

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಕೇರಿ ಗೌಳಿವಾಡದಲ್ಲಿ ಶಾಲಾ ಮಕ್ಕಳ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸ ಲಾಗುತ್ತಿದೆ.
ಶಾಲೆಯ ಆವರಣದಲ್ಲಿ ಕಳೆದ ವರ್ಷ ವಿಧಾನ ಪರಿಷತ್ತಿನ ಸದಸ್ಯ ಶಾಂತರಾಮ್ ಸಿದ್ದಿ ಹಾಗೂ ಅರಣ್ಯ ಇಲಾಖೆಯ ನೇತೃತ್ವದಲ್ಲಿ ಸುಮಾರು ಐವತ್ತರಿಂದ ಅರವತ್ತು ಗಿಡಗಳನ್ನು ನೆಡಲಾಗಿತ್ತು. ಅವುಗಳನ್ನು ಉಳಿಸಿ ಬೆಳೆಸಲು ಶಿಕ್ಷಕರಾದ ಗಂಗಾಧರ್ ಲಮಾಣಿ ಹಾಗು ಶೋಭಾ ಗುನಗಿ, ವಾಣಿ ನಾಯ್ಕ ಸೇರಿ ಶಾಲೆಯಲ್ಲಿ ಹೊಸ ಆಲೋಚನೆ ಯನ್ನು ಹುಟ್ಟು ಹಾಕಿ “ನನ್ನ ಗಿಡ ನನ್ನ ಉಸಿರು” ಎಂಬ ಶೀರ್ಷಿಕೆ ಅಡಿ ಪ್ರತಿ ಮಗುವಿಗೆ ಒಂದೊಂದು ಗಿಡವನ್ನು ದತ್ತು ನೀಡಿದ್ದಾರೆ.

ಶಿಕ್ಷಕರು ಮಕ್ಕಳಿಗೆ ಗಿಡ ಮರಗಳ ಮಹತ್ವ ಮತ್ತು ಗಿಡ-ಮರಗಳನ್ನು ಕಡಿಯುವುದರಿಂದ, ಪರಿಸರದ ಮೇಲೆ ಆಗುವ ಕೆಟ್ಟ ಪರಿಣಾಮ,ಹಾಗೂ ಅವುಗಳನ್ನು ರಕ್ಷಿಸಲು ಮಾಡಬೇಕಾದ ಕಾಳಜಿ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದ್ದಾರೆ.

ಮಕ್ಕಳು ತಮಗೆ ನೀಡಿದ ದತ್ತು ಗಿಡಗಳಿಗೆ ವರ್ಷ ಪೂರ್ತಿ ನೀರು ಗೊಬ್ಬರ ಹಾಕುವುದಲ್ಲದೆ ಮಕ್ಕಳು ತಮ್ಮ ಹುಟ್ಟು ಹಬ್ಬವನ್ನು ತಮ್ಮ ತಮ್ಮ ಗಿಡ ದಡಿಯಲ್ಲಿಯೇ ಬಂದು ಕಡ್ಡಾಯವಾಗಿ ಆಚರಿಸಿ ಕೊಳ್ಳಬೇಕು. ಮಕ್ಕಳು ತಮ್ಮ ಹುಟ್ಟು ಹಬ್ಬದ ದಿನದಂದು ತಾವು ದತ್ತು ಪಡೆದ ಗಿಡಗಳ ಸುತ್ತಲು ಸ್ವಚ್ಛಗೊಳಿಸಿ ಅವುಗಳಿಗೆ ನೀರು ಗೊಬ್ಬರ ಹಾಕಿ ತಾವು ತಂದ ಕೇಕನ್ನು ಕತ್ತರಿಸುತ್ತಾರೆ. ಎಲ್ಲ ಮಕ್ಕಳು ಇಂದಿನಿಂದ ನಾವು ಗಿಡ ಮರಗಳನ್ನು ರಕ್ಷಿಸುತ್ತೇವೆ ಮತ್ತು ಬೆಳೆಸುತ್ತೇವೆ, ಪರಿಸರದ ಕಾಳಜಿಯನ್ನು ಮಾಡುತ್ತೇವೆ ಎಂದು ಪ್ರಮಾಣ ವಚನವನ್ನು ಮಾಡುತ್ತಾ ಇದು”ನನ್ನ ಗಿಡ ನನ್ನ ಉಸಿರು” ಎಂದು ಘೋಷಣೆಗಳನ್ನು ಕೂಗುತ್ತಾರೆ. ನಂತರ ಪರಸ್ಪರ ಶುಭಾಶಯಗಳನ್ನು ಕೋರಿ ಚಾಕಲೇಟು , ಕೇಕ್ ಅನ್ನು ಹಂಚಿಕೊಂಡು ಅಲ್ಲಿಂದ ಸಂತೋಷದಿಂದ ತರಗತಿ ಕೋಣೆಗೆ ತೆರಳುತ್ತಾರೆ.


Prathidvani Yellapura