Breaking News

ಎರಡು ವರ್ಷಗಳಿಂದ ನೀಡದ ಗ್ರಾಮದೇವಿ ಜಾತ್ರಾ ಲೆಕ್ಕಾಚಾರ – ಗುಳುಂ ಆದ ಲೆಕ್ಕ- ತನಿಖೆಗೆ ಆಗ್ರಹ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಯಲ್ಲಾಪುರ :  ಕೊನೆಗೂ ಗ್ರಾಮದೇವಿ ಜಾತ್ರೆ ಲೆಕ್ಕಾಚಾರ ಮಂಡಿಸಿದ ಪ.ಪಂ ಅಧಿಕಾರಿಗಳು ; ೧೧ ಲಕ್ಷಕ್ಕೂ ಅಧಿಕ ಹಣದ ಲೆಕ್ಕವೇ ಇಲ್ಲ ! ಯಲ್ಲಾಪುರ ಸೀಮೆಯ ಶಕ್ತಿ ಪೀಠ ಗ್ರಾಮದೇವಿಯರೆಂದರೆ ಎಲ್ಲಿಲ್ಲದ ಭಯಭಕ್ತಿ ಅಂತಹ ಆಧಿಶಕ್ತಿ ಸ್ವರೂಪಿಣಿ ಜಾತ್ರೆಯ ದೇವಿಯರ ಹೆಸರಿನ ದುಡ್ಡನ್ನು ಗುಳುಂ ಮಾಡಿದ್ದಾರೆಂದರೆ ಏನು ಕಥೆ..????.

ಪ.ಪಂ ಸಭಾ ಭವನದಲ್ಲಿ ಬುಧವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಕಳೆದೆರಡು ವರ್ಷಗಳಿಂದ ಮಂಡಿಸದಿರುವ ಗ್ರಾಮದೇವಿ ಜಾತ್ರಾ ಲೆಕ್ಕಾಚಾರ ಮಂಡಿಸಲಾಯಿತು. ಮೇಲ್ನೋಟಕ್ಕೆ 11 ಲಕ್ಷಕ್ಕೂ ಅಧಿಕ ಹಣ ಲೆಕ್ಕಕ್ಕೇ ಸಿಗದಿರುವುದರ ಕುರಿತು ತನಿಖೆಗೆ ಠರಾಯಿಸಲಾಯಿತು.
2023ರಲ್ಲಿ ನಡೆದ ಯಲ್ಲಾಪುರ ಗ್ರಾಮದೇವಿ ಜಾತ್ರಾ ಸಂದರ್ಭದಲ್ಲಿ ಅಂಗಡಿ ಮಳಿಗೆಗಳನ್ನು ಹಾಕಲು ಪ.ಪಂ ವತಿಯಿಂದ ಹರಾಜು ಪ್ರಕ್ರಿಯೆ ನಡೆದಿತ್ತು. ಈ ಸಂದರ್ಭದ ಹಣದ ಲೆಕ್ಕವನ್ನು ಕಳೆದೆರಡು ವರ್ಷಗಳಿಂದ ಕೊಡದೇ ಸತಾಯಿಸುತ್ತಾ ಅದಕ್ಕಾಗಿ ನಡೆಸಿದ ಐದು ಸಭೆಗಳೂ ವಿಫಲವಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಸದಸ್ಯರು ಧರಣಿ ಕುಳಿತ ಹಿನ್ನಲೆಯಲ್ಲಿ ಮಾ.19ರ ಬುಧವಾರ ವಿಶೇಷ ಸಾಮಾನ್ಯ ಸಭೆ ಕರೆದು ಅಧಿಕಾರಿಗಳು ಸದಸ್ಯರೆದುರು ಲೆಕ್ಕಾಚಾರ ಮಂಡಿಸಿದರು.


