
ಯಲ್ಲಾಪುರ,ಯಲ್ಲಾಪುರ : ಪಟ್ಟಣದ ಹೊರವಲಯದ ಹುಬ್ಬಳ್ಳಿ ಮಾರ್ಗದಲ್ಲಿ ನ್ಯೂ ಮಲಬಾರ್ ಹೋಟೆಲ್ ಸಮೀಪ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಒಂದು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟು 20 ಕ್ಕೂ ಅಧಿಕ ಜನರಿಗೆ ಗಾಯಗಳಾದ ಘಟನೆ ಶನಿವಾರ ಮುಂಜಾನೆ ನಡೆದಿದೆ.

ಇಂಟರ್‌ಸಿಟಿ ಟ್ರಾವೆಲ್ಸ್ ಹೆಸರಿನ ಖಾಸಗಿ ಲಕ್ಸುರಿ ಬಸ್ ಒಂದು ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯ ನ್ಯೂ ಮಲಬಾರ್ ಹೋಟೆಲ್ ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ರಸ್ತೆಯ ಪಕ್ಕ ಅಡ್ಡಲಾಗಿ ಬಿದ್ದಿದೆ. ಬಸ್ ಬೆಂಗಳೂರಿನಿಂದ ಗೋವಾಕ್ಕೆ ಪ್ರನಿತ್ಯ ಸಂಚರಿಸುವ ಬಸ್ ಇದಾಗಿದ್ದು ಅಪಘಾತವಾದಾಗ ಬಸ್ಸಿನಲ್ಲಿ25-30 ಜನ ಪ್ರಯಾಣಿಕರಿದ್ದು 2೦ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.

ಅಪಘಾತದ ರಭಸಕ್ಕೆ ಚಾಲಕ ಕೆ.ಆರ್ ಪೇಟೆ ಮೂಲದ ಮಾದಾಪುರ ಕೊಪ್ಪಲಿನ ಕಿರಣಕುಮಾರ ಎಂ.ಡಿ(26) ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.

ವಿಷಯ ತಿಳಿಯುತ್ತಲೇ ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಧಾವಿಸಿ 108 ಅಂಬುಲೆನ್ಸ್ ಸಹಾಯದಿಂದ ಬಸ್ಸಿನಲ್ಲಿದ್ದ ಗಾಯಗೊಂಡ ಪ್ರಯಾಣಿಕರನ್ನು ಯಲ್ಲಾಪುರ ತಾಲೂಕು ಆಸ್ಪತ್ರೆಗೆ ಸಾಗಿಸಿದ್ದು ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ.
ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
Prathidvani Yellapura