Breaking News

ಅರಬೈಲ್ ಘಟ್ಟದಲ್ಲಿನ ಅಪಘಾತಗಳನ್ನು ನಿರ್ಲಕ್ಷಿಸದಿರಿ ಅಪಾಯ ಕಾದಿದೆ ಎಚ್ಚರ..!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ – ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ನಿಸರ್ಗಸೌಂದರ್ಯಕ್ಕೆ ಹೆಸರಾಗಿದೆ ಬೆಟ್ಟ ಗುಡ್ಡಗಳೆಲ್ಲ ಹಸಿರಾಗಿದೆ. ಜಲಪಾತಗಳ ಒಡಲು ಅರಬೈಲ್ ಘಟ್ಟ ಇಳಿದರೆ ಕರಾವಳಿ ಕಡಲು ಇಷ್ಟೆಲ್ಲಾ ವರ್ಣನೆಯ ನಡುವೆ ಅರಬೈಲ್ ಘಟ್ಟವೆಂಬ ಅಪಘಾತ ವಲಯವು ಸಹ ಇಲ್ಲೆ ಇದೆ ಅತ್ಯಂತ ನಿರ್ಲಕ್ಷಕ್ಕೊಳಗಾದ ಹೆದ್ದಾರಿಯು ಇಲ್ಲೆ ಇದೆ. ಸರ್ಕಾರ ಇದಕ್ಕೊಂದು ಗಂಭೀರ ಪರಿಹಾರ ಕಂಡುಕೊಳ್ಳಬೇಕಿದೆ ಇಲ್ಲವಾದಲ್ಲಿ ಮುಂದೊಂದು ದಿನ ದೇಶವೆ ಬೆಚ್ಚಿಬೀಳುವ ಅತಿದೊಡ್ಡ ದುರಂತ ಇದೇ ಘಟ್ಟದಲ್ಲಿ ಸಂಭವಿಸಿದರೆ ಆಶ್ಚರ್ಯ ಪಡಬೇಕಿಲ್ಲ.


ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಗ್ಯಾಸ್ ತುಂಬಿದ್ದ ಟ್ಯಾಂಕರ್ ಒಂದು ಅರಬೈಲ್ ಘಟ್ಟದಲ್ಲಿ ಮತ್ತೊಂದು ಲಾರಿಗೆ ಡಿಕ್ಕಿಯಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ಬಿದ್ದು ಆತಂಕ ಸೃಷ್ಟಿ ಮಾಡಿತ್ತು. ಅಗ್ನಿಶಾಮಕ ದಳದ ಮತ್ತು ಪೊಲೀಸರ ಕಾರ್ಯಾಚರಣೆಯಿಂದ ಯಾವುದೆ ಅವಘಡ ಸಂಭವಿಸದೆ ಪ್ರಕರಣ ಪಾರಾಯಿತು. ಆದರೆ ಇದರಿಂದ ಒಂದು ಗಂಭೀರ ಪ್ರಶ್ನೆಯಂತು ತಾಲೂಕಿನ ಜನರಲ್ಲಿ ಉಳಿದುಹೋಯಿತು.
ಸರಕುತುಂಬಿ ಸಾಗುವಲಾರಿ, ಬೈಕ್, ಪ್ರವಾಸಿಗರ ವಾಹನ ಇನ್ನಿತರೆ ಸಾರಿಗೆ ಅಪಘಾತಕ್ಕೀಡಾಗುವುದಕ್ಕು ಗ್ಯಾಸ್ ಟ್ಯಾಂಕರ್ ಅಪಘಾತಕ್ಕು ಅಜಗಜಾಂತರ‌ವ್ಯತ್ಯಾಸವಿದೆ ಬೇರೆಲ್ಲಾ ಅಪಘಾತದಲ್ಲಿ ವಾಹನಗಳು, ಒಂದಷ್ಟು ಸರಕು,ಎಣಿಸುವಷ್ಟು ಗಾಯಗಳು ಅದು ಮೀರಿದರೆ ಕೆಲವರ ಪ್ರಾಣಹಾನಿಯಾಗಬಹುದು ( ಇಂತಹ ಅವಘಡಗಳು ಆಗದಿರಲಿ) ಆದರೆ ಗ್ಯಾಸ್ ಟ್ಯಾಂಕರ್ ನಂತಹ ಅವಘಡದಲ್ಲಿ ಅರಬೈಲ್ ಘಟ್ಟದ ಬೆಲೆ ಬಾಳುವ ಕಾಡು ಎಣಿಸಲಾಗದಷ್ಟು ವನ್ಯಜೀವಿಗಳು ಅಕ್ಕ ಪಕ್ಕದ ಗ್ರಾಮಗಳ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿ ನರಕಯಾತನೆ ಅನುಭವಿಸಬೇಕಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಬರ್ಗಿ ದುರಂತ ಎಂದು ಮರೆಯಲಾಗದ ನೆನಪನ್ನು ಬಿತ್ತಿ ಹೋಗಿದೆ ಮತ್ತೊಮ್ಮೆ ಎಂದಿಗು ಮರುಕಳಿಸದಿರಲಿ.

ಸಾಂದಾರ್ಭಿಕ ಚಿತ್ರ


ಈ ಎಲ್ಲಾ ಕಾರಣಗಳಿಂದ ಟ್ಯಾಂಕರ್ ಅಪಘಾತಗಳನ್ನು ಲಘುವಾಗಿ ಪರಿಗಣಿಸದಿರಿ ಪತ್ರಿಕೆಗೊಂದು ಸುದ್ದಿ , ಅಪಘಾತಗಳ ಸಂಖ್ಯೆಗೆ ಮತ್ತೊಂದು ಅಂಕೆ ಸೇರ್ಪಡೆ , ಪೊಲೀಸ್ ಠಾಣೆಯಲೊಂದು ಪ್ರಕರಣ ದಾಖಲು ಎಂದು ವಿಷಯವನ್ನು ಲಘುವಾಗಿ ಪರಿಗಣಿಸದೆ ಜಿಲ್ಲಾಡಳಿತ ಎಚ್ಚೆತ್ತು ಮೊದಲು ತಜ್ಞರ ತಂಡ ಕರೆಸಿ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯ ಸ್ಥಿತಿ ಗತಿಯನ್ನು ಅವಲೋಕಿಸಿ. ಅರಬೈಲ್ ಘಟ್ಟ ಪ್ರಾರಂಭಕ್ಕು ಮುನ್ನ ಮತ್ತು ಕರಾವಳಿ ಭಾಗದಿಂದ ಬಾಳೆಗುಳಿ ಬಳಿ ಇಂತಹ ಅಪಾಯಕಾರಿ ಟ್ಯಾಂಕರ್ ಸಾಗಿಸುವ ಚಾಲಕರಿಗೆ ಘಟ್ಟದ ಸಂಪೂರ್ಣ ಮಾಹಿತಿಯನ್ನು ಎಚ್ಚರಿಕೆ ರೂಪದಲ್ಲಿ ನೀಡುವ ವ್ಯವಸ್ಥೆ ಆಗಬೇಕಿದೆ.


ಗ್ಯಾಸ್ ಟ್ಯಾಂಕರ್ ಅಪಘಾತವಾದಾಗ ಗ್ಯಾಸ್ ಸೋರಿಕೆ ತಡೆದು ಮುಂದಿನ ಪ್ರಕ್ರಿಯೆ ಸಾಗಬೇಕಿರುವುದರಿಂದ ಅಂತಹ ತಂತ್ರಜ್ಞತೆ ತಿಳಿದಿರುವವರನ್ನು ಅಗ್ನಿಶಾಮಕ ದಳದ ತಂಡದಲ್ಲಿ ಸೇರಿಸಿಕೊಳ್ಳುವುದು ಉತ್ತಮವಾಗಿದೆ. ಸದ್ಯ ಇಂತಹ ವಿದ್ಯೆ ಬಲ್ಲ ತಂಡ ಮಂಗಳೂರು, ಬೆಳಗಾವಿಗಳಲ್ಲಿದ್ದು ಅಪಘಾತ ಸಂಭವಿಸುವ ಸ್ಥಳಗಳಿಗೆ ಹತ್ತಿರದಲ್ಲಿರದೆ ಇರುವುದು ದುರಂತವಾಗಿದೆ. ಇಂತಹ ಸಂದರ್ಭಗಳಲ್ಲಿ ಸಂಪೂರ್ಣ ವಾಹನ ಸಂಚಾರ ನಿರ್ಭಂದಿಸುವುದರಿಂದ ಬೇರೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಿರುತ್ತದೆ. ಈ ಎಲ್ಲಾ ವಿಚಾರಗಳನ್ನು ನೋಡಿದರೆ ಸರ್ಕಾರ ಶೀಘ್ರವಾಗಿ ಅರಬೈಲ್ ಘಟ್ಟದಲ್ಲಿ ಆಗುತ್ತಿರುವ ಅಪಘಾತಗಳನ್ನು ತಪ್ಪಿಸಲು ಉತ್ತಮ ಆಲೋಚನೆಯೊಂದಿಗೆ ಉತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಿದೆ.


ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದು ಚತುಷ್ಪಥ ಹೆದ್ದಾರಿ ನಿರ್ಮಾಣ ತ್ವರಿತಗತಿಯಲ್ಲಿ ಸಾಗಬೇಕಿದೆ. ನೆನೆಗುದಿಗೆ ಬಿದ್ದಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಬೇಕಾದ ಪೂರಕ ವಾತಾವರಣ ಸರ್ಕಾರ ಆದ್ಯತಾ ದೃಷ್ಟಿಯಿಂದ ಕೈಗೆತ್ತಿಕೊಳ್ಳಬೇಕಿದೆ. ಇದೆಲ್ಲದರ ಮದ್ಯೆ ಪರಿಸರವಾದಿಗಳ ಒಣ ಚರ್ಚೆ ಬದಿಗಿರಿಸಿ ಈ ಪ್ರಯತ್ನಗಳು ಸಾಗಬೇಕಿದೆ. ಇದರಲ್ಲಿ ಜನಪ್ರತಿನಿಧಿಗಳ ಇಚ್ಚಾಶಕ್ತಿಯು ಸಹ ಅಗತ್ಯವಾಗಿದ್ದು ಪ್ರಾಮಾಣಿಕ ಪ್ರಯತ್ನ ಪಕ್ಷಾತೀತವಾಗಿ ಜಿಲ್ಲೆಯ ಎಲ್ಲಾ ಹಂತದ ಜನಪ್ರತಿನಿಧಿಗಳ ಒಗ್ಗಟ್ಟಿನ ಒತ್ತಡ ಆಗಬೇಕಿದೆ.


ಒಟ್ಟಿನಲ್ಲಿ ಬಾಯಾರಿಕೆಯಾದಾಗ ಬಾವಿತೋಡುವುದನ್ನು ಇನ್ನಾದರು ಬಿಟ್ಟು ಬಾಯಾರಬಹುದೆಂಬ ದೂರ ದೃಷ್ಟಿಯಿಂದ ಬಾವಿ ನಿರ್ಮಿಸುವ ಆಲೋಚನೆ ಮಾಡಬೇಕಿದೆ ಅದರಂತೆ ಸುಗಮ ಸಂಚಾರಕ್ಕೆ ಪ್ರಯತ್ನ ಸಾಗಬೇಕಿದೆ ಇದರಿಂದ ಕೋಟ್ಯಾಂತರ ಚಾಲಕರು,ಸಹಾಯಕರು ತಮ್ಮ ವೃತ್ತಿಯಲ್ಲಿ ನೆಮ್ಮದಿ ಮತ್ತು ದೈರ್ಯದ ಚಾಲನೆಗೆ ಅನುವಾಗಲಿದೆ. ಸಂಪದ್ಬರಿತ ಅರಣ್ಯ ಉಳಿಯಲಿದೆ. ನಾಗರಿಕರ ಜೀವಕ್ಕೆ ಕುಂದುಂಟಾಗದೆ ” ಅಪಘಾತ ಬೆಟ್ಟ ಅರಬೈಲ್ ಘಟ್ಟ” ಎಂಬ ಅಪಖ್ಯಾತಿಯಿಂದ ಪಾರಾಗಬಹುದಾಗಿದೆ.

ಪೊಲೀಸ್ ಮಾಹಿತಿ ಪ್ರಕಾರ. 2020 ರಲ್ಲಿ 69 ಸಾಮಾನ್ಯ ಅಪಘಾತವಾಗಿದ್ದು 24ಮಾರಣಾಂತಿಕ ಅಪಘಾತಗಳಾಗಿದೆ 2021 ರಲ್ಲಿ 85 ಸಾಮಾನ್ಯ ಅಪಘಾತ ಸಂಭವಿಸಿದೆ. 20ಮಾರಣಾಂತಿಕ ಅಪಘಾತವಾಗಿದೆ
2022 ರಲ್ಲಿ 95 ಸಾಮಾನ್ಯ ಅಪಘಾತ ಸಂಭವಿಸಿದರೆ
25 ಮಾರಣಾಂತಿಕ ಅಪಘಾತಗಳಾಗಿವೆ.
2023 ರ ಪ್ರಸ್ತುತ ದಿನದವರೆಗೆ 43ಸಾಮಾನ್ಯಅಪಘಾತವಾಗಿದ್ದು
8 ಮಾರಣಾಂತಿಕ ಅಪಘಾತಗಳು ಸಂಭವಿಸಿದೆ.
ಈ ಮೇಲಿನ ಅಪಘಾತಗಳ ಅಂಕಿ ಅಂಶಗಳಲ್ಲಿ ಅತ್ಯಂತ ಅಪಯಕಾರಿ ಅಪಘಾತಗಳು ಸೇರಿವೆ.
• ಪಟ್ಟಣದಲ್ಲಿ ಸಾಗುತ್ತಿದ್ದ ಗ್ಯಾಸ್ ಕೆಮಿಕಲ್ ಟ್ಯಾಂಕರ್ ಇದ್ದಕಿದ್ದಂತೆ ಚಲಿಸುತ್ತಿರುವಾಗಲೆ ಗ್ಯಾಸ್ ಸೋರಿಕೆಯಾಗಿ ಆತಂಕ ಸೃಷ್ಟಿಯಾಗಿತ್ತು.
• ಮತ್ತೊಮ್ಮೆ ಆರ್ತಿಬೈಲ್ ಘಟ್ಟದಲ್ಲಿ ಕೆಮಿಕಲ್ ಸೋರಿಕೆಯಾಗಿ ಅಲ್ಲೆ ಹರಿಯುತ್ತಿದ್ದ ನೀರಿಗೆ ಬಿದ್ದ ಪರಿಣಾಮ ಎಲ್ಲೆಲ್ಲು ಬೆಂಕಿ ಹೋತ್ತಿಉರಿದು ಭಯ ಹುಟ್ಟಿಸಿತ್ತು. •ಪೆಟ್ರೋಲ್ ಮತ್ತು ಡೀಸೆಲ್‌ ಟ್ಯಾಂಕರ್ ಗಳು ಅದೆಷ್ಟೊ ಅರಬೈಲ್ ಘಟ್ಟದಲ್ಲಿ ಅಪಘಾತಕ್ಕೀಡಾಗಿವೆ.

ಇದೆಲ್ಲವನ್ನು ತಡೆಗಟ್ಟಲು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿ ಅನಾಹುತಗಳನ್ನು ತಪ್ಪಿಸಬೇಕಿದೆ ಆಗ ಸುಗಮ ಮತ್ತು ಸುರಕ್ಷಿತ ಸಂಚಾರ ಸಾದ್ಯವಿದೆ.


ಯಾವುದೇ ವಾಹನದ ಚಾಲಕರು ಗಡಿಬಿಡಿ ಚಾಲನೆಗೆ ಎಡೆಮಾಡದೆ ಇಂತಹ ಘಟ್ಟ ಪ್ರದೇಶದಲ್ಲಿ ತಾಳ್ಮೆ ಮತ್ತು ಜಾಗರೂಕರಾಗಿ ವಾಹನ ಚಲಾಯಿಸಬೇಕಿದೆ. ಸದ್ಯ ಮಳೆ ಪ್ರಾರಂಭವಾಗಿದ್ದು ಎಚ್ಚರಿಕೆಯಿಂದ ಚಲಿಸಬೇಕಿದೆ. ಅತಿವೇಗ ಜೀವಕ್ಕು ಜೀವನಕ್ಕು ಮಾರಕವಾಗಿದೆ. ಮುಂಜಾನೆ ಮಂಜಿನ ಸಮಯದಲ್ಲಿ ಹೆಚ್ಚು ಮಳೆ ಬೀಳುವ ಸಂದರ್ಭದಲ್ಲಿ ರಸ್ತೆ ಮಸುಕಾದಾಗ ಸಾದ್ಯವಾದಷ್ಟು ವಾಹನ ಚಲಾಯಿಸದೆ‌ ನಿಂತು ಸಾಗಿ. ಒಟ್ಟಿನಲ್ಲಿ ನಿಮಗಾಗಿ ನಿಮ್ಮ ಕುಟುಂಬ ಕಾಯುತ್ತಿರುತ್ತದೆ ಜವಾಬ್ದಾರಿಯುತ ಸುರಕ್ಷಿತ ಚಾಲನೆ ಎಲ್ಲರಿಗು ಒಳಿತು.
ರಂಗನಾಥ ನೀಲಮ್ಮನವರ್
ಪಿ.ಐ.ಯಲ್ಲಾಪುರ


ತಾಲೂಕಿನಲ್ಲಿ ಹಾದು ಹೋಗಿರುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಪ್ರಮುಖವಾಗಿ ಚತುಷ್ಪಥ ಹೆದ್ದಾರಿಯಾಗಿ ಮಾರ್ಪಾಡಾಗಬೇಕಿದೆ. ಮೊನ್ನೆ ನಡೆದ ಗ್ಯಾಸ್ ಟ್ಯಾಂಕರ್ ಬಿದ್ದ ಘಟನೆಯಿಂದ ಜಿಲ್ಲಾಡಳಿತ ಜಾಗೃತಗೊಂಡು ಇಂತಹ ಅಪಾಯಕಾರಿ ಅಪಘಾತವಾದಾಗ ಸುರಕ್ಷತೆಗಾಗಿ ಜಿಲ್ಲೆಯಲ್ಲಿಯೆ ಒಂದು ರೆಸ್ಕ್ಯೂ ಟೀಮ್ ಇಡಬೇಕಿದೆ. ಸದ್ಯ ವಾಹನಗಳ ಸಾಗಾಟ ಹೆಚ್ಚಾಗಿದ್ದು ಹೆದ್ದಾರಿ ನಿರ್ವಹಣೆ ಕಾಲಕಾಲಕ್ಕೆ ಆಗಬೇಕಿದೆ. ಗ್ಯಾಸ್ ಟ್ಯಾಂಕರ್ ಚಾಲಕರಿಗೆ ಘಟ್ಟದಲ್ಲಿನ ಸಂಚಾರದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತಾಗಬೇಕಿದೆ.
ಸುಜಯ್ ಮರಾಠಿ
ಯ.ತಾ.ಲಾ.ಚಾ.ಮಾ ಸಂಘದ ಕಾರ್ಯದರ್ಶಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *