

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ನಂದೊಳ್ಳಿ ಗ್ರಾ.ಪಂ ವ್ಯಾಪ್ತಿಯ ಅಣಲಗಾರ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಅದನ್ನು ಸರಿಯಾಗಿ ಮಾಡಿಸಿಕೊಡಬೇಕು. ದುರಸ್ತಿ ಆಗದೇ ಬಾಕಿ ಉಳಿದ ರಸ್ತೆಯ ಡಾಂಬರೀಕರಣಕ್ಕೆ ಅನುದಾನ ನೀಡುವಂತೆ ಆಗ್ರಹಿಸಿ ಗ್ರಾಮಸ್ಥರು ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಸಲ್ಲಿಸಿದರು.

ಈಗಾಗಲೇ 90 ಲಕ್ಷ ರೂ ವೆಚ್ಚದಲ್ಲಿ 2.5 ಕಿಮೀ ರಸ್ತೆ ಕಾಮಗಾರಿ ಆಗಿದ್ದು, ಅದು ಕಳಪೆಯಾಗಿದೆ. ಈಗಾಗಲೇ ಅಧಿಕಾರಿಗಳಿಗೆ ದೂರಲಾಗಿದೆ. ಗುತ್ತಿಗೆದಾರರಿಗೆ ಬಿಲ್ ತಡೆ ಹಿಡಿಯುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಮಳೆಗಾಲದ ನಂತರ ಮತ್ತೊಮ್ಮೆ ಡಾಂಬರೀಕರಣದ ಭರವಸೆಯನ್ನೂ ನೀಡಿದ್ದಾರೆ.

ಈ ಕುರಿತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಸೂಳಗಾರ ಕ್ರಾಸ್ ವರೆಗೆ ಮಾತ್ರ ರಸ್ತೆ ದುರಸ್ತಿ ಆಗಿದ್ದು, ಮುಂದೆ ಅಣಲಗಾರವರೆಗೆ ಡಾಂಬರೀಕರಣಕ್ಕೆ ಅನುದಾನ ನೀಡಬೇಕು. ನಾಳಶೇರ ರಸ್ತೆಯ ದುರಸ್ತಿಗೂ ಅನುದಾನ ಮಂಜೂರಿ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಹೆಬ್ಬಾರ್, ಕಳಪೆ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ಬಿಲ್ ತಡೆ ಹಿಡಿಯುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಮಳೆಗಾಲದ ನಂತರ ರಸ್ತೆ ಕಾಮಗಾರಿಗೆ ಅಗತ್ಯ ಅನುದಾನ ಮಂಜೂರಿ ಮಾಡುವುದಾಗಿ ಭರವಸೆ ನೀಡಿದರು.
ನಂದೊಳ್ಳಿ ಗ್ರಾ.ಪಂ ಮಾಜಿ ಸದಸ್ಯ ನಾರಾಯಣ ಭಟ್ಟ ಭಟ್ರಕೇರಿ, ಗ್ರಾಮಸ್ಥರಾದ ಸೀತಾರಾಮ ಭಟ್ಟ ತೆಂಗಿನಜಡ್ಡಿ, ಬಾಲವಂದ್ರ ಭಟ್ಟ ಭಟ್ರಕೇರಿ, ಸುಬ್ರಹ್ಮಣ್ಯ ಭಾಗ್ವತ ಗುಡ್ನಮನೆ, ಶ್ರೀಧರ ಭಟ್ಟ ವೈದಿಕರಮನೆ ಇದ್ದರು.

Prathidvani Yellapura