

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ನೀಡಿದ್ದು ಅದರಲ್ಲಿ “ಗೃಹ ಜ್ಯೋತಿ” ಕೂಡ ಒಂದಾಗಿದೆ. ಇದರ ಪ್ರಕಾರ ಪ್ರತಿ ಮನೆಗೆ 200 ಯುನಿಟ್ ವರೆಗೆ ಕರೆಂಟ್ ಬಿಲ್ ಉಚಿತ ಎಂಬುದಾಗಿತ್ತು.
ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಕೊಟ್ಟ ಭರವಸೆಯನ್ನಾಧರಿಸಿ ರಾಜ್ಯದ ವಿದ್ಯುತ್ ಗ್ರಾಹಕರು ವಿದ್ಯುತ್ ಬಿಲ್ ಭರಿಸಲು ನಿರಾಕರಿಸುತ್ತಿದ್ದು ಬಿಲ್ ವಸೂಲಿಗೆ ತೆರಳುತ್ತಿರುವ ವಿದ್ಯುತ್ ಇಲಾಖೆ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಹಲ್ಲೆಮಾಡುವುದು ಅಲ್ಲದೇ ಕೊಪ್ಪಳದಲ್ಲಿ ವಿದ್ಯುತ್ ಇಲಾಖೆ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ್ದೂ ಆಗಿದೆ.

ಈವರೆಗೆ ಕೆಲವೆ ಕಡೆಗಳಲ್ಲಿ ನಡೆಯುತ್ತಿದ್ದ ಇಂತಹ ಘಟನೆಗಳು ರಾಜ್ಯದ ಮೂಲೆಮೂಲೆಗಳಲ್ಲಿ ಪಸರಿಸುತ್ತಿದ್ದು ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಸಮಸ್ಯೆ ತಂದೊಡ್ಡಿದೆ. ಈ ಸಂಬಂಧ ವಿದ್ಯುತ್ ನಿಗಮ ಸರ್ಕಾರದೊಂದಿಗೆ ಚರ್ಚಿಸಿ “ಗೃಹಜ್ಯೋತಿ” – ಉಚಿತ ವಿದ್ಯುತ್ ಯೋಜನೆಯು ಎಂದಿನಿಂದ ಪ್ರಾರಂಭವಾಗುತ್ತದೆ, ಅದರ ಮಾನದಂಡಗಳೇನು ಎಂಬುದನ್ನು ಮುದ್ರಣ ಮಾದ್ಯಮ ಮತ್ತು ದೃಶ್ಯ ಮಾದ್ಯಮ ಹಾಗು ಸಾಮಾಜಿಕ ಜಾಲತಾಣಗಳ ಮೂಲಕ ರಾಜ್ಯದ ಜನತೆಗೆ “ಗೃಹ ಜ್ಯೋತಿ” ಕುರಿತು ಸ್ಪಷ್ಡ ಮಾಹಿತಿ ನೀಡುವಂತಾಗಬೇಕಿದೆ.

ಇಲ್ಲವಾದಲ್ಲಿ ವಿದ್ಯುತ್ ಇಲಾಖೆ ಅಡಿ ಕರ್ತವ್ಯ ನಿರ್ವಹಿಸುವ ಸಹಸ್ರಾರು ಮಂದಿ ಲೈನ್‌ಮನ್‌ಗಳು, ಬಿಲ್ ಕಲೆಕ್ಟರ್‌ಗಳು ಹಾಗೂ ಸಾರ್ವಜನಿಕರ ಮಧ್ಯೆ ಸಂಘರ್ಷ ಸಂಭವಿಸಿ ಇಲ್ಲಿಯವರೆಗಿನ ತಿಳಿಯಾದ ವಾತಾವರಣ ಕಲುಷಿತಗೊಳ್ಳುವ ಸಾಧ್ಯತೆ ಇದೆ. ಸಿಬ್ಬಂದಿಗಳ ಸ್ವಾಭಿಮಾನಿ ಗೌರವದ ಬದುಕಿಗೆ ದಕ್ಕೆಯಾಗಲಿದೆ ಎಂಬುದು ವಿದ್ಯುತ್ ಇಲಾಖೆಯ ಸಿಬ್ಬಂದಿಗಳ ಅಳಲಾಗಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಗೃಹಜ್ಯೋತಿ-ಉಚಿತ ವಿದ್ಯುತ್ ಯೋಜನೆಯ ಸಂಬಂಧ ಸಾರ್ವಜನಿಕರೊಡನೆ ಮಾತಿನ ಚಕಮಕಿ ನಡೆಯುತ್ತಿದ್ದು ಮೊನ್ನೆ ದಿನ ಕೊಪ್ಪಳದಲ್ಲಿ ಸಿಬ್ಬಂದಿ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸುವ ಮಟ್ಟಕ್ಕೆ ಮುಟ್ಟಿದೆ. ಇಂತಹ ನಡೆಯನ್ನು ಖಂಡಿಸುವುದಲ್ಲದೇ ನಿಗಮದ ಮುಖ್ಯಸ್ಥರು, ಸರ್ಕಾರದ ಪ್ರಮುಖರು ಈ ಕುರಿತು ಸಾರ್ವಜನಿಕಲ್ಲಿರುವ ಗೊಂದಲವನ್ನು ನಿವಾರಿಸುವ ಮಾರ್ಗೋಪಾಯವನ್ನು ಕಂಡುಕೊಳ್ಳಬೇಕಿದೆ. ಇಲ್ಲವಾದಲ್ಲಿ ಮತ್ತಷ್ಟು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ. – ಛಾಯಪ್ಪ, ಹೆಸ್ಕಾಂ ಸಿಬ್ಬಂದಿ, ಯಲ್ಲಾಪುರ}





Prathidvani Yellapura