ಅಧಿಕಾರಿಗಳು 117 ಸ್ಥಳಗಳ ಹರಾಜಿನ ಲೆಕ್ಕ ಮಂಡಿಸಿದ್ದು ಹರಾಜಾದಾದುದು 205 ಸ್ಥಳಗಳು ಎಂಬುದು ಸದಸ್ಯ ರಾಧಾಕೃಷ್ಣರ ಆರೋಪವಾಗಿದೆ. ಅದಕ್ಕೆ ದಾಖಲೆ ಸಹಿತ ಸಭೆಗೆ ವಿಷಯ ತಿಳಿಸಿದರು. ಇದನ್ನೂ ಹೊರತು ಪಡಿಸಿ ಸ್ಥಳೀಯ ಎರಡು ಮೈದಾನಗಳ ಲೆಕ್ಕದಲ್ಲೂ ವ್ಯತ್ಯಾಸ ಕಂಡು ಬಂದಿದ್ದು ಹೊಂದಾಣಿಕೆಯೇ ಆಗುತ್ತಿಲ್ಲ. ಮತ್ತು ಚಪ್ಪರ ಫೀ ವಸೂಲಿಯಲ್ಲು ಸ್ಪಷ್ಟತೆ ಇಲ್ಲ. ಒಟ್ಟಿನಲ್ಲಿ ಎರಡು ವರ್ಷಗಳಿಂದ ಲೆಕ್ಕಾಚಾರ ನೀಡದೇ ಸತಾಯಿಸುತ್ತಾ ಬಂದ ಗ್ರಾಮದೇವಿ ಜಾತ್ರೆಯ ಹಣದ ವಹಿವಾಟು ತಾಳ ತಪ್ಪಿದಂತಿದೆ. ಇದನ್ನು ಸಭೆಯ ಸದಸ್ಯರು ಸರ್ವಾನುಮತದಿಂದ ತಿರಸ್ಕರಿಸಿ ಜಿಲ್ಲಾಧಿಕಾರಿಗಳ ಅಡಿಯಲ್ಲಿ ಆ ಸಂದರ್ಭದ ಮುಖ್ಯಾಧಿಕಾರಿ ಸಹಿತ ಸಂಬಂಧಿಸಿದ ಅಧಿಕಾರಿಗಳ ತನಿಖೆ ನಡೆಸಬೇಕೆಂದು ಠರಾಯಿಸಲಾಯಿತು.
ನಂತರ ಮುಂದುವರೆದ ಸಭೆಯಲ್ಲಿ 2023ನೇ ಮಾರ್ಚ್ನಿಂದ 2024 ನೇ ಆಗಸ್ಟ್ ತಿಂಗಳವರೆಗಿನ ಜಮಾ-ಖರ್ಚಿಗೆ ಅನುಮೋದನೆ ಪಡೆಯಲಾಯಿತು. ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಪ್ರಾಮುಖ್ಯತೆಯ ಕುರಿತು ಸದಸ್ಯ ಸತೀಶ ಶಿವಾನಂದ ನಾಯ್ಕ ಮಂಡಿಸಿದ ವಿಷಯದ ಗಂಭೀರತೆ ಅರಿತು ಸಭೆ ಒಪ್ಪಿಗೆ ಸೂಚಿಸಿ ಠರಾಯಿಸಲಾಯಿತು. ಇನ್ನಿತರೆ ವಿಷಯಗಳ ಮೇಲೆ ಸದಸ್ಯರು ಚರ್ಚೆಯಲ್ಲಿ ಭಾಗವಹಸಿದರು.

ಪ.ಪಂ ಅಧ್ಯಕ್ಷೆ ನರ್ಮದಾ ರವಿ ನಾಯ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಮಿತ್ ಅಂಗಡಿ, ಸ್ಥಾಯಿ ಸಮಿತಿ ಅಧ್ಯಕ್ಷ ನೂತನ ನಗರ ಅಲಿ, ಮುಖ್ಯಾಧಿಕಾರಿ ಸುನಿಲ್ ಗಾವಡೆ ಉಪಸ್ಥಿತರಿದ್ದರು.


ಪ್ರತಿ ಸಭೆಯಲ್ಲೂ ಗ್ರಾಮದೇವಿ ಜಾತ್ರೆಯ ಲೆಕ್ಕಾಚಾರ ಕೇಳಿದಾಗಲೆಲ್ಲಾ ಏನಾದರೊಂದು ನೆಪ ಹೇಳುತ್ತಲೇ ಎರಡು ವರ್ಷ ಕಳೆದರು. ಮತ್ತೊಂದು ಜಾತ್ರೆ ಬರುವ ಸನಿಹದಲ್ಲಿ ಪರಿಪೂರ್ಣವಲ್ಲದ ಮತ್ತು ದೋಷಪೂರಿತ ಲೆಕ್ಕಾಚಾರದ ಪ್ರತಿ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ. 200ಕ್ಕೂ ಅಧಿಕ ಸ್ಥಳಗಳ ಹರಾಜಾಗಿರುವುದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿಯಾಗಿದ್ದೇನೆ. ಆದರೆ ಅಧಿಕಾರಿಗಳು 117 ಸ್ಥಳಗಳ ಹರಾಜಿನ ಲೆಕ್ಕ ನೀಡುತ್ತಿದ್ದಾರೆ. ಸರ್ಕಾರಿ ಮೈದಾನದ ಹರಾಜಿನ ಹಣದ ಶೇಕಡಾವಾರು ತೆರಿಗೆಯನ್ನು ಭರಣ ಮಾಡಿಕೊಂಡ ಪ.ಪಂ ಅಧಿಕಾರಿಗಳು ಖಾಸಗಿ ಮೈದಾನವೊಂದರೆ ತೆರಿಗೆ ಭರಣ ಮಾಡಿಕೊಳ್ಳುವಾಗ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನೇ ಪಡೆದಿಲ್ಲ. ಒಟ್ಟಿನಲ್ಲಿ ಸ್ಥಳದ ಹರಾಜಿಲ್ಲೇ 11,88,600 ರೂ ಗೋಲ್‌ಮಾಲ್ ಆಗಿದೆ. – ರಾಧಾಕೃಷ್ಣ ನಾಯ್ಕ, ಶಿವಾಜಿನಗರ ವಾರ್ಡ್ ಸದಸ್ಯ


ಬೇಸಿಗೆ ಸಮೀಪಿಸಿದ್ದು ಪ್ರಾರಂಭದ ಹಂತದಲ್ಲೇ ನೀರಿನ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸಬೇಕಿದೆ. ನಳ ಇರದೇ ನೀರು ಪಡೆಯುತ್ತಿರುವ ಮನೆಗಳನ್ನು ಗುರುತಿಸಿ ನಳ ಅಳವಡಿಸಬೇಕಿದೆ. ಒಡೆದ ಪೈಪುಗಳನ್ನು ಸರಿಪಡಿಸಬೆಕಿದೆ. ನೀರು ಸರಬರಾಜಿಗೆ ಸಂಬಂಧಿಸಿದ ದುರಸ್ಥಿ ಕಾರ್ಯಗಳನ್ನು ಶೀಘ್ರವಾಗಿ ಮಾಡಬೇಕಿದೆ. ಅಲ್ಲದೇ ನೀರು ಅತ್ಯಮೂಲ್ಯವಾಗಿದ್ದು ಪೋಲಾಗದಂತೆ ತಡೆಯಲು ವಾರ್ಡ್ ಮಟ್ಟದಲ್ಲಿ ಸಮಿತಿ ರಚಿಸಿ ಅದರ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ ಮತ್ತು ಪ.ಪಂ ಅಧ್ಯಕ್ಷರು, ಮುಖ್ಯಾಧಿಕಾರಿಗಳು 15 ದಿನಕ್ಕೊಮ್ಮೆ ಸಮಿತಿಯಿಂದ ಮಾಹಿತಿ ಪಡೆಯಬೇಕಿದೆ. – ಸತೀಶ್ ಶಿವಾನಂದ ನಾಯ್ಕ, ಮಂಜುನಾಥನಗರ ವಾರ್ಡ್ ಸದಸ್ಯ


ಅಧಿಕಾರಿಗಳು ನೀಡಿರುವ ಜಾತ್ರೆತ ಲೆಕ್ಕಾಚಾರ ಮೇಲ್ನೋಟಕ್ಕೆ ಎಲ್ಲವೂ ಗೊಂದಲಮಯವಾಗಿದ್ದು ಯಾವ ಸ್ಪಷ್ಟತೆಯೂ ಇಲ್ಲ. ಚಪ್ಪರ ಫೀ ವಸೂಲಿ ಸಮಿತಿಯ ಸದಸ್ಯನೂ ನಾನಾಗಿದ್ದು 96,೦೦೦ರೂ ವಸೂಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದು ಅದರ ಹಿಂದಿನ ಜಾತ್ರೆಯಲ್ಲಿ ವಸೂಲಾದ ಪ್ರಮಾಣಕ್ಕೂ ಈ ಜಾತ್ರೆಯ ವಸೂಲಿಗೂ ಅಜಗಜಾಂತರ ವ್ಯತ್ಯಾಸವಿದ್ದು ಅಧಿಕಾರಿಗಳು ನೀಡುತ್ತಿರುವ ಲೆಕ್ಕಾಚಾರವೇ ದೋಷಪೂರಿತವಾಗಿದೆ. ಇದು ತನಿಖೆಗೆ ಯೋಗ್ಯವಾಗಿದ್ದು ಸತ್ಯ ಹೊರಬರಲಿ. – ಸೋಮೇಶ್ವರ ನಾಯ್ಕ, ರವೀಂದ್ರನಗರ ವಾರ್ಡ್ ಸದಸ್ಯ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *