ್ತಿದ್ದು ಜಲಪಾತದ ವಾತಾವರಣವನ್ನು ಸ್ವಚ್ಛ ಹಾಗೂ ಪ್ಲಾಸ್ಟಿಕ್ ಮುಕ್ತವಾಗಿ ನೋಡಿಕೊಳ್ಳಲಾಗುತ್ತಿದೆ.

ಹೊರಗಿನಿಂದ ತರುವ ಯಾವುದೇ ಆಹಾರ ಪದಾರ್ಥಗಳನ್ನು ಜಲಪಾತದ ತಪ್ಪಲಿಗೆ ಕೊಂಡೊಯ್ಯುವಂತಿಲ್ಲವಾಗಿದೆ.

ವರ್ಷದ 365  ದಿನಗಳೂ ಮೈದುಂಬಿ ಹರಿಯುವ ಜಲಪಾತದ ನೀರು ಕಡು ಬೇಸಿಗೆಯಲ್ಲಿ ತನ್ನ ಹರಿವನ್ನು ಕೊಂಚ ತಗ್ಗಿಸಿಕೊಂಡಿರುತ್ತದೆ. ಈ ಸಂದರ್ಭದಲ್ಲಿ ಪ್ರವಾಸಿಗರು ಧುಮ್ಮಿಕ್ಕುವ ಜಲಪಾತದ ನೀರಿಗೆ ಬೆನ್ನೊಡ್ಡಿ ಆನಂದ ಅನುಭವಿಸುತ್ತಾರೆ. ಒಮ್ಮೊಮ್ಮೆ ಮಧ್ಯಾಹ್ನದ ವೇಳೆಗೆ ಹರಿದು ಬರುವ ನೀರಿನ ವ್ಯಾಪ್ತಿಯಲ್ಲಿ ಮಳೆಯಾದಾಗ ಇದ್ದಕ್ಕಿದ್ದಂತೆ ನೀರು ತುಂಬಿ ಹರಿದು ಬರುತ್ತದೆ. ಆಗ ಪ್ರವಾಸಿಗರು ಮೈಮರೆತಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

ಇದನ್ನು ಸ್ಥಳೀಯ ನಿರ್ವಹಣೆ ಮಾಡುವ ಕಾವಲುಗಾರರು, ಗ್ರಾಮ ಅರಣ್ಯ ಸಮಿತಿಯವರು ಎಚ್ಛರಿಸುತ್ತಲೇ ಇರುತ್ತಾರೆ. ಸಂಜೆಯ ನಂತರ ಜಲಪಾತದ ಗೇಟಿನೊಳಗೆ ಪ್ರವೇಶವಿರುವುದಿಲ್ಲ.

ಪ್ರತಿವರ್ಷ ಈ ಜಲಪಾತಕ್ಕೆ ಕುಟುಂಬ ಸಮೇತ ಭೇಟಿ ನೀಡುತ್ತಿದ್ದೇವೆ. ಇತ್ತೀಚಿಗೆ ರಸ್ತೆ ಸಮರ್ಪಕವಾಗಿದೆ. ಪ್ರಕೃತಿ ನಿರ್ಮಿತ ಸುಂದರ ಪರಿಸರದ ನಡುವೆ ಇರುವ ಜಲಪಾತದ ಮಾಹಿತಿ ರಾಜ್ಯ ಮತ್ತು ರಾಷ್ಟ್ರದ ಜನಕ್ಕೆ ಸಮರ್ಪಕವಾಗಿ ದೊರೆಯಬೇಕಿದೆ. ಜಲಪಾತದ ವ್ಯಾಪ್ತಿಯಲ್ಲಿ ಬಗೆಬಗೆಯ ವಾಟರ್ ಗೇಮ್ಸ್‌ ಗಳು ಪ್ರವಾಸಿಗರ ಆಹಾರ ವ್ಯವಸ್ಥೆ , ತಂಗುವ ವ್ಯವಸ್ಥೆ ಕಲ್ಪಿಸಿದಲ್ಲಿ ರಾಷ್ಟ್ರ ಮಟ್ಟದ ಪ್ರವಾಸೀ ತಾಣವಾಗಿ ಸಾತೊಡ್ಡಿ ಪ್ರಖ್ಯಾತಿ ಗಳಿಸಲಿದೆ. ಮತ್ತು ಇದರೊಂದಿಗೆ ಉದ್ಯೋಗ ಸೃಷ್ಟಿಯೂ ಆಗಲಿದೆ. – ಚೇತನ್ ಮಂಜುನಾಥ, ಬೆಂಗಳೂರು

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